×
Ad

ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಿಸದ ರಾಜ್ಯ ಸರ್ಕಾರ; ಮೃತರ ಕುಟುಂಬಕ್ಕೆ ಮರಣೋತ್ತರ ಪರೀಕ್ಷೆಯ ವರದಿಯನ್ನೂ ನೀಡಿಲ್ಲ!

Update: 2025-06-28 17:00 IST

ಬೆಂಗಳೂರು: ಮಂಗಳೂರಿನ ಕುಡಪುವಿನಲ್ಲಿ ಮಹಮ್ಮದ್ ಅಶ್ರಫ್ (39) ಅವರನ್ನು ಅಮಾನುಷವಾಗಿ ಥಳಿಸಿ ಹತ್ಯೆ ಮಾಡಿರುವ ಘಟನೆ ರಾಜ್ಯದಾದ್ಯಂತ ಆಕ್ರೋಶದ ಎಬ್ಬಿಸಿತ್ತು. ಈ ಕುರಿತು ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್, ಕರ್ನಾಟಕ ಅಸೋಸಿಯೇಷನ್ ಆಫ್ ಪ್ರೊಟೆಕ್ಷನ್ ಫಾರ್ ಸಿವಿಲ್ ರೈಟ್ಸ್ - ಕರ್ನಾಟಕ ಆಲ್ ಇಂಡಿಯಾ ಅಸೋಸಿಯೇಷನ್ ಫಾರ್ ಜಸ್ಟಿಸ್ - ಕರ್ನಾಟಕ ಜಂಟಿಯಾಗಿ ನಡೆಸಿದ ಸತ್ಯಶೋಧನೆ ವರದಿಯನ್ನು ಶನಿವಾರ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಬಿಡುಗಡೆ ಮಾಡಲಾಯಿತು.

ಈ ವರದಿಯು ಪೂರ್ಣ ಪಾಠ ಇಲ್ಲಿದೆ...

ಮಂಗಳೂರಿನ ಕುಡುಪು ಗ್ರಾಮದಲ್ಲಿ 39 ವರ್ಷದ ಮುಸ್ಲಿಂ ವ್ಯಕ್ತಿ ಮೊಹಮ್ಮದ್ ಅಶ್ರಫ್ ಅವರನ್ನು ಕ್ರೂರವಾಗಿ ಗುಂಪೊಂದು ಥಳಿಸಿ ಕೊಂದ ಘಟನೆ ಮತ್ತು ಈ ಕೊಲೆಯಲ್ಲಿ ಪೊಲೀಸ್ ಮತ್ತು ರಾಜ್ಯ ಸರ್ಕಾರದ ಪಾತ್ರ, ಹಾಗೂ ತನಿಖೆಯಲ್ಲಿನ ಲೋಪಗಳನ್ನು ಈ ವರದಿಯು ಗಮನಹರಿಸಿದೆ. ಅಶ್ರಫ್ ಅವರ ಹತ್ಯೆಯು ದಕ್ಷಿಣ ಕನ್ನಡ ಪ್ರದೇಶದಲ್ಲಿ ಕಾನೂನಿನ ಆಳ್ವಿಕೆಯ ನಿರಂತರ ಅವನತಿ ಮತ್ತು ಹೆಚ್ಚುತ್ತಿರುವ ಕೋಮು ದ್ವೇಷದ ವಾತಾವರಣದ ಫಲಿತಾಂಶವಾಗಿದೆ. ಕಾನೂನನ್ನು ಎತ್ತಿಹಿಡಿಯಲು, ಜೀವಿಸುವ ಹಕ್ಕನ್ನು ಕಾಪಾಡಲು ಮತ್ತು ಮುಖ್ಯವಾಗಿ ಮಾನವ ಜೀವದ ಮೌಲ್ಯವನ್ನು ಗೌರವಿಸಲು ರಾಜ್ಯ ಸರ್ಕಾರ, ದಕ್ಷಿಣ ಕನ್ನಡದ ನಾಗರಿಕರು ಮತ್ತು ನಾಗರಿಕ ಸಮಾಜವು ತುರ್ತಾಗಿ ಮಧ್ಯಪ್ರವೇಶಿಸಬೇಕೆಂದು ಈ ವರದಿ ಆಗ್ರಹಿಸಿದೆ.

ಅಶ್ರಫ್ ಅವರ ಹತ್ಯೆಯ ಎರಡು ತಿಂಗಳುಗಳ ನಂತರವೂ, ರಾಜ್ಯ ಸರ್ಕಾರವು ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಿಸಿಲ್ಲ, ಮೃತರ ಕುಟುಂಬಕ್ಕೆ ಮರಣೋತ್ತರ ಪರೀಕ್ಷೆಯ ವರದಿಯನ್ನು ನೀಡಿಲ್ಲ ಮತ್ತು ತಹಸೀನ್ ಪೂನಾವಾಲಾ ಪ್ರಕರಣ ಮತ್ತು ಸರ್ಕಾರಿ ಆದೇಶದ ಪ್ರಕಾರ ಸಂತ್ರಸ್ತರಿಗೆ ನೀಡಬೇಕಾದ ಪರಿಹಾರವನ್ನು ಇನ್ನೂ ವಿತರಿಸಿಲ್ಲ ಎಂದು ವರದಿಯು ಹೇಳಿದೆ.

ಎಪ್ರಿಲ್ 2025 ರಲ್ಲಿ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತದಲ್ಲಿ ತೀವ್ರಗೊಂಡ ಕೋಮು ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಈ ಘಟನೆಯನ್ನು ವರದಿ ವಿವರಿಸುತ್ತದೆ. ಈ ಘಟನೆಯು ಪಹಲ್ಗಾಮ್ ದಾಳಿಯ ಕೇವಲ ಐದು ದಿನಗಳ ನಂತರ ಸಂಭವಿಸಿದೆ. ಆ ಸಮಯದಲ್ಲಿ ಕೋಮುವಾದಿ ಮಾಧ್ಯಮಗಳು ಮತ್ತು ರಾಜಕೀಯ ಭಾಷಣಗಳು ಮುಸ್ಲಿಮರ ವಿರುದ್ಧ ಭಾವನೆಗಳನ್ನು ಕೆರಳಿಸಿದ್ದವು. ಅಶ್ರಫ್ ಅವರ ಗುಂಪು ಹತ್ಯೆಯ ಸತ್ಯವನ್ನು ಹೊರಗೆಡವಲು ಮತ್ತು ಪ್ರಸ್ತುತಪಡಿಸಲು ಪಿಯುಸಿಎಲ್ - ಕರ್ನಾಟಕ, ಎಪಿಸಿಆರ್ - ಕರ್ನಾಟಕ ಮತ್ತು ಎಐಎಲ್ಎಜೆ - ಕರ್ನಾಟಕ ಎಂಬ ಮಾನವ ಹಕ್ಕುಗಳ ಸಂಘಟನೆಗಳು ಈ ಸತ್ಯಶೋಧನಾ ಕಾರ್ಯವನ್ನು ಕೈಗೊಂಡವು.

ಏಕಪಕ್ಷೀಯ ಮಾಧ್ಯಮ ಪ್ರಸಾರ, ಆಧಾರವಿಲ್ಲದ ಕೋಮುವಾದಿ ರಾಜಕೀಯ ಮಾತುಗಳು ಮತ್ತು ಪೊಲೀಸರ ತನಿಖೆಯಲ್ಲಿನ ಗಂಭೀರ ಲೋಪಗಳ ನಡುವೆಯೂ ಸತ್ಯವನ್ನು ತಿಳಿಸುವುದು ಇದರ ಉದ್ದೇಶವಾಗಿತ್ತು. ದಕ್ಷಿಣ ಕನ್ನಡ ಪ್ರದೇಶದಲ್ಲಿ ದ್ವೇಷ ಮತ್ತು ಧ್ರುವೀಕರಣವು ವ್ಯಾಪಕವಾಗಿದೆ ಎಂಬುದರ ಕಡೆಯೂ ವರದಿ ಗಮನಸೆಳೆಯುತ್ತದೆ.

ಪಹಲ್ಗಾಮ್ ದಾಳಿಯ ಕೇವಲ 5 ದಿನಗಳ ನಂತರ, ಎಪ್ರಿಲ್ 27 ರಂದು ಮಂಗಳೂರಿನ ಕುಡುಪುವಿನಲ್ಲಿ ಅಶ್ರಫ್ ಎಂಬ ವ್ಯಕ್ತಿ ಕೊಲ್ಲಲ್ಪಟ್ಟರು. ನಂತರ ನಡೆದ ಪ್ರಮುಖ ಘಟನೆಗಳನ್ನು ಈ ಕೆಳಗಿನಂತೆ ಸಂಕ್ಷಿಪ್ತವಾಗಿ ನೀಡಲಾಗಿದೆ.

►27 ಎಪ್ರಿಲ್ 2025, ರವಿವಾರ

ಮಧ್ಯಾಹ್ನ 2:00 - ಸಂಜೆ 5:00 ಗಂಟೆ: ಭಟರ್ಹಳ್ಳಿ ದೇವಸ್ಥಾನ ಮತ್ತು ಕ್ರಿಕೆಟ್ ಆಟದ ಮೈದಾನದ ನಡುವಿನ ಮಣ್ಣಿನ ರಸ್ತೆಯಲ್ಲಿ ಗುಂಪೊಂದು ಅಶ್ರಫ್ ಅವರನ್ನು ಥಳಿಸಿ ಕೊಂದಿತು.

ಸಂಜೆ ಸುಮಾರು 5:00 - 5:30 ಗಂಟೆ: ಮೃತದೇಹದ ಬಗ್ಗೆ ಪೊಲೀಸ್ ಇಲಾಖೆ ಮತ್ತು ಅಪರಾಧ ವಿಭಾಗದ ಸಿಬ್ಬಂದಿಗೆ ಮಾಹಿತಿ ನೀಡಲಾಯಿತು.

ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ), ಪೊಲೀಸ್ ಆಯುಕ್ತರು ಹಾಗೂ ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿಗಳು ಅದೇ ದಿನ ಘಟನಾ ಸ್ಥಳಕ್ಕೆ ಭೇಟಿ ನೀಡಿದರು.

ಪೊಲೀಸರು ಸ್ಥಳದಲ್ಲೇ ವಿಚಾರಣೆ ನಡೆಸಿ ಪಂಚನಾಮೆ ಮಾಡಿದರು.

ಮೃತರ ಗುರುತು ಪತ್ತೆ ಹಚ್ಚಲು ಲುಕ್ ಔಟ್ ನೋಟಿಸ್ ಹೊರಡಿಸಲಾಯಿತು.

ಅಸಹಜ ಸಾವು ಪ್ರಕರಣ (ಯುಡಿಆರ್) ದಾಖಲಿಸಲಾಯಿತು.

ಮೃತರು "ಪಾಕಿಸ್ತಾನ್ ಝಿಂದಾಬಾದ್" ಎಂದು ಘೋಷಣೆ ಕೂಗಿದ್ದಾರೆ ಎಂಬ ವದಂತಿಗಳು ಹರಡಲು ಪ್ರಾರಂಭವಾದವು.

ಸಂಜೆ ಸುಮಾರು 5:00 - 6:00 ಗಂಟೆ: ಕೊಲೆ ಮತ್ತು ಘೋಷಣೆಗಳ ಬಗ್ಗೆ ಸ್ಥಳೀಯ ಮಾಧ್ಯಮಕ್ಕೆ ಮಾಹಿತಿ ಸಿಕ್ಕಿತು.

ಸಂಜೆ 7 ಗಂಟೆಗೆ ಪೊಲೀಸ್ ಆಯುಕ್ತರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ವದಂತಿಗಳನ್ನು ಹರಡದಂತೆ ವಿನಂತಿಸಿದರು.

►28 ಎಪ್ರಿಲ್ 2025, ಸೋಮವಾರ

ಬೆಳಿಗ್ಗೆ: ಮಾಜಿ ನಗರಸಭಾ ಸದಸ್ಯರು ಮತ್ತು ಕಾಂಗ್ರೆಸ್ ಮುಖಂಡರು ಸೇರಿದಂತೆ ಸ್ಥಳೀಯ ಕಾರ್ಯಕರ್ತರ ಗುಂಪು ಪೊಲೀಸ್ ಠಾಣೆಗೆ ಭೇಟಿ ನೀಡಿತು.

ಮಾಧ್ಯಮಗಳು ತಮ್ಮ ಮೂಲಗಳ ಪ್ರಕಾರ ಇದು ಗುಂಪು ಹತ್ಯೆ ಎಂದು ಖಚಿತಪಡಿಸಿದವು.

ಸಂಜೆ 6 ಗಂಟೆಯ ನಂತರ: ಮೃತರನ್ನು ಗುರುತಿಸಲು ಹೊರಡಿಸಲಾಗಿದ್ದ ಲುಕ್ ಔಟ್ ನೋಟಿಸ್ ಮಾಧ್ಯಮವನ್ನು ತಲುಪಿತು.

ಸಂಜೆ 6:30 ಗಂಟೆ: ಗಂಭೀರವಾದ ಗಾಯಗಳೇನೂ ಕಂಡುಬಂದಿಲ್ಲ ಎಂದು ಪೊಲೀಸ್ ಆಯುಕ್ತರು ಕಾರ್ಯಕರ್ತರಿಗೆ ತಿಳಿಸಿದರು.

ಎಪ್ರಿಲ್ 28 ರ ತಡರಾತ್ರಿ ಮಂಗಳೂರು ಪೊಲೀಸ್ ಆಯುಕ್ತರು ಮಾಧ್ಯಮಗಳಿಗೆ ಹೇಳಿಕೆ ನೀಡಿ ವದಂತಿಗಳನ್ನು ಹರಡದಂತೆ ಮನವಿ ಮಾಡಿದರು ಮತ್ತು ಮೃತದೇಹ ಯಾರದ್ದೆಂದು ತಮಗೆ ತಿಳಿದಿಲ್ಲ ಎಂದು ಮಾಹಿತಿ ನೀಡಿದರು.

ರಾತ್ರಿ 10:00 - 11:30 ಗಂಟೆ: ಕುಟುಂಬದವರ ಅನುಪಸ್ಥಿತಿಯಲ್ಲಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ರಾತ್ರಿ 11:25 ಗಂಟೆ : ದೀಪಕ್ ಕುಮಾರ್ ಎಂಬುವವರ ದೂರಿನ ಆಧಾರದ ಮೇಲೆ ಪ್ರಥಮ ಮಾಹಿತಿ ವರದಿ (ಎಫ್ಐಆರ್) ದಾಖಲಿಸಲಾಯಿತು.

►29 ಎಪ್ರಿಲ್ 2025, ಮಂಗಳವಾರ

ಬೆಳಿಗ್ಗೆ 11:30 ಗಂಟೆ: ಗುಂಪು ಹತ್ಯೆಗಾಗಿ 19 ಜನರನ್ನು ಬಂಧಿಸಿದ ನಂತರ ಪೊಲೀಸ್ ಆಯುಕ್ತರ ಪತ್ರಿಕಾಗೋಷ್ಠಿ ನಡೆಯಿತು; ಮೃತದೇಹವನ್ನು ಇನ್ನೂ ಗುರುತಿಸಲಾಗಿಲ್ಲ.

ಮಧ್ಯಾಹ್ನ 2:30 ಗಂಟೆ: ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಗುಂಪು ಹತ್ಯೆಯನ್ನು ಖಚಿತಪಡಿಸಿದರು. (ಗುರುತಿಸಲಾಗದ) ವ್ಯಕ್ತಿಯೊಬ್ಬ ಸ್ಥಳೀಯ ಪಂದ್ಯದ ವೇಳೆ "ಪಾಕಿಸ್ತಾನ್ ಝಿಂದಾಬಾದ್" ಎಂದು ಕೂಗಿದ್ದರಿಂದ ಗುಂಪಿನಿಂದ ಹಲ್ಲೆಗೊಳಗಾಗಿ ನಂತರ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದರು; 10-12 ಜನರನ್ನು ಬಂಧಿಸಲಾಗಿದೆ; ಸಾರ್ವಜನಿಕರು ಶಾಂತಿ ಕಾಪಾಡಬೇಕೆಂದು ಮತ್ತು ಕಾನೂನನ್ನು ಕೈಗೆತ್ತಿಕೊಳ್ಳಬಾರದೆಂದು ಅವರು ಒತ್ತಾಯಿಸಿದರು.

ಸಂಜೆ 4:00 ಗಂಟೆ: ಮೃತದೇಹವನ್ನು ಮುಹಮ್ಮದ್ ಅಶ್ರಫ್ ಎಂಬವರದೆಂದು ಗುರುತಿಸಲಾಯಿತು; ಪೊಲೀಸರು ಕುಟುಂಬಕ್ಕೆ ತಿಳಿಸಿದರು.

ರಾತ್ರಿ 10:00 ಗಂಟೆ: ಪೊಲೀಸರು ಇನ್ನೂ 6 ಆರೋಪಿಗಳನ್ನು ಬಂಧಿಸಿದರು.

►30 ಎಪ್ರಿಲ್ 2025, ಬುಧವಾರ

ಮಧ್ಯರಾತ್ರಿ 12:30 ಗಂಟೆ: ಮುಹಮ್ಮದ್ ಅಶ್ರಫ್ ಅವರ ಕುಟುಂಬ ಮಂಗಳೂರಿಗೆ ತಲುಪಿತು.

ಬೆಳ್ಳಗಿನ ಜಾವ 3:30 ಗಂಟೆ: ಅಶ್ರಫ್ ಅವರ ಸಹೋದರ ಸೇರಿದಂತೆ 3 ಕುಟುಂಬ ಸದಸ್ಯರು ಮಂಗಳೂರಿನ ವೆನ್ಲಾಕ್ ಶವಾಗಾರದಲ್ಲಿ ಮೃತದೇಹವನ್ನು ಗುರುತಿಸಿದರು. ಗುರುತು ದೃಢಪಡಿಸಿದ ನಂತರ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

ಬೆಳಿಗ್ಗೆ 11:30 ಗಂಟೆ: ಕೇರಳದ ಮಲಪ್ಪುರಂ ಜಿಲ್ಲೆಯ ಕೊಟ್ಟಕ್ಕಲ್ನ ಚೋಲಕ್ಕುಂಡು ಜುಮಾ ಮಸೀದಿಯಲ್ಲಿ ಅಶ್ರಫ್ ಅವರ ಅಂತ್ಯಕ್ರಿಯೆ ನಡೆಯಿತು.

ಮಧ್ಯಾಹ್ನ 3:00 ಗಂಟೆ: "ಯಾರೇ ಆಗಲಿ, ಪಾಕಿಸ್ತಾನ್ ಝಿಂದಾಬಾದ್ ಎಂದು ಕೂಗಿದ್ದರೆ ಅದು ತಪ್ಪು. ತನಿಖೆ ಇನ್ನೂ ನಡೆಯುತ್ತಿದೆ; ಪ್ರಕರಣ ದಾಖಲಿಸಲಾಗಿದೆ. ವರದಿ ಬಂದ ನಂತರ ಯಾರು ತಪ್ಪು ಮಾಡಿದ್ದಾರೆಂದು ತಿಳಿದು ಕ್ರಮ ಕೈಗೊಳ್ಳಲಾಗುವುದು. ಯಾರಾದರೂ ಪಾಕಿಸ್ತಾನ ಪರವಾಗಿ ಮಾತನಾಡಿದರೆ ಅದು ತಪ್ಪು, ಅದು ದೇಶದ್ರೋಹ," ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಧ್ಯಮಗಳಿಗೆ ಹೇಳಿಕೆ ನೀಡಿದರು.

ಪೊಲೀಸ್ ಆಯುಕ್ತರು 25 ಶಂಕಿತರಲ್ಲಿ 20 ಜನರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು. ಬಂಧಿತರಲ್ಲಿ ಟಿ. ಸಚಿನ್, ಮಂಜುನಾಥ್, ಸಾಯ್ದೀಪ್, ನಿತೇಶ್ ಕುಮಾರ್, ದೀಕ್ಷಿತ್ ಕುಮಾರ್, ಸಂದೀಪ್, ವಿವಿಯನ್ ಆಲ್ವಾರೆಸ್, ಶ್ರೀದತ್ತ, ರಾಹುಲ್, ಪ್ರದೀಪ್ ಕುಮಾರ್, ಮನೀಶ್ ಶೆಟ್ಟಿ, ಧನುಷ್, ದೀಕ್ಷಿತ್, ಕಿಶೋರ್ ಕುಮಾರ್, ಯತಿರಾಜ್, ಸಚಿನ್, ಅನಿಲ್, ಸುಶಾಂತ್ ಮತ್ತು ಆದರ್ಶ ಸೇರಿದ್ದಾರೆ.

ರಾತ್ರಿ ಸುಮಾರು 8:30 ಗಂಟೆ: ಗೃಹ ಸಚಿವರು ಸ್ಪಷ್ಟೀಕರಣ ನೀಡುವ ಹೇಳಿಕೆ ಹೊರಡಿಸಿದರು.

►1 ಮೇ 2025, ಗುರುವಾರ

ದಕ್ಷಿಣ ಕನ್ನಡದ ಹಿರಿಯ ಕಾಂಗ್ರೆಸ್ ನಾಯಕರಾದ ಮಾಜಿ ಸಚಿವ ರಮಾನಾಥ ರೈ ಅವರು ಗುಂಪು ಹತ್ಯೆಯ ಕುರಿತು ವಿಶೇಷ ತನಿಖಾ ತಂಡದಿಂದ (SIT) ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

ಗುಂಪು ಹತ್ಯೆಯ ಬಗ್ಗೆ ತಕ್ಷಣ ವರದಿ ನೀಡದ ಕಾರಣ ಪೊಲೀಸ್ ಆಯುಕ್ತರು ಓರ್ವ ಇನ್ಸ್ಪೆಕ್ಟರ್ (ಚಂದ್ರ) ಮತ್ತು ಇಬ್ಬರು ಕಾನ್ಸ್ಟೆಬಲ್ ಗಳನ್ನು (ಯೆಲ್ಲಾಲಿಂಗ, ಶಿವಕುಮಾರ್) ಅಮಾನತುಗೊಳಿಸಿದರು. ಘಟನೆ ನಡೆದ ತಕ್ಷಣ ದೀಪಕ್ ಎಂಬ ವ್ಯಕ್ತಿ ಪೊಲೀಸರಿಗೆ ಮಾಹಿತಿ ನೀಡಿದ್ದು ತನಿಖೆಯಿಂದ ತಿಳಿದುಬಂದಿದೆ.

►ಸತ್ಯಶೋಧನಾ ತಂಡವು ಈ ಕೆಳಗಿನ ಆತಂಕಕಾರಿ ಅಂಶಗಳನ್ನು ಗಮನಿಸಿದೆ:

ಘಟನೆ ನಡೆದಾಗ ಕ್ರಿಕೆಟ್ ಪಂದ್ಯ ನಡೆಯುತ್ತಿತ್ತು ಮತ್ತು ಎಫ್ಐಆರ್ ನಲ್ಲಿ 20 ಜನರ ಹೆಸರು ಉಲ್ಲೇಖಿಸಲಾಗಿದೆ. ಆದರೆ ಯಾರೊಬ್ಬರೂ ಗುಂಪು ಹತ್ಯೆಯನ್ನು ತಡೆಯಲು ಅಥವಾ ಪೊಲೀಸರಿಗೆ ಕರೆ ಮಾಡಲು ಪ್ರಯತ್ನಿಸದಿರುವುದು ಆಶ್ಚರ್ಯಕರವಾಗಿದೆ.

ಘಟನಾ ಸ್ಥಳದಲ್ಲಿದ್ದವರೇ ಗುಂಪು ಹತ್ಯೆಯ ಬಗ್ಗೆ ಸ್ಥಳೀಯ ಕಾರ್ಯಕರ್ತರಿಗೆ ಮಾಹಿತಿ ನೀಡಿ ವಿಷಯವನ್ನು ಬೆಳಕಿಗೆ ತಂದರೂ, ಸತ್ಯಶೋಧನಾ ತಂಡ ಅವರೊಂದಿಗೆ ಮಾತನಾಡಲು ಪ್ರಯತ್ನಿಸಿದಾಗ ಯಾರೂ ಸ್ಪಂದಿಸಲಿಲ್ಲ. ಇದು ಪ್ರದೇಶದಲ್ಲಿ ದ್ವೇಷದ ವಾತಾವರಣ ವ್ಯಾಪಕವಾಗಿದೆ ಎಂಬುದನ್ನು ಸೂಚಿಸುತ್ತದೆ. ಸತ್ಯವನ್ನು ಮಾತನಾಡಿದರೆ ತೊಂದರೆಯಾಗಬಹುದು ಎಂಬ ಭಯವು ಜನರಲ್ಲಿ ಇದೆ.

ಅಶ್ರಫ್ ಅವರು 'ಪಾಕಿಸ್ತಾನ್ ಝಿಂದಾಬಾದ್' ಎಂದು ಘೋಷಣೆ ಕೂಗಿದ್ದಾರೆ ಎಂಬ ದೃಢೀಕರಿಸದ ಆರೋಪವನ್ನು ರಾಜ್ಯದ ಗೃಹ ಸಚಿವರೇ ಕಾನೂನಿನ ನಿಯಮಗಳಿಗೆ ಗೌರವ ನೀಡದೆ ಮೊದಲು ಪ್ರಸಾರ ಮಾಡಿದರು. ನಂತರ ಮಾಧ್ಯಮಗಳು ಇದನ್ನು ವ್ಯಾಪಕವಾಗಿ ಹರಡಿದ್ದು ಆತಂಕಕಾರಿ ವಿಷಯವಾಗಿದೆ.

ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಮತ್ತು ಪೊಲೀಸ್ ಆಯುಕ್ತರು ಘಟನಾ ಸ್ಥಳದಲ್ಲಿದ್ದರೂ ತಕ್ಷಣವೇ ಎಫ್ಐಆರ್ ದಾಖಲಿಸಲು ವಿಫಲರಾಗಿರುವುದು ಕರ್ತವ್ಯ ಲೋಪ ಮತ್ತು ಸಂಭವನೀಯ ಸಹಭಾಗಿತ್ವವನ್ನು ತೋರಿಸುತ್ತದೆ.

(ಪತ್ರಿಕಾಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿಯ ಹಿರಿಯ ನಾಯಕ ಮಾವಳ್ಳಿ ಶಂಕರ್, ವಿಶ್ವಸಂಸ್ಥೆಯ ತಜ್ಞೆ ಅಶ್ವಿನಿ ಕೆ ಪಿ, ವಕೀಲರಾದ ವಿನಯ್ ಶ್ರೀನಿವಾಸ್, ಮೈತ್ರೇಯಿ, ಮಾನವಿ, ಎಸ್ ಐ ಒ ರಾಜ್ಯ ಕಾರ್ಯದರ್ಶಿ ಹಯಾನ್, ಪಿಯುಸಿಎಲ್ ನ ಶಶಾಂಕ್ ಹಾಗೂ ಕೊಲೆಯಾದ ಅಶ್ರಫ್‌ ಸಹೋದರ ಅಬ್ದುಲ್‌ ಜಬ್ಬಾರ್‌ ಉಪಸ್ಥಿತರಿದ್ದರು.)

►ತನಿಖೆಯಲ್ಲಿನ ಸಮಸ್ಯೆಗಳು: ವ್ಯವಸ್ಥಿತ ವೈಫಲ್ಯ

ಸತ್ಯಶೋಧನಾ ತಂಡವು ತನಿಖೆಯಲ್ಲಿ ಹಲವಾರು ಗಂಭೀರ ವೈಫಲ್ಯಗಳನ್ನು ಗುರುತಿಸಿದೆ:

►ಪ್ರಥಮ ಮಾಹಿತಿ ವರದಿ (ಎಫ್ಐಆರ್) ದಾಖಲಿಸುವಲ್ಲಿ ವಿಳಂಬ:

ಹಿಂಸಾತ್ಮಕ ಸಾವು ಸಂಭವಿಸಿದ್ದರೂ ಪೊಲೀಸರು ಮೊದಲು ಎಫ್ಐಆರ್ ಬದಲು ಅಸಹಜ ಸಾವು ವರದಿ (ಯುಡಿಆರ್) ದಾಖಲಿಸಿದರು. ಈ ವಿಳಂಬವು ಪ್ರಮುಖ ಸಾಕ್ಷ್ಯಗಳನ್ನು ನಾಶಪಡಿಸಲು ಮತ್ತು ಗುಂಪಿನ ಸದಸ್ಯರು ತಪ್ಪಿಸಿಕೊಳ್ಳಲು ಸಮಯ ನೀಡಿತು. ಕಾನೂನಿನ ಪ್ರಕಾರ ಯುಡಿಆರ್ ಅನ್ನು ಮ್ಯಾಜಿಸ್ಟ್ರೇಟ್ಗೆ ಕಳುಹಿಸಬೇಕಾಗಿದ್ದರೂ ಅದನ್ನು ಕಳುಹಿಸಲಾಗಿಲ್ಲ.

►ಸುಳ್ಳು ಕಥೆಗಳು ಮತ್ತು ಮಾಧ್ಯಮದ ಸಹಕಾರ:

ಗೃಹ ಸಚಿವರು ಅಶ್ರಫ್ ಅವರು "ಪಾಕಿಸ್ತಾನ್ ಝಿಂದಾಬಾದ್" ಎಂದು ಕೂಗಿದ್ದಾರೆ ಎಂಬ ದೃಢೀಕರಿಸದ ಮತ್ತು ತಿರುಚಿದ ಆರೋಪವನ್ನು ಹರಡಿದರು. ಕೆಲವು ಮಾಧ್ಯಮಗಳು ಇದನ್ನು ದೊಡ್ಡದಾಗಿ ಬಿತ್ತರಿಸಿದವು, ಇದು ಅಪರಾಧದ ಮೇಲಿನ ಗಮನವನ್ನು ಬೇರೆಡೆಗೆ ತಿರುಗಿಸಿತು ಮತ್ತು ಬಲಿಪಶುವನ್ನು ಕೆಟ್ಟದಾಗಿ ಬಿಂಬಿಸಲು ಪ್ರಯತ್ನಿಸಿತು. ಇದು ಅಶ್ರಫ್ ಅವರ ಕುಟುಂಬಕ್ಕೆ ಬಹಳಷ್ಟು ನೋವುಂಟುಮಾಡಿತು.

►ಘಟನಾ ಸ್ಥಳದಲ್ಲಿ ನಿರ್ಲಕ್ಷ್ಯ:

ಅನಾಮಧೇಯ ಸಾಕ್ಷಿಗಳ ಹೇಳಿಕೆಗಳು ಮತ್ತು ಸತ್ಯಶೋಧನಾ ತಂಡವು ಸಂಗ್ರಹಿಸಿದ ಛಾಯಾಚಿತ್ರಗಳ ಪ್ರಕಾರ, ಪೊಲೀಸರು ಘಟನಾ ಸ್ಥಳದಲ್ಲಿ ಮೃತದೇಹದ ಬಳಿ ಕ್ರಿಕೆಟ್ ಆಟಗಾರರು ಮತ್ತು ದ್ವಿಚಕ್ರ ವಾಹನಗಳಿದ್ದವು. ಆದರೆ ಸ್ಥಳವನ್ನು ತಕ್ಷಣವೇ ಸೀಲ್ ಮಾಡಲು, ಸ್ಥಳದಲ್ಲಿದ್ದವರೆಲ್ಲರನ್ನು ತನಿಖೆಗೆ ಕರೆಯಲು ಅಥವಾ ವಾಹನಗಳನ್ನು ಪತ್ತೆಹಚ್ಚಲು ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಪರಿಶೀಲಿಸಲಿಲ್ಲ. ಇವೆಲ್ಲವೂ ತನಿಖೆಯಲ್ಲಿ ಉದ್ದೇಶಪೂರ್ವಕ ನಿರ್ಲಕ್ಷ್ಯವನ್ನು ತೋರಿಸುತ್ತದೆ.

►ದಾಖಲೆಗಳ ಕೊರತೆ ಮತ್ತು ಮಾಹಿತಿ ಹಂಚಿಕೆಯಲ್ಲಿ ಲೋಪ:

ಅಶ್ರಫ್ ಕುಟುಂಬಕ್ಕೆ ಯುಡಿಆರ್ ಅಥವಾ ಮರಣೋತ್ತರ ಪರೀಕ್ಷಾ ವರದಿಯ ಪ್ರತಿಗಳನ್ನು ನೀಡಲಾಗಿಲ್ಲ. ಹಿರಿಯ ಅಧಿಕಾರಿಗಳಿಗೆ ಗುಂಪು ಹತ್ಯೆಯ ಬಗ್ಗೆ ತಿಳಿದಿರಲಿಲ್ಲ ಎಂಬ ಪೊಲೀಸರ ಹೇಳಿಕೆ ಅನುಮಾನಾಸ್ಪದವಾಗಿದೆ. ಏಕೆಂದರೆ ನಗರದ ಹಿರಿಯ ಅಧಿಕಾರಿಗಳು ಅಮಾನತುಗೊಂಡ ಇನ್ಸ್ಪೆಕ್ಟರ್ ಜೊತೆಗೆ ಸ್ಥಳದಲ್ಲಿದ್ದರು. ಇದು ಹೊಣೆಗಾರಿಕೆ ಮತ್ತು ಮುಚ್ಚುಮರೆಯ ಪ್ರಯತ್ನಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

►ಪ್ರಮುಖ ವ್ಯಕ್ತಿಗಳ ತಲೆಮರೆಸುವಿಕೆ:

ಬಿಜೆಪಿಯ ಮಾಜಿ ಕಾರ್ಪೊರೇಟರ್ ಅವರ ಪತಿಯಾದ ರವೀಂದ್ರ ನಾಯಕ್ ಕ್ರಿಕೆಟ್ ಪಂದ್ಯದ ಪ್ರಮುಖ ಆಯೋಜಕರಲ್ಲಿ ಒಬ್ಬರಾಗಿದ್ದರು ಎನ್ನಲಾಗಿದ್ದು, ಅವರು ಘಟನಾ ಸ್ಥಳದಲ್ಲಿ ಹಾಜರಿದ್ದರು ಎಂದು ಹೇಳಲಾಗಿದೆ. ಆದರೂ ಅವರು ತಲೆಮರೆಸಿಕೊಂಡಿದ್ದಾರೆ ಮತ್ತು ಪೊಲೀಸರು ಅವರನ್ನು ಹುಡುಕುತ್ತಿದ್ದರೂ, ಅವರನ್ನು ತಕ್ಷಣವೇ ಎಫ್ಐಆರ್ ನಲ್ಲಿ ಹೆಸರಿಸಲಾಗಿಲ್ಲ. ಪೊಲೀಸರು ಅವರ ಪಾತ್ರದ ಬಗ್ಗೆ ಸಮರ್ಪಕ ತನಿಖೆ ನಡೆಸಿಲ್ಲ.

►ಸುಪ್ರೀಂ ಕೋರ್ಟ್ ನಿರ್ದೇಶನಗಳ ಉಲ್ಲಂಘನೆ:

ಮೊಬ್ ಲಿಂಚಿಂಗ್ ಕುರಿತು ಸುಪ್ರೀಂ ಕೋರ್ಟ್ ನ ತಹಸೀನ್ ಪೂನಾವಾಲಾ ತೀರ್ಪನ್ನು ಜಾರಿಗೊಳಿಸಲು ನೋಡಲ್ ಅಧಿಕಾರಿಯಾಗಿ ನೇಮಕಗೊಂಡಿದ್ದ ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ತೀರ್ಪಿನ ಬಗ್ಗೆಯೇ ಜ್ಞಾನದ ಕೊರತೆಯನ್ನು ತೋರಿಸಿದ್ದಾರೆ. ಇದು ಗುಂಪು ಹಿಂಸಾಚಾರವನ್ನು ತಡೆಗಟ್ಟಲು ಮತ್ತು ಪರಿಹರಿಸಲು ನಿರ್ಣಾಯಕ ಕಾನೂನು ಪೂರ್ವನಿದರ್ಶನಗಳನ್ನು ಅನುಸರಿಸುವಲ್ಲಿ ವ್ಯವಸ್ಥಿತ ವೈಫಲ್ಯವನ್ನು ಸೂಚಿಸುತ್ತದೆ.

►ತಾಂತ್ರಿಕ ಕಾರಣಗಳಿಗಾಗಿ ಜಾಮೀನು:

ಮೊದಲ ಎಫ್ಐಆರ್ ನಲ್ಲಿ ಹೆಸರು ಇಲ್ಲದಿರುವುದು, ದೂರು ದಾಖಲಿಸುವಲ್ಲಿ ವಿಳಂಬ ಅಥವಾ ಉದ್ದೇಶ ಪೂರ್ವಕ ವಿಳಂಬದಿಂದ ಅನೇಕ ಆರೋಪಿಗಳಿಗೆ ಜಾಮೀನು ನೀಡಲಾಗಿದೆ. ಸಹಜವಾಗಿಯೇ ಇದು ಪೊಲೀಸರ ತನಿಖಾ ವೈಫಲ್ಯಗಳ ನೇರ ಪರಿಣಾಮವಾಗಿದೆ. ಸಾಕಷ್ಟು ಸಾಕ್ಷ್ಯ ಸಂಗ್ರಹಿಸದಿರುವುದು ಮತ್ತು ಸಮಗ್ರ ಪ್ರಕರಣವನ್ನು ಸಿದ್ಧಪಡಿಸುವಲ್ಲಿನ ವಿಳಂಬ ಇದಕ್ಕೆ ಕಾರಣವಾಗಿದೆ.

►ಸೌಹಾರ್ದತೆ ಮತ್ತು ಕಾನೂನಿನ ಉಲ್ಲಂಘನೆ:

ಮೊಹಮ್ಮದ್ ಅಶ್ರಫ್ ಅವರ ಹತ್ಯೆಯು ಒಂದು ಪ್ರತ್ಯೇಕ ಘಟನೆಯಲ್ಲ. ದಕ್ಷಿಣ ಕನ್ನಡದಲ್ಲಿ ಆಳವಾಗಿ ಬೇರೂರಿರುವ ಖಾಯಿಲೆಯ ಒಂದು ಭಯಾನಕ ಲಕ್ಷಣವಾಗಿದೆ. ಈ ಘಟನೆಯು ದ್ವೇಷದ ಪ್ರಚಾರದಿಂದ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ಹುಟ್ಟಿಕೊಂಡ ಅಮಾನವೀಯತೆಯ ಮಟ್ಟವನ್ನು ಸ್ಪಷ್ಟವಾಗಿ ತೋರಿಸುತ್ತದೆ. ಗುಂಪು ಹತ್ಯೆಯ ನಂತರ ಗುಂಪು ಯಾವುದೇ ಪಶ್ಚಾತ್ತಾಪವಿಲ್ಲದೆ ಆಟವಾಡಲು ಹಿಂತಿರುಗಿದ್ದು ಸಾರ್ವಜನಿಕರ ಮಾನವೀಯತೆಯ ಮೌಲ್ಯಗಳ ಕುಸಿತವನ್ನು ಸೂಚಿಸುತ್ತದೆ.

ಸರಕಾರಿ ಸಂಸ್ಥೆಗಳು, ವಿಶೇಷವಾಗಿ ಪೊಲೀಸರು ಕಾನೂನನ್ನು ಕಾಪಾಡುವಲ್ಲಿ ಸ್ಪಷ್ಟವಾಗಿ ವಿಫಲರಾಗಿದ್ದಾರೆ. ಎಫ್ಐಆರ್ ವಿಳಂಬ, ತನಿಖೆಯ ದಿಕ್ಕು ತಪ್ಪಿಸುವುದು ಮತ್ತು ನ್ಯಾಯಾಂಗವು ತಾಂತ್ರಿಕ ಕಾರಣಗಳಿಗಾಗಿ ಜಾಮೀನು ನೀಡುವುದು, ನಾಗರಿಕರನ್ನು ರಕ್ಷಿಸಲು ಮತ್ತು ಅಪರಾಧಿಗಳನ್ನು ಹೊಣೆಗಾರರನ್ನಾಗಿ ಮಾಡಲು ವ್ಯವಸ್ಥೆಯು ಸಿದ್ಧವಿಲ್ಲ ಅಥವಾ ಅಸಮರ್ಥವಾಗಿದೆ ಎಂದು ಸೂಚಿಸುತ್ತದೆ.

►ಶಿಕ್ಷೆಯಿಂದ ವಿನಾಯಿತಿ ಮತ್ತು ಸಾಮಾಜಿಕ ಬೇರ್ಪಡೆ:

ಗುಂಪು ಹತ್ಯೆ ಮಾಡಿದ ಹಂತಕರು ಯಾವುದೇ ಭಯವಿಲ್ಲದೆ ವರ್ತಿಸಿದ್ದು ಮತ್ತು ಪ್ರತ್ಯಕ್ಷದರ್ಶಿಗಳು ಮಧ್ಯಪ್ರವೇಶಿಸದಿರುವುದು ಅಥವಾ ವರದಿ ಮಾಡದಿರುವುದು ಹಿಂಸಾಚಾರವನ್ನು ಸಮಾಜವು ಒಪ್ಪಿಕೊಂಡಿದೆ ಮತ್ತು ಧಾರ್ಮಿಕ ಅಲ್ಪಸಂಖ್ಯಾತರಿಗೆ ಸಮಾನ ನಾಗರಿಕ ಹಕ್ಕುಗಳನ್ನು ನಿರಾಕರಿಸಲಾಗುತ್ತಿದೆ ಎಂಬುದನ್ನು ತೋರಿಸುತ್ತದೆ.

ದ್ವೇಷಕ್ಕೆ ರಾಜಕೀಯ ರಕ್ಷಣೆ ಸಿಗುತ್ತಿರುವು ಆತಂಕಕಾರಿಯಾಗಿದೆ. ಕೋಮು ಹಿಂಸಾಚಾರದ ಇಂತಹ ಕೃತ್ಯಗಳಿಗೆ ರಾಜಕೀಯ ಬೆಂಬಲವಿದೆ ಎಂದು ವರದಿ ಸೂಚಿಸುತ್ತದೆ. ಗೃಹ ಸಚಿವರು ಪ್ರಾರಂಭದಲ್ಲಿ ದೃಢೀಕರಿಸದೇ ನೀಡಿರುವ ಹೇಳಿಕೆ ಇದಕ್ಕೆ ಉತ್ತಮ ಉದಾಹರಣೆಯಾಗಿದೆ.

►ದ್ವೇಷ ಭಾಷಣದ ಪರಿಣಾಮಗಳು:

ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಡಿದ ದ್ವೇಷ ಭಾಷಣದಿಂದ ಪ್ರೇರಿತವಾಗಿ ದಕ್ಷಿಣ ಕನ್ನಡದಲ್ಲಿ ನಡೆದ ಎರಡು ಕೊಲೆಗಳು ಅಪಾಯಕಾರಿ ಕೋಮು ದ್ವೇಷದ ನಿರಂತರತೆಯನ್ನು ಎತ್ತಿ ತೋರಿಸುತ್ತವೆ. ಪೊಲೀಸರು ಸುಪ್ರೀಂ ಕೋರ್ಟ್ನ ಆದೇಶಗಳ ಹೊರತಾಗಿಯೂ ಅಂತಹ ದ್ವೇಷ ಭಾಷಣದ ವಿರುದ್ಧ ಕ್ರಮ ಕೈಗೊಳ್ಳದಿರುವುದು ಗಂಭೀರ ವಿಚಾರವಾಗಿದೆ.

►ಸತ್ಯಶೋಧನಾ ಸಮಿತಿಯ ಶಿಫಾರಸುಗಳು:

ಮಾನವೀಯತೆ ಮರುಸ್ಥಾಪಿಸೋಣ, ಮತ್ತೆ ಕಟ್ಟೋಣ

ದಕ್ಷಿಣ ಕನ್ನಡದಲ್ಲಿ ನ್ಯಾಯ, ಮಾನವ ಘನತೆ ಮತ್ತು ಕಾನೂನನ್ನು ಎತ್ತಿಹಿಡಿಯಲು ತಕ್ಷಣದ ಮತ್ತು ದೀರ್ಘಕಾಲೀನ ಕ್ರಮಗಳಿಗಾಗಿ ಕರೆ ನೀಡುವ ಮೂಲಕ ವರದಿ ಮುಕ್ತಾಯಗೊಳ್ಳುತ್ತದೆ.

►ರಾಜ್ಯ ಸರ್ಕಾರಕ್ಕೆ ಶಿಫಾರಸುಗಳು

ಸುಪ್ರೀಂ ಕೋರ್ಟ್ ನ ತಹಸೀನ್ ಎಸ್. ಪೂನಾವಾಲಾ vs ಯೂನಿಯನ್ ಆಫ್ ಇಂಡಿಯಾ ಪ್ರಕರಣದ ತೀರ್ಪನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಅದರ ಅಡಿಯಲ್ಲಿ ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆ, ಪರಿಹಾರ ಮತ್ತು ಶಿಕ್ಷೆಯ ಕ್ರಮಗಳನ್ನು ತಕ್ಷಣವೇ ಜಾರಿಗೊಳಿಸಬೇಕು.

ಈ ಪ್ರಕರಣದ ತನಿಖೆಯನ್ನು ತಕ್ಷಣವೇ ಸಿಐಡಿಗೆ ವರ್ಗಾಯಿಸಬೇಕು.

ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ 37/25 ರ ವಿಚಾರಣೆಗೆ ತಕ್ಷಣವೇ ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಿಸಬೇಕು.

ತಹಸೀನ್ ಪೂನಾವಾಲಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಮತ್ತು ಸರ್ಕಾರಿ ಆದೇಶದ ಪ್ರಕಾರ ಮೊಹಮ್ಮದ್ ಅಶ್ರಫ್ ಅವರ ಕುಟುಂಬಕ್ಕೆ ಪರಿಹಾರ ನೀಡಬೇಕು.

ದಕ್ಷಿಣ ಕನ್ನಡದಲ್ಲಿ ಕೋಮುವಾದ, ದ್ವೇಷ ಭಾಷಣ ಮತ್ತು ಸುಳ್ಳು ಸುದ್ದಿಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಹೊಸದಾಗಿ ರಚಿಸಲಾದ ಕೋಮು ಸೌಹಾರ್ದ ಪಡೆ ಹೇಗೆ ಉತ್ತಮವಾಗಿ ಕಾರ್ಯನಿರ್ವಹಿಸಬಹುದು ಎಂಬುದರ ಕುರಿತು ನಾಗರಿಕ ಸಮಾಜದೊಂದಿಗೆ ಸಮಾಲೋಚನಾ ಸಭೆ ಕರೆಯಬೇಕು.

ಮೊಹಮ್ಮದ್ ಅಶ್ರಫ್ ಅವರ ಗುಂಪು ಹತ್ಯೆಯ ವಿಚಾರಣೆಗಾಗಿ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಬೇಕು.

ಶಕ್ತಿ ವಾಹಿನಿ vs ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನಗಳನ್ನು ಅನುಷ್ಠಾನಗೊಳಿಸಬೇಕು.

ಗೃಹ ಸಚಿವಾಲಯವು 2008 ರಲ್ಲಿ ಹೊರಡಿಸಿದ ಕೋಮು ಸೌಹಾರ್ದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು.

ಪೊಲೀಸ್ ಪಡೆ ಈ ಪ್ರದೇಶದ ಸಾಮಾಜಿಕ ರಚನೆಯನ್ನು ಪ್ರತಿನಿಧಿಸುವಂತಿರಬೇಕು. ಪೊಲೀಸ್ ಹಾಗೂ ಆಡಳಿತಾಧಿಕಾರಿಗಳು ಪ್ರಾಮಾಣಿಕತೆ, ದಕ್ಷತೆ, ನಿಷ್ಪಕ್ಷಪಾತ ಮತ್ತು ಪಕ್ಷಾತೀತ ದೃಷ್ಟಿಕೋನವನ್ನು ಹೊಂದಿರಬೇಕು. ಪೊಲೀಸ್ ಪಡೆಯ ತರಬೇತಿ ಕಾರ್ಯಕ್ರಮವನ್ನು ಪರಿಶೀಲಿಸಿ, ಪೊಲೀಸರಲ್ಲಿ ಜಾತ್ಯತೀತತೆ ಮತ್ತು ಕೋಮು ಸೌಹಾರ್ದತೆಯ ಮನೋಭಾವವನ್ನು ಬೆಳೆಸುವುದು ಅವಶ್ಯಕ. ಇದಕ್ಕಾಗಿ ಗೃಹ ಸಚಿವಾಲಯವು 2008 ರಲ್ಲಿ ಹೊರಡಿಸಿದ ಕೋಮು ಸೌಹಾರ್ದ ಮಾರ್ಗಸೂಚಿಗಳ ಪ್ರಕಾರ ವಿಶೇಷ ತರಬೇತಿ ನೀಡಬೇಕು ಮತ್ತು ಭಾರತದ ಸರ್ವೋಚ್ಚ ನ್ಯಾಯಾಲಯವು ಪ್ರವಾಸಿ ಭಲಾಯಿ ಸಂಘಟನ್ Vs ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಇದನ್ನು ಅನುಮೋದಿಸಿದೆ.

ಕರ್ನಾಟಕ ಸರ್ಕಾರಕ್ಕೆ ಯಾವುದೇ ಸಮಾನಾಂತರ ಆಡಳಿತ ಇರಬಾರದು. ನಿರ್ದಿಷ್ಟವಾಗಿ ಕೋಮು ಹಿಂಸಾಚಾರದಲ್ಲಿ ತೊಡಗಿರುವ ಎಲ್ಲಾ ಹಿಂದುತ್ವ ಸಂಘಟನೆಗಳ ಸದಸ್ಯರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು.

►ಜಿಲ್ಲಾಡಳಿತಕ್ಕೆ ಶಿಫಾರಸುಗಳು

ಪೊಲೀಸ್, ನಾಗರಿಕ ಸಮಾಜ, ವಿದ್ಯಾರ್ಥಿ ಸಂಘಟನೆಗಳು ಮತ್ತು ಮಹಿಳಾ ಗುಂಪುಗಳ ಪ್ರತಿನಿಧಿಗಳೊಂದಿಗೆ ಜಿಲ್ಲಾ ಕೋಮು ಸೌಹಾರ್ದ ಸಮಿತಿಯನ್ನು ರಚಿಸಬೇಕು.

ಉಪ ಜಿಲ್ಲಾಧಿಕಾರಿಗಳು ಅಲ್ಪಸಂಖ್ಯಾತ ಸಮುದಾಯದ ಸದಸ್ಯರೊಂದಿಗೆ ನಿಯಮಿತವಾಗಿ ಸಂವಹನ ನಡೆಸಿ ವಿಶ್ವಾಸ ಮೂಡಿಸುವ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಅವರ ಸಮಸ್ಯೆಗಳನ್ನು ಆಲಿಸಲು ಹಾಗೂ ಪರಿಹರಿಸಲು ನಿರ್ದಿಷ್ಟ ದಿನಗಳನ್ನು ಮೀಸಲಿಡಬೇಕು.

ಕೇಬಲ್ ಟೆಲಿವಿಷನ್ ನೆಟ್ವರ್ಕ್ (ನಿಯಂತ್ರಣ) ಕಾಯ್ದೆಯಡಿ ಪ್ರಸಾರ ಮಾರ್ಗಸೂಚಿಗಳನ್ನು ಅನುಸರಿಸಲು ಮಾಧ್ಯಮ ಸಂಸ್ಥೆಗಳು ಮತ್ತು ಪತ್ರಕರ್ತರನ್ನು ಪ್ರೋತ್ಸಾಹಿಸಲು ಪ್ರೆಸ್ ಕ್ಲಬ್ನೊಂದಿಗೆ ಸಹಕರಿಸಬೇಕು.

ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಶಾಂತಿ ಸಭೆಗಳನ್ನು ಆಯೋಜಿಸಲು ಕಾರ್ಯನಿರ್ವಹಿಸಬೇಕು.

►ಜಿಲ್ಲಾ ಪೊಲೀಸ್ ಆಡಳಿತಕ್ಕೆ ಶಿಫಾರಸುಗಳು

(ಎ) ದಾಖಲಾದ ಕೋಮು ಗಲಭೆ ಪ್ರಕರಣಗಳ ಸಂಖ್ಯೆ, (ಬಿ) ಬಾಕಿ ಇರುವ ತನಿಖೆಗಳು, (ಸಿ) ದ್ವೇಷ ಭಾಷಣ/ಗುಂಪು ಹತ್ಯೆ ಪ್ರಕರಣಗಳ ವಿಚಾರಣೆಗಳ ಸಾರ್ವಜನಿಕ ಆನ್ಲೈನ್ ಟ್ರ್ಯಾಕರ್ ಅನ್ನು ಸಿದ್ಧಪಡಿಸಬೇಕು. ಇದರಿಂದ ನಾಗರಿಕ ಸಮಾಜವು ಮುಂದಿನ ಕ್ರಮಗಳನ್ನು ಗಮನಿಸಲು ಸಾಧ್ಯವಾಗುತ್ತದೆ.

ಶಾಹೀನ್ ಅಬ್ದುಲ್ಲಾ vs ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶಿಸಿದಂತೆ ಸ್ವಯಂಪ್ರೇರಿತವಾಗಿ ಎಫ್ಐಆರ್ ದಾಖಲಿಸುವುದನ್ನು ಖಚಿತಪಡಿಸಿಕೊಳ್ಳಬೇಕು.

