×
Ad

ಕರ್ನೂಲ್ ಬಸ್ ದುರಂತ: ಒಂದೇ ಕುಟುಂಬದ ನಾಲ್ವರು ಸಹಿತ ಬೆಂಗಳೂರಿನಲ್ಲಿ ನೆಲೆಸಿದ್ದ ಏಳು ಮಂದಿ ಸಜೀವ ದಹನ

Update: 2025-10-24 21:33 IST

ಕರ್ನೂಲ್ ಬಸ್ ದುರಂತದಲ್ಲಿ ಮೃತಪಟ್ಟ ಒಂದೇ ಕುಟುಂಬದ ನಾಲ್ವರು 

ಬೆಂಗಳೂರು: ಆಂಧ್ರಪ್ರದೇಶದ ಕರ್ನೂಲ್‍ನಲ್ಲಿ ನಡೆದ ಭೀಕರ ಬಸ್ ದುರಂತದಲ್ಲಿ ಬೆಂಗಳೂರಿನಲ್ಲಿ ನೆಲೆಸಿದ್ದ ಒಂದೇ ಕುಟುಂಬದ ನಾಲ್ವರು ಹಾಗೂ ಮೂವರು ಸಾಫ್ಟ್ ವೇರ್ ಇಂಜಿನಿಯರ್ ಗಳು ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ.

ನೆಲ್ಲೂರು ಜಿಲ್ಲೆಯ ಒಂದೇ ಕುಟುಂಬದವರಾದ ಗೊಲ್ಲ ರಮೇಶ್(35), ಪತ್ನಿ ಅನುಷಾ(30) ಅವರ ಮಕ್ಕಳಾದ ಮಾನ್ವಿತಾ(10) ಹಾಗೂ ಮನೀಶ್(12) ಎಂಬವರು ಮೃತಪಟ್ಟಿದ್ದರೆ, ಸಾಫ್ಟ್ ವೇರ್ ಎಂಜಿನಿಯರ್ ಗಳಾದ ಅನುಷಾರೆಡ್ಡಿ (22), ಗನ್ನಮನೇನಿ ಧಾತ್ರಿ(27) ಹಾಗೂ ಚಂದನಾ(23) ಮೃತಪಟ್ಟಿದ್ದಾರೆ. ಈ ಏಳು ಮಂದಿ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ.

ಮೃತಪಟ್ಟ ಗೊಲ್ಲ ರಮೇಶ್ ಕುಟುಂಬವು ಮೂಲತಃ ನೆಲ್ಲೂರು ಜಿಲ್ಲೆಯ ವಿಂಜಾಮುರು ಮಂಡಲದ ಗೊಲ್ಲವರಿಪಳ್ಳಿಯವರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿತ್ತು. ಪ್ರಾಥಮಿಕ ಮಾಹಿತಿ ಪ್ರಕಾರ ಗೊಲ್ಲರಮೇಶ್ ಕುಟುಂಬ ದೀಪಾವಳಿ ಹಬ್ಬ ಆಚರಣೆಗೆಂದು ನೆಲ್ಲೂರಿಗೆ ತೆರಳಿತ್ತು ಎನ್ನಲಾಗಿದೆ.

ಇನ್ನು, ಈ ದುರಂತದಲ್ಲಿ ಮೃತಪಟ್ಟ ಮೂವರು ಸಾಫ್ಟ್ ವೇರ್ ಎಂಜಿನಿಯರ್‍ಗಳ ಪೈಕಿ ಅನುಷಾ ರೆಡ್ಡಿ ಎಂಬವರು ಮೂಲತಃ ತೆಲಂಗಾಣ ರಾಜ್ಯದ ಯದಾದ್ರಿ ಭುವನಗಿರಿ ಜಿಲ್ಲೆಯ ವಸ್ತಕೊಂಡೂರು ಗ್ರಾಮದವರು. ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಕೆಲಸ ಮಾಡಿಕೊಂಡಿದ್ದರು. ದೀಪಾವಳಿ ಹಬ್ಬ ಮುಗಿಸಿಕೊಂಡು ಹಿಂತಿರುಗಿ ಬೆಂಗಳೂರಿಗೆ ಬರುತ್ತಿದ್ದ ವೇಳೆ ಬಸ್ ದುರಂತದಲ್ಲಿ ಅನುಷಾ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮತ್ತೊಬ್ಬ ಸಾಫ್ಟ್ ವೇರ್ ಎಂಜಿನಿಯರ್ ಆದ ಗನ್ನಮನೇನಿ ಧಾತ್ರಿ ಅವರು ಮೂಲತಃ ಆಂಧ್ರಪ್ರದೇಶದ ಬಾಪಟ್ಲ ಜಿಲ್ಲೆಯವರು. ತನ್ನ ಮಾವನ ಮನೆಯಿಂದ ಬೆಂಗಳೂರಿಗೆ ವಾಪಸ್ ಬರುತ್ತಿದ್ದ ವೇಳೆ ಬಸ್ ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.

ಮತ್ತೋರ್ವ ಸಾಫ್ಟ್ ವೇರ್ ಎಂಜಿನಿಯರ್ ಚಂದನಾ ಅವರು ಮೂಲತಃ ತೆಲಂಗಾಣದ ಮೆದಕ್ ಜಿಲ್ಲೆಯವರು. ಇವರು ತನ್ನ ತಾಯಿ ಸಂಧ್ಯಾ ಅವರೊಂದಿಗೆ ಬೆಂಗಳೂರಿಗೆ ಬರುತ್ತಿದ್ದರು. ಗಂಡನ ಜತೆ ದುಬೈನಲ್ಲಿ ನೆಲೆಸಿದ್ದ ಸಂಧ್ಯಾ ಅವರು ಮಗಳನ್ನು ಬೆಂಗಳೂರಿನಲ್ಲಿ ಬಿಟ್ಟು ಹೋಗಲು ಆಗಮಿಸುತ್ತಿದ್ದರು. ಆದರೆ, ಬಸ್ ದುರಂತದಲ್ಲಿ ತಾಯಿ-ಮಗಳು ಇಬ್ಬರೂ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

‘ಇದೇ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ ಬೆಂಗಳೂರು ಮೂಲದ ಐವರು ಅದೃಷ್ಟವಶಾತ್ ಬದುಕುಳಿದಿದ್ದಾರೆ ಎಂದು ತಿಳಿದು ಬಂದಿದೆ. ವೇಣುಗೊಂಡ, ಶಿವ, ಗ್ಲೋರಿಯಾ ಈಸ್ಟಾ ಸ್ಯಾಮ್, ಚರಿತ್ ಮತ್ತು ಮೊಹಮ್ಮದ್ ಖಾಜಿರ್ ಎಂಬವರು ದುರಂತದಲ್ಲಿ ಬದುಕುಳಿದ ಬೆಂಗಳೂರಿನವರಾಗಿದ್ದಾರೆ ಎನ್ನಲಾಗಿದೆ.

‘ಬಸ್ ಹೊತ್ತಿ ಉರಿದ 45 ನಿಮಿಷಗಳ ಬಳಿಕ ಅಗ್ನಿಶಾಮಕ ದಳದವರು ಬಂದರು. ಕರ್ನೂಲ್‍ನಿಂದ 20 ಕಿ.ಮೀ. ದೂರದಲ್ಲಿ ಘಟನೆ ಸಂಭವಿಸಿದೆ. ದ್ವಿಚಕ್ರ ವಾಹನಕ್ಕೆ ಬಸ್ ಗುದ್ದಿದ ಬಳಿಕ ಬೆಂಕಿ ಹೊತ್ತಿಕೊಂಡಿದೆ. ನಮ್ಮ ಕಣ್ಣ ಮುಂದೆಯೇ ಬಸ್‍ನಲ್ಲಿದ್ದ ಸಹ ಪ್ರಯಾಣಿಕರು ಹೊತ್ತಿ ಉರಿದು ಹೋದರು. ನಾವು ಏನೂ ಮಾಡಲಾಗದೆ ಅಸಹಾಯಕರಾಗಿ ಬಸ್‍ನಿಂದ 5 ಮೀಟರ್ ಅಂತರದಲ್ಲಿ ನಿಂತಿದ್ದೆವು’

-ವೇಣುಗೊಂಡ, ಬಸ್‍ನಲ್ಲಿದ್ದ ಬೆಂಗಳೂರು ಮೂಲದ ವ್ಯಕ್ತಿ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News