ವಿಧಾನಸಭೆಯಲ್ಲಿ ಕೈಕೊಟ್ಟ ಮೈಕ್: ಕಲಾಪಕ್ಕೆ ಅಡ್ಡಿ
ಬೆಳಗಾವಿ (ಸುವರ್ಣ ವಿಧಾನಸೌಧ): ಧ್ವನಿವರ್ಧಕ (ಮೈಕ್) ಕೈಕೊಟ್ಟ ಕಾರಣಕ್ಕೆ ವಿಧಾನಸಭೆ ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಿದ ಅಪರೂಪದ ಪ್ರಸಂಗ ಬುಧವಾರ ನಡೆಯಿತು.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಬುಧವಾರ ವಿಧಾನಸಭೆಯಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ವಿಧೇಯಕಗಳ ಮಂಡನೆ ಸಂದರ್ಭದಲ್ಲಿ ಸದನದ ಮೈಕ್ ಇದ್ದಕ್ಕಿದ್ದಂತೆ ಕೈಕೊಟ್ಟಿತು.
ಈ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿ ಸದಸ್ಯ ಸುರೇಶ್ ಕುಮಾರ್, ಸದನದ ಹೊರಗೆ ಸಂತೋಷ್ ಲಾಡ್ ಏರಿದ ಧ್ವನಿಯಲ್ಲಿ ಮಾತನಾಡುತ್ತಾರೆ. ಆದರೆ, ಸದನದ ಒಳಗೆ ಅವರು ಮಾತನಾಡುತ್ತಿದ್ದ ವೇಳೆ ಧ್ವನಿವರ್ಧಕ ಕೈಕೊಟ್ಟಿದೆ ಎಂದು ಮಾತಿನಲ್ಲೇ ತಿವಿದರು. ಹಲವು ಬಾರಿ ಸರಿಪಡಿಸಲು ಪ್ರಯತ್ನಿಸಿದರೂ ಮೈಕ್ ಸರಿಯಾಗಲಿಲ್ಲ. ಹೀಗಾಗಿ ವಿಧೇಯಕ ಮಂಡನೆಯೂ ಸದಸ್ಯರು ಸೇರಿದಂತೆ ಯಾರೊಬ್ಬರಿಗೂ ಏನು ನಡೆಯುತ್ತಿದೆ ಎಂಬುದು ಕೇಳದಂತಾಗಿತ್ತು.
ಹೀಗೆ ಏಕಾಏಕಿ ಧ್ವನಿವರ್ಧಕ (ಮೈಕ್) ವ್ಯವಸ್ಥೆ ಹಾಳಾಗಿದ್ದರ ಬಗ್ಗೆ ವಿರೋಧ ಪಕ್ಷದ ಸದಸ್ಯರು, ‘ಸರಕಾರ ಶಾಸಕರ ಧ್ವನಿಯನ್ನು ಸದನದಲ್ಲೂ ಅಡಗಿಸುವ ಕೆಲಸ ಮಾಡುತ್ತಿದೆ’ ಎಂದು ವ್ಯಂಗ್ಯವಾಡಿದರು. ನಂತರ ಸ್ಪೀಕರ್ ಯು.ಟಿ. ಖಾದರ್, ಕಲಾಪವನ್ನು10 ನಿಮಿಷಗಳ ಕಾಲ ಮುಂದೂಡಿದರು.