×
Ad

ರಾಜ್ಯಪಾಲರ ಕುರಿತು ಹೇಳಿಕೆ: ವಿಪಕ್ಷಗಳ ಒತ್ತಾಯ ಮಣಿದು ವಿಷಾದ ವ್ಯಕ್ತಪಡಿಸಿದ ಬಿ.ಕೆ. ಹರಿಪ್ರಸಾದ್

Update: 2026-01-30 00:28 IST

ಬೆಂಗಳೂರು: ‘ರಾಜ್ಯಪಾಲರಿಗೆ ಕೈ ತೋರಿಸಿ ಮಾತನಾಡುವ ಬದಲು ಕಾಲು ತೋರಿಸುವುದಕ್ಕಾಗುತ್ತಾ?’ ಎಂದು ಕಾಂಗ್ರೆಸ್ ಹಿರಿಯ ಸದಸ್ಯ ಬಿ.ಕೆ.ಹರಿಪ್ರಸಾದ್ ಪದಬಳಕೆ ಮಾಡುತ್ತಿದ್ದಂತೆ ವಿಧಾನ ಪರಿಷತ್‍ನಲ್ಲಿ ಗುರುವಾರ ಕೋಲಾಹಲ ಸೃಷ್ಟಿಯಾಗಿ, ಸದನದಿಂದ ಹರಿಪ್ರಸಾದ್‍ರನ್ನು ಅಮಾನತು ಮಾಡಬೇಕೆಂದು ವಿಪಕ್ಷ ಸದಸ್ಯರು ಆಗ್ರಹಿಸಿದರು.

ಗುರುವಾರ ಬೆಳಗ್ಗೆ ವಿಧಾನಪರಿಷತ್ ಕಲಾಪದಲ್ಲಿ ಬಿಜೆಪಿ ಸದಸ್ಯರಾದ ಎನ್.ರವಿಕುಮಾರ್ ಮತ್ತು ಡಿ.ಎಸ್.ಅರುಣ್ ಮಾತನಾಡಿ, ರಾಜ್ಯಪಾಲರಿಗೆ ಅಡ್ಡಿ ಮಾಡಿ, ಕೈ ಬೆರಳು ತೋರಿಸಿದ ಬಿ.ಕೆ.ಹರಿಪ್ರಸಾದ್ ಅವರೇ ಈ ಸದನದ ಕಲಾಪಕ್ಕೆ ಅಡ್ಡಿಯಾಗಲು ಮೂಲ ಕಾರಣಕರ್ತರು. ಆದ್ದರಿಂದ ಅವರನ್ನು ಅಮಾನತು ಮಾಡಬೇಕು ಎಂದು ಸಭಾಪತಿಯವರನ್ನು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪ್ರತಿಕ್ರಿಯಿಸಿದ ಬಿ.ಕೆ.ಹರಿಪ್ರಸಾದ್, ರಾಷ್ಟ್ರಗೀತೆಗೆ ಅಗೌರವ ತೋರಿರುವ ರಾಜ್ಯಪಾಲರಿಗೆ ಕೈ ತೋರಿಸಿ ಮಾತನಾಡುವ ಬದಲು ಕಾಲು ತೋರಿಸಕಾಗುತ್ತಾ? ಎಂದು ಪ್ರತ್ಯುತ್ತರಿಸಿದರು.

ಈ ಮಾತಿಗೆ ಕೆರಳಿದ ವಿಪಕ್ಷ ಸದಸ್ಯರು ಹರಿಪ್ರಸಾದ್‍ರನ್ನು ಸದನದಿಂದ ಹೊರಹಾಕಬೇಕೆಂದು ಕೋಲಾಹಲ ಸೃಷ್ಟಿಸಿದಾಗ ಸದನದಲ್ಲಿ ಭಾರೀ ಗದ್ದಲ ಉಂಟಾಯಿತು.

ಈ ಹಂತದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ವಿಪಕ್ಷ ನಾಯಕರು ಹಾಗೂ ಸದಸ್ಯರು ಬಿ.ಕೆ.ಹರಿಪ್ರಸಾದ್ ಅವರ ವಿರುದ್ಧ ಜ.23, 28, 29 ರಂದು ಅವಾಚ್ಯ ಶಬ್ದಗಳಿಂದ ಮಾತನಾಡಿರುವ ಕುರಿತು ದೂರು ಕೊಟ್ಟಿದ್ದಾರೆ. ಇದಕ್ಕೆ ನಿಮ್ಮ ಅಭಿಪ್ರಾಯವೇನು ಎಂದು ಹರಿಪ್ರಸಾದ್ ಅವರಿಗೆ ಪ್ರಶ್ನಿಸಿದರು.

ಈ ವೇಳೆ ಬಿ.ಕೆ.ಹರಿಪ್ರಸಾದ್ ಮಾತನಾಡಿ, ನನ್ನ ಬಗ್ಗೆ ಆರೋಪ ಮಾಡಿದಾಗ ಮಾತನಾಡಿದ್ದೇನೆ. ನನ್ನ ಮಾತಿನಿಂದ ನೋವಾಗಿದ್ದರೆ ಅದನ್ನು ವಾಪಸ್ ಪಡೆಯುತ್ತೇನೆ ಎಂದರು.

ಈ ವೇಳೆ ಸಭಾಪತಿ ಮಾತನಾಡಿ, ಸದನದಲ್ಲಿ ಇಂತಹ ಮಾತುಗಳು ಶೋಭೆ ತರುವುದಿಲ್ಲ. ನೀವು ಹಿರಿಯರಿದ್ದೀರಾ, ದೊಡ್ಡ ಮನಸ್ಸು ಮಾಡಿ ವಿಷಾದ ವ್ಯಕ್ತಪಡಿಸಿ ಎಂದು ಹೇಳಿದರು. ಆಗ ಸಭಾಪತಿ ಮಾತಿಗೆ ಒಪ್ಪಿದ ಬಿ.ಕೆ.ಹರಿಪ್ರಸಾದ್ ವಿಷಾದ ವ್ಯಕ್ತಪಡಿಸಿದರು. ಇದಕ್ಕೆ ಒಪ್ಪದ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಹರಿಪ್ರಸಾದ್ ವಿರುದ್ಧ ಕ್ರಮವಾಗಬೇಕು, ಅಮಾನತು ಆಗಬೇಕು ಎಂದು ಪಟ್ಟುಹಿಡಿದರು.

ಬಳಿಕ ಸಭಾಪತಿ ಹೊರಟ್ಟಿಯವರು, ಹರಿಪ್ರಸಾದ್ ವಿಷಾದ ವ್ಯಕ್ತಪಡಿಸಿದ್ದಾರೆ. ಮುಂದೆ ಯಾರು ಹೀಗೆ ಮಾತನಾಡಬೇಡಿ. ಸದನಕ್ಕೆ ಇದು ಗೌರವವಲ್ಲ ಎಂದರು. ಸಭಾಪತಿಗಳ ಮಾತಿಗೆ ಒಪ್ಪದ ವಿಪಕ್ಷ ಸದಸ್ಯರು ಹರಿಪ್ರಸಾದ್ ಅಮಾನತು ಮಾಡುವಂತೆ ಘೋಷಣೆ ಕೂಗಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News