ಸೆ.11ರಿಂದ ನಾಲ್ಕು ದಿನ ಕಾಮನ್‍ವೆಲ್ತ್ ಸಂಸದೀಯ ಸಮ್ಮೇಳನ : ಯು.ಟಿ.ಖಾದರ್
ಯು.ಟಿ.ಖಾದರ್
ಬೆಂಗಳೂರು, ಆ.29 : ಕಾಮನ್ ವೆಲ್ತ್ ಸಂಸದೀಯ ಸಂಘದ ಅಖಿಲ ಭಾರತ ಮಟ್ಟದ ಸ್ಪೀಕರ್‌ಗಳ ಸಮಾವೇಶವನ್ನು ಬೆಂಗಳೂರಿನಲ್ಲಿ ಸೆ.11ರಿಂದ ನಾಲ್ಕು ದಿನಗಳ ಆಯೋಜನೆ ಮಾಡಲಾಗಿದ್ದು, ಅಂತರ್ ರಾಷ್ಟ್ರೀಯ ಭಾಷಣಕಾರರನ್ನು ಆಹ್ವಾನಿಸಲಾಗಿದೆ ಎಂದು ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, "ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಸೆ.11ರಂದು ಸಂಜೆ 5 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಸಮಾವೇಶ ಉದ್ಘಾಟಿಸಲಿದ್ದಾರೆ. ದೇಶದ ಎಲ್ಲ ರಾಜ್ಯಗಳ ಸ್ಪೀಕರ್ ಹಾಗೂ ಉಪಸ್ಪೀಕರ್ ಗಳು, ವಿಧಾನ ಪರಿಷತ್ ನ ಸಭಾಪತಿ, ಉಪ ಸಭಾಪತಿಗಳು, ಕಾರ್ಯದರ್ಶಿಗಳು, ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.
ಪ್ರಜಾಪ್ರಭುತ್ವ ಬಲಿಷ್ಠ ಗೊಳಿಸುವುದು, ಸ್ಪೀಕರ್ ಗಳ ಪಾತ್ರ ಸೇರಿದಂತೆ ಕೆಲವು ನಿರ್ದಿಷ್ಟ ವಿಷಯಗಳ ಮೇಲೆ ಸಮ್ಮೇಳನದಲ್ಲಿ ಚರ್ಚಿಸಲಾಗುತ್ತದೆ. ಅದೇ ರೀತಿ, ಉದ್ಘಾಟನೆ ಮತ್ತು ಸಮಾರೋಪ ಕಾರ್ಯಕ್ರಮಗಳಿಗೆ ಶಾಸಕರನ್ನು ಆಹ್ವಾನಿಸಲಾಗುವುದು. ನಂತರದ ಕಾರ್ಯಕ್ರಮಗಳಲ್ಲಿ ಆಹ್ವಾನಿತರು ಮಾತ್ರ ಭಾಗವಹಿಸುತ್ತಾರೆ ಎಂದು ಅವರು ಹೇಳಿದರು.
ಸಮ್ಮೇಳನದಲ್ಲಿ ಭಾಗವಹಿಸುವ ಸ್ಪೀಕರ್‌ಗಳಿಗೆ ರಾಜ್ಯ ಪ್ರವಾಸಕ್ಕೆ ಕರೆದೊಯ್ಯಲು ಯೋಚಿಸಲಾಗಿದ್ದು, ಅದರಂತೆ ಮೈಸೂರು ಪ್ರವಾಸ ಕೈಗೊಳ್ಳಲಿದ್ದಾರೆ. ಒಟ್ಟಾರೆ, ಪ್ರಥಮ ಬಾರಿಗೆ ಕರ್ನಾಟಕಕ್ಕೆ ಈ ಸಮ್ಮೇಳನದ ಆತಿಥ್ಯ ವಹಿಸುವ ಅವಕಾಶ ದೊರೆತಿದೆ ಎಂದ ಅವರು, ಸಂವಿಧಾನ, ಸ್ಪೀಕರ್‌ಗಳ ಜವಾಬ್ದಾರಿ, ಪ್ರಜಾಪ್ರಭುತ್ವ ಕುರಿತು ಮಹತ್ವದ ಚರ್ಚೆಗಳು ನಡೆಯಲಿವೆ ಎಂದು ತಿಳಿಸಿದರು.
ನೇಮಕಾತಿ ವಿಳಂಬ: ಇ-ವಿಧಾನ ಅಳವಡಿಕೆ ಕುರಿತು ಮಾತನಾಡಿದ ಖಾದರ್ ಅವರು, ಇದರಲ್ಲಿ ಕೆಲವು ತಾಂತ್ರಿಕ ಸವಾಲುಗಳಿದ್ದು, ಅದರ ಸಾಧಕ-ಬಾಧಕಗಳನ್ನು ಪರಿಶೀಲಿಸಲಾಗುತ್ತಿದೆ. ದೂರ ನಿಂತು ಟೀಕೆ ಮಾಡುವುದು ಸುಲಭ, ಆದರೆ ಆಟವಾಡುವವನಿಗೇ ಅದರ ಕಷ್ಟ ಗೊತ್ತು ಎಂದು ಮಾರ್ಮಿಕವಾಗಿ ಉತ್ತರಿಸಿದರು.
ವಿಧಾನಸಭೆಯ ಕಾರ್ಯದರ್ಶಿ-2 ನೇಮಕಾತಿ ವಿಳಂಬದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸ್ಪೀಕರ್, ಸದನ ಮತ್ತು ಇತರೆ ವಿಷಯಗಳಿಂದಾಗಿ ಆಡಳಿತಾತ್ಮಕ ವಿಚಾರಗಳಿಗೆ ಸಮಯ ಸಿಕ್ಕಿಲ್ಲ. ಸದ್ಯಕ್ಕೆ ಆ ಪ್ರಕ್ರಿಯೆ ಸ್ಥಗಿತಗೊಂಡಿದ್ದು, ಶೀಘ್ರದಲ್ಲೇ ಗಮನ ಹರಿಸಲಾಗುವುದು ಎಂದರು.
ದಸರಾ ಉದ್ಘಾಟನೆ ವಿವಾದದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್, ಆಡಳಿತ ಮತ್ತು ಪ್ರತಿಪಕ್ಷಗಳು ಅದನ್ನು ನೋಡಿಕೊಳ್ಳುತ್ತವೆ. ಸಂವಿಧಾನದ ಚೌಕಟ್ಟಿನಲ್ಲಿ ನಾನು ಹೆಚ್ಚು ಮಾತನಾಡುವುದು ಸರಿಯಲ್ಲ ಎಂದು ನುಡಿದರು.