ಅಗ್ನಿ ಅವಘಡ ಪ್ರಕರಣ | 19 ಖಾಸಗಿ ಬಸ್‍ಗಳು ಬೆಂಕಿಗಾಹುತಿ, ವರ್ಕ್‍ಶಾಪ್ ಮಾಲಕನ ವಿರುದ್ಧ ಕ್ರಮಕ್ಕೆ ಸೂಚನೆ
ಬೆಂಗಳೂರು, ಅ.30: ರಾಜಧಾನಿ ಬೆಂಗಳೂರಿನ ಹೊಸಕೆರೆಹಳ್ಳಿ ವ್ಯಾಪ್ತಿಯಲ್ಲಿರುವ ವೀರಭದ್ರನಗರದ ಗ್ಯಾರೇಜ್‍ವೊಂದರಲ್ಲಿ ಸೋಮವಾರ ಬೆಳಗ್ಗೆ 11.30ರ ಸುಮಾರಿಗೆ ಸಂಭವಿಸಿದ ಆಕಸ್ಮಿಕ ಅಗ್ನಿ ಅವಘಡದಲ್ಲಿ ಸುಮಾರು 19 ಖಾಸಗಿ ಬಸ್‍ಗಳು ಬೆಂಕಿಗಾಹುತಿಯಾಗಿವೆ.
ಇತ್ತೀಚೆಗೆ ಅತ್ತಿಬೆಲೆ ಪಟಾಕಿ ದುರಂತ, ಕೋರಮಂಗಲದ ಪಬ್‍ನಲ್ಲಿ ಸಿಲಿಂಡರ್ ಸ್ಪೋಟ ಸೇರಿದಂತೆ ಒಂದು ತಿಂಗಳಿನಲ್ಲಿ ಸುಮಾರು 5ರಿಂದ 6 ಬೆಂಕಿ ಅವಘಡಗಳ ಪ್ರಕರಣಗಳು ನಗರದಲ್ಲಿ ವರದಿಯಾಗಿವೆ.
ಈಗ ವೀರಭದ್ರನಗರದ ಗ್ಯಾರೇಜ್‍ನಲ್ಲಿ ಮತ್ತೊಂದು ಅವಘಡ ನಡೆದಿದ್ದು, ಮೊದಲು ಒಂದು ಬಸ್‍ಗೆ ಹೊತ್ತಿಕೊಂಡ ಬೆಂಕಿ ಗಾಳಿಗೆ ಪಕ್ಕದಲ್ಲಿ ನಿಲ್ಲಿಸಿದ್ದ ಇತರೆ ಬಸ್‍ಗಳಿಗೂ ಬೆಂಕಿ ವ್ಯಾಪಿಸಿದೆ. ಶ್ರೀನಿವಾಸ್ ಎಂಬುವರ ಮಾಲಕತ್ವದ ಎಸ್.ವಿ.ಕೋಚ್ ವಕ್ರ್ಸ್ ಹೆಸರಿನ ಗ್ಯಾರೇಜ್ ಇದಾಗಿದ್ದು, ಇಲ್ಲಿ ಹಲವು ವರ್ಷಗಳಿಂದ ಹೊಸ ಮತ್ತು ಹಳೆ ಬಸ್‍ಗಳ ಚಾರ್ಸಿಗೆ ಬಾಡಿ ಅಳವಡಿಸುವ ಕಾರ್ಯ ಮಾಡಲಾಗುತ್ತಿತ್ತು. ಹಠಾತ್ ಕಾಣಿಸಿಕೊಂಡ ಬೆಂಕಿ ಗ್ಯಾರೇಜ್‍ನಲ್ಲಿ ನಿಂತಿರುವ ಬಸ್‍ಗಳಿಗೆ ಆವರಿಸಿದೆ. ಘಟನೆಯಲ್ಲಿ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ ಎನ್ನಲಾಗಿದೆ.
ಅಗ್ನಿ ಅವಘಡ ಕಂಡು ಬಂದ ತಕ್ಷಣ ಸ್ಥಳೀಯರು ಹತ್ತಿರದ ಪೊಲೀಸ್ ಠಾಣೆ ಮತ್ತು ಬಿಬಿಎಂಪಿಗೆ ಮಾಹಿತಿ ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ದೌಡಾಯಿಸಿ ಬಂದು ಬೆಂಕಿ ನಂದಿಸುವ ಕಾರ್ಯ ನಡೆಸಿದ್ದಾರೆ.
