ಗಾಂಧಿಯನ್ನು ಕೊಂದ ವಿಚ್ಛಿದ್ರಕಾರಿ ಮನಸ್ಥಿತಿಗಳೇ ಇಂದು ಗಾಂಧಿಯ ಸಿದ್ಧಾಂತವನ್ನು ಕೊಲ್ಲುತ್ತಿವೆ : ಸಿಎಂ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು : ಅಂದು ಮಹಾತ್ಮ ಗಾಂಧಿಯನ್ನು ಹತ್ಯೆಗೈದ ಮನಸ್ಥಿತಿಗಳು ಇಂದು ಗಾಂಧಿಯ ಸಿದ್ಧಾಂತವನ್ನು ನಿತ್ಯವೂ ಕೊಲ್ಲುತ್ತಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ (X) ನಲ್ಲಿ ಪೋಸ್ಟ್ ಮಾಡಿರುವ ಅವರು, ಇಡೀ ವಿಶ್ವವೇ ಒಪ್ಪಿಕೊಂಡು ಅಪ್ಪಿಕೊಂಡಿರುವ ಗಾಂಧಿ ಹಾಗೂ ಗಾಂಧಿವಾದವನ್ನು ಭಾರತದಲ್ಲಿ ಉಳಿಸಿಕೊಳ್ಳಬೇಕಿರುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದ್ದಾರೆ.
ದ್ವೇಷ, ಹಿಂಸೆ ಮತ್ತು ಮತೀಯವಾದದತ್ತ ವಾಲುತ್ತಿದ್ದ ಭಾರತೀಯ ಸಮಾಜವನ್ನು ಸತ್ಯ, ಶಾಂತಿ, ