ಡಿ.11 ರಂದು ಸದನದಲ್ಲಿ ಡಿಕೆಶಿ-ಝಮೀರ್ ವಿಚಾರದಲ್ಲಿ ಹೋರಾಟ: ವಿಪಕ್ಷ ನಾಯಕ ಆರ್.ಅಶೋಕ್
ಬೆಳಗಾವಿ: ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು, ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆ ಹಿಂಪಡೆದಿರುವುದು ಹಾಗೂ ಸ್ಪೀಕರ್ ಸ್ಥಾನದ ಕುರಿತು ಸಚಿವ ಝಮೀರ್ ಅಹ್ಮದ್ ಖಾನ್ ನೀಡಿರುವ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ(ಡಿ.11)ರಂದು ಸದನದಲ್ಲಿ ಹೋರಾಟ ಮಾಡುತ್ತೇವೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ತಿಳಿಸಿದರು.
ಶುಕ್ರವಾರ ಸುವರ್ಣ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆಯೂ ಸದನದಲ್ಲಿ ಚರ್ಚೆ ಮಾಡುತ್ತೇವೆ. ಸರಕಾರದ ವಿರುದ್ಧ ನಮ್ಮ ಹೋರಾಟ ಮುಂದುವರೆಯಲಿದೆ ಎಂದರು.
ಬೆಳಗಾವಿಯಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ನಡೆದಿರುವ ಪೊಲೀಸ್ ದೌರ್ಜನ್ಯ ವಿಚಾರದಲ್ಲಿ ಧರಣಿ-ಸಭಾತ್ಯಾಗ ನಡೆಸುವ ಸಂಬಂಧ ನಾನು, ವಿಜಯೇಂದ್ರ, ಯತ್ನಾಳ್, ಅಶ್ವತ್ಥ ನಾರಾಯಣ ಎಲ್ಲರೂ ಸೇರಿ ತೀರ್ಮಾನ ಮಾಡಿದ್ದೆವು. ಆದರೆ, ನಮ್ಮ ತೀರ್ಮಾನ ಹಿಂದಿನ ಸಾಲಿನಲ್ಲಿ ಇದ್ದವರಿಗೆ ತಿಳಿಯಲಿಲ್ಲ. ಸಮನ್ವಯತೆಯ ಕೊರತೆಯಿಂದ ನಿನ್ನೆ ಆ ರೀತಿ ಆಯಿತು ಎಂದು ಅಶೋಕ್ ಸ್ಪಷ್ಟಣೆ ನೀಡಿದರು.