ಈ ಅವಘಡದಿಂದ ಶೆಡ್‍ನಿಂದ ದಟ್ಟ ಹೊಗೆ ಬರಲಾರಂಭಿಸಿದ್ದರಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೆಲ ಸಮಯ ಆತಂಕದ ಪರಿಸ್ಥಿತಿ ಉಂಟಾಗಿತ್ತು. ಆದರೆ, ಈವರೆಗೂ ಘಟನೆಗೆ ನಿಖರ ಕಾರಣವೇನೆಂಬುದು ಇನ್ನೂ ತಿಳಿದಿಲ್ಲ. ಬೆಂಕಿ ಹೊತ್ತಿ ಉರಿಯುವಾಗ ಸ್ಥಳದಲ್ಲಿ 12 ಗ್ಯಾಸ್ ಸಿಲಿಂಡರ್ ಗಳು ಇದ್ದವು. ಅದೃಷ್ಟವಶಾತ್ ಸಿಲಿಂಡರ್ ಗೆ ತಾಗಿಲ್ಲ. ಅಲ್ಲದೆ 30 ಬಸ್‍ಗಳಲ್ಲಿದ್ದ ಬ್ಯಾಟರಿಗಳನ್ನು ತೆಗೆದಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ ಎಂದು ಹೇಳಲಾಗಿದೆ.
ಸ್ಥಳಕ್ಕೆ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ರಾಹುಲ್ ಕುಮಾರ್ ಶಹಪುರ್‍ವಾಡ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಇನ್ನೂ ಗ್ಯಾರೇಜ್ ಇರುವ ಮುಖ್ಯರಸ್ತೆಯಲ್ಲಿ ಸಂಚಾರ ದಟ್ಟಣೆ ಕೂಡ ಉಂಟಾಗಿದ್ದರಿಂದ ಪೊಲೀಸರು ಸಂಚಾರ ದಟ್ಟಣೆಯನ್ನು ತಿಳಿಗೊಳಿಸಿದ್ದಾರೆ.
ಇನ್ನು ಗ್ಯಾರೇಜ್‍ನಲ್ಲಿ ಸಾಮಾನ್ಯವಾಗಿ ನಿತ್ಯ 25ರಿಂದ 30 ಬಸ್‍ಗಳು ರಿಪೇರಿಗೆ ಇರುತ್ತವೆ. ಜತೆಗೆ 30 ಜನರು ಅಲ್ಲಿ ದಿನನಿತ್ಯ ಕೆಲಸ ಮಾಡುತ್ತಾರೆ. ಸೋಮವಾರ ಕಟ್ಟಿಂಗ್ ಹಾಗೂ ವೆಲ್ಡಿಂಗ್ ಕೆಲಸ ಮಾಡುವ ವೇಳೆ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇರಬಹುದಾಗಿದೆ ಎಂದು ಶಂಕೆ ವ್ಯಕ್ತವಾಗಿದೆ. ಈ ಹಿನ್ನಲೆಯಲ್ಲಿ ಅಗ್ನಿ ಅವಘಡ ಸಂಭವಿಸಿದ ಸ್ಥಳಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
‘ಹತ್ತು ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದ್ದು, ಅವಘಡದಲ್ಲಿ 19 ಬಸ್‍ಗಳು ಸಂಪೂರ್ಣವಾಗಿ ಸುಟ್ಟು ಹೋಗಿವೆ. ಬೆಂಕಿ ಕಾಣಿಸಿಕೊಂಡ ನಂತರ 10 ಬಸ್‍ಗಳನ್ನು ಸ್ಥಳಾಂತರ ಮಾಡಲಾಗಿದೆ. ಯಾವುದೇ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರಲಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ’
-ಗುರುಲಿಂಗಯ್ಯ, ಅಗ್ನಿಶಾಮಕ ದಳದ ಉಪ ನಿರ್ದೇಶಕ
----------------------------------------------------------
ಎಲ್ಲ ವರ್ಕ್‍ಶಾಪ್‍ಗಳ ಪರಿಶೀಲನೆಗೆ ಸೂಚನೆ: ರಾಮಲಿಂಗಾ ರೆಡ್ಡಿ
‘ಹೊಸಕೆರೆಹಳ್ಳಿಯ ವೀರಭದ್ರನಗರದಲ್ಲಿ ಶ್ರೀನಿವಾಸ್ ಎಂಬುವರಿಗೆ ಸೇರಿದ ಎಸ್‍ವಿ ಕೋಚ್ ವರ್ಕರ್ಸ್ ನಲ್ಲಿ ಅಗ್ನಿ ಅವಘಡ ಸಂಭವಿಸಿ ಸುಮಾರು 19 ಬಸ್‍ಗಳು ಸುಟ್ಟು ಹೋಗಿವೆ. ವೆಲ್ಡಿಂಗ್ ಮಾಡುತ್ತಿದ್ದ ವೇಳೆ ಬೆಂಕಿ ತಗುಲಿ ಈ ಘಟನೆ ಸಂಭವಿಸಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ. ಈ ಪ್ರಕರಣದಲ್ಲಿ ಮಾಲಕನ ನಿರ್ಲಕ್ಷ್ಯ ಎದ್ದು ಕಾಣುತ್ತದೆ. ವರ್ಕ್‍ಶಾಪ್ ಮಾಲಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಹಾಗೆಯೇ ನಗರದ ಎಲ್ಲಾ ವರ್ಕ್‍ಶಾಪ್‍ಗಳ ಪರಿಶೀಲನೆಗೆ ಸೂಚನೆ ನೀಡಿದ್ದೇನೆ’
-ರಾಮಲಿಂಗಾ ರೆಡ್ಡಿ, ಸಾರಿಗೆ ಸಚಿವ
‘ಪೊಲೀಸರ ಪ್ರಕಾರ ವೆಲ್ಡಿಂಗ್ ಮಾಡುವಾಗ ಬೆಂಕಿ ಹೊತ್ತಿಕೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮುಂದೆ ಯಾರೇ ಆಗಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಮತ್ತೆ ಇಂತಹ ಘಟನೆ ನಡೆಯದಂತೆ ಅಗತ್ಯ ಕ್ರಮ ಕೈಗೊಳುತ್ತೇವೆ. ಅಗ್ನಿಶಾಮಕದಳ ಮತ್ತು ಪೊಲಿಸರು ಈ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ’
-ಡಿ.ಕೆ.ಶಿವಕುಮಾರ್, ಬೆಂಗಳೂರು ನಗರಾಭಿವೃದ್ಧಿ ಸಚಿವ
--------------------------------
‘ನಮ್ಮ ಬಸ್ ಅಪಘಾತವಾಗಿ ಶೇಪ್ ಡ್ಯಾಮೇಜ್ ಆಗಿತ್ತು. ರಿಪೇರಿ ಮಾಡಲು ಕೊಟ್ಟು, ಆರು ತಿಂಗಳಾಗಿತ್ತು. ಇನ್ನೂ ತಯಾರಾಗಿರಲಿಲ್ಲ. ಇನ್ನು ನಾಲ್ಕು ದಿನದಲ್ಲಿ ತಯಾರಾಗುತ್ತದೆಂದು ಗ್ಯಾರೇಜ್ ಮಾಲಕರು ತಿಳಿಸಿದ್ದರು. ಇದೀಗ ಬೆಂಕಿ ಅನಾಹುತದಿಂದ 65ಲಕ್ಷ ರೂ.ನಷ್ಟವಾಯಿತು. ಬೆಂಗಳೂರು-ಹೈದ್ರಾಬಾದ್ ಮಾರ್ಗವಾಗಿ ನಿತ್ಯವೂ ನಮ್ಮ ಬಸ್ ಸಂಚರಿಸುತ್ತಿತ್ತು’
-ಮುಹಮ್ಮದ್ ಝಬೀಉಲ್ಲಾ, ನಿದಾ ಟ್ರಾವೆಲ್ಸ್ ಮಾಲಕ