ಕನ್ನಡಿಗರು, ಕನ್ನಡ ಭಾಷೆಗೆ ಅವಮಾನ : ಗಾಯಕ ಸೋನು ನಿಗಮ್ ವಿರುದ್ಧ ಎಫ್‍ಐಆರ್ ದಾಖಲು
ಸೋನು ನಿಗಮ್ | PC : X
ಬೆಂಗಳೂರು : ಕನ್ನಡಿಗರು ಹಾಗೂ ಕನ್ನಡ ಭಾಷೆಗೆ ಸಂಬಂಧಪಟ್ಟಂತೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಆರೋಪದಡಿ ಖ್ಯಾತ ಗಾಯಕ ಸೋನು ನಿಗಮ್ ವಿರುದ್ಧ ಇಲ್ಲಿನ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡ ಬಣದ ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಧರ್ಮರಾಜ್ ಎ. ಎಂಬುವರು ನೀಡಿದ ದೂರಿನನ್ವಯ ಆವಲಹಳ್ಳಿ ಠಾಣಾ ಪೊಲೀಸರು ಪ್ರಕರಣ ದಾಖಲಸಿಕೊಂಡಿದ್ದು, ಕ್ರಮ ಜರುಗಿಸಿರುವುದಾಗಿ ತಿಳಿಸಿದ್ದಾರೆ.
ಇತ್ತೀಚೆಗೆ ಬೆಂಗಳೂರಿನ ಇಂಜಿನಿಯರಿಂಗ್ ಕಾಲೇಜ್‍ವೊಂದರಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ಸೋನು ನಿಗಮ್ ಅವರಿಗೆ ಅಲ್ಲಿನ ವಿದ್ಯಾರ್ಥಿಗಳು ಕನ್ನಡ ಗೀತೆಯನ್ನು ಹಾಡಲು ಕೋರಿದಾಗ ಇದಕ್ಕೆ ಪ್ರತಿಯಾಗಿ ಸೋನು ನಿಗಮ್ ಅವರು ‘ಕನ್ನಡ, ಕನ್ನಡ, ಕನ್ನಡ, ಇದೇ ಕಾರಣಕ್ಕೆ ಪಹಲ್ಗಾಮ್‍ನಲ್ಲಿ ಉಗ್ರರ ದಾಳಿ ಸಂಭವಿಸಿತು’ ಎಂದು ಹೇಳಿಕೆ ನೀಡಿದ್ದರು.
ಅವರ ಈ ಹೇಳಿಕೆಯು ಕನ್ನಡಿಗರ ಭಾವನೆಗಳಿಗೆ ತೀವ್ರ ಘಾಸಿಯನ್ನುಂಟು ಮಾಡಿದ್ದು, ಕರ್ನಾಟಕದ ವಿವಿಧ ಭಾಷಿಕ ಸಮುದಾಯಗಳ ನಡುವೆ ದ್ವೇಷವನ್ನು ಉಂಟುಮಾಡುತ್ತದೆಯಲ್ಲದೆ ಹಿಂಸೆಗೆ ಪ್ರಚೋದನೆ ನೀಡುವಂತಿವೆ. ಕನ್ನಡ ಗೀತೆಯ ಕೋರಿಕೆಯನ್ನು ಭಯೋತ್ಪಾದಕ ಕೃತ್ಯಕ್ಕೆ ಥಳುಕು ಹಾಕುವ ಮೂಲಕ ಸೋನು ನಿಗಮ್ ಅವರು ಕನ್ನಡಿಗ ಸಮುದಾಯವನ್ನು ಅವಮಾನಿಸಿದ್ದು, ಆತನಿಂದ ಕನ್ನಡ ಗೀತೆಗಳ ಹಾಡಿಸುವುದನ್ನು ನಿಷೇಧ ಮಾಡಬೇಕು, ಆತ ಕನ್ನಡಿಗರ ಕ್ಷಮೆ ಕೇಳಬೇಕೆಂದು ಆಗ್ರಹಿಸಿ ಕರವೇ ನಿಯೋಗ ಆವಲಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿತ್ತು.