ದ್ವೇಷ ಅಪರಾಧ, ಕೋಮು ಗೂಂಡಾಗಿರಿ ಅಥವಾ ಕೋಮು ಹಿಂಸಾಚಾರದ ಪ್ರತಿಯೊಂದು ಪ್ರಕರಣದಲ್ಲೂ ಎಫ್ಐಆರ್ ದಾಖಲಿಸಬೇಕು. ಸಂತ್ರಸ್ತರು ದೂರು ನೀಡಲು ಭಯಪಡುವ ಸಂದರ್ಭದಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಬೇಕು. ಈ ಬಗ್ಗೆ ಸುತ್ತೋಲೆ ಹೊರಡಿಸಬೇಕು.

ಸುಳ್ಳು ಸುದ್ದಿ, ದ್ವೇಷ ಭಾಷಣ, ಅನುಮಾನಾಸ್ಪದ ಗುಂಪುಗಳ ಬಗ್ಗೆ ವರದಿ ಮಾಡಲು ಒಂದೇ ಸಂಖ್ಯೆ/ಅಪ್ಲಿಕೇಶನ್ ಅನ್ನು ಪ್ರಚಾರಪಡಿಸಬೇಕು. ಇದರಿಂದ ಪೊಲೀಸ್ ನಿಯಂತ್ರಣ ಕೊಠಡಿಗೆ ಸ್ವಯಂಚಾಲಿತವಾಗಿ ಮಾಹಿತಿ ತಲುಪುತ್ತದೆ.

ದ್ವೇಷ ಅಪರಾಧ ಮತ್ತು ಕೋಮು ಗೂಂಡಾಗಿರಿಯ ಎಲ್ಲಾ ಪ್ರಕರಣಗಳ ತನಿಖೆಯನ್ನು ತ್ವರಿತವಾಗಿ ನಡೆಸಬೇಕು.

ಪೊಲೀಸರಿಗೆ ರಾಜ್ಯದಲ್ಲಿ ಸಾಂವಿಧಾನಿಕ ಆಡಳಿತವನ್ನು ಕಾಪಾಡಲು ತರಬೇತಿ ನೀಡಬೇಕು. ವಿಶೇಷವಾಗಿ ದ್ವೇಷ ಅಪರಾಧಗಳು ಮತ್ತು ಕೋಮು ಗೂಂಡಾಗಿರಿಗಳ ಬಗ್ಗೆ ಗಮನ ಹರಿಸಬೇಕು.

ಎಲ್ಲಾ ನಾಗರಿಕರು ಭಯವಿಲ್ಲದೆ ತಮ್ಮ ಮೂಲಭೂತ ಹಕ್ಕುಗಳನ್ನು ಚಲಾಯಿಸಲು ಸಾಧ್ಯವಾಗುವಂತೆ ನೋಡಿಕೊಳ್ಳಬೇಕು ಮತ್ತು ದಕ್ಷಿಣ ಕನ್ನಡದಲ್ಲಿ ಹರಡಿರುವ ಮತ್ತು ನಾಗರಿಕರು ತಮ್ಮ ಮೂಲಭೂತ ಹಕ್ಕುಗಳನ್ನು ಚಲಾಯಿಸುವುದನ್ನು ತಡೆಯುತ್ತಿರುವ ಭಯದ ವಾತಾವರಣವನ್ನು ಹೋಗಲಾಡಿಸಲು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು.

ಪುದುಚೇರಿ ಪೊಲೀಸರು ಕೈಗೊಂಡಿರುವಂತೆ, ಗುಂಪಿನಿಂದ ಥಳಿಸಿ ಹತ್ಯೆ ಕುರಿತು ಸುಪ್ರೀಂ ಕೋರ್ಟ್ ನ ತಹಸೀನ್ ಪೂನಾವಾಲಾ ತೀರ್ಪನ್ನು ಜಾರಿಗೊಳಿಸಲು ಒಂದು ಕಾರ್ಯಾಚರಣಾ ಮಾರ್ಗಸೂಚಿಯನ್ನು (SOP) ಹೊರಡಿಸಬೇಕು.

ಹೆಚ್ಚುತ್ತಿರುವ ಕೋಮು ಭೇದಭಾವದ ಈ ಸಮಯದಲ್ಲಿ, ನಾವು ನಾಗರಿಕ ಸಮಾಜ ಮತ್ತು ಕಾಳಜಿಯುಳ್ಳ ಪ್ರತಿಯೊಬ್ಬರ ನಡುವೆ ಸೌಹಾರ್ದತೆಯ ಸೇತು ನಿರ್ಮಿಸಲು ಮತ್ತು ರಾಜ್ಯ ಹಾಗೂ ಪೊಲೀಸ್ ಆಡಳಿತವನ್ನು ಅವರ ಕ್ರಮಗಳು ಹಾಗೂ ನಿಷ್ಕ್ರಿಯತೆಗಳಿಗೆ ಹೊಣೆಗಾರರನ್ನಾಗಿ ಮಾಡಲು ಮತ್ತು ಸಂವಿಧಾನದ ಆಶಯವನ್ನು ಎತ್ತಿಹಿಡಿಯಲು ಕರೆ ನೀಡುತ್ತೇವೆ.

ಮೊಹಮ್ಮದ್ ಅಶ್ರಫ್ ಅವರ ಹತ್ಯೆಗೆ ಕಾರಣರಾದವರನ್ನು ಹೊಣೆಗಾರರನ್ನಾಗಿ ಮಾಡುವ ಪ್ರಯತ್ನವೇ ಈ ಸತ್ಯಶೋಧನಾ ವರದಿ. ಈ ವರದಿಯು ಪ್ರದೇಶದಲ್ಲಿ ಮುಸ್ಲಿಮರ ಅಮಾನವೀಯಗೊಳಿಸುವಿಕೆಯ ಮಟ್ಟ ಮತ್ತು "ಕಳೆದುಹೋದ ಸೌಹಾರ್ದತೆ"ಗೆ ಕಾರಣವಾಗುವ ನಿರಂತರ ಕೋಮು ಪ್ರಚಾರವನ್ನು ಬಹಿರಂಗಪಡಿಸುತ್ತದೆ. ಈ ದ್ವೇಷದ ಅಪರಾಧದಲ್ಲಿ ರಾಜ್ಯದ ಪಾತ್ರವನ್ನೂ ವರದಿ ಎತ್ತಿ ತೋರಿಸುತ್ತದೆ.

ಮೊಹಮ್ಮದ್ ಅಶ್ರಫ್ ಅವರ ಸಹೋದರ ಜಬ್ಬಾರ್ ಅವರ ಮಾತಿನಲ್ಲಿ, “ಇದು ಕೊನೆಯ ಗುಂಪು ಹತ್ಯೆಯಾಗಬೇಕು. ಇನ್ನು ಯಾವತ್ತೂ ಯಾರನ್ನೂ ಥಳಿಸಿ ಕೊಲ್ಲಬಾರದು. ಅಶ್ರಫ್ ಅವರನ್ನು ಥಳಿಸಿ ಕೊಂದವರೆಲ್ಲರೂ ತಮ್ಮ ಅಪರಾಧಕ್ಕೆ ಶಿಕ್ಷೆ ಅನುಭವಿಸಬೇಕು. ಗುಂಪು ಹತ್ಯೆ ಮತ್ತು ದ್ವೇಷದ ವಿರುದ್ಧ ಬಲವಾದ ಸಂದೇಶವನ್ನು ನೀಡಿದಾಗ ಅಶ್ರಫ್ ಗೆ ನಿಜವಾದ ನ್ಯಾಯ ಸಿಗುತ್ತದೆ. ”

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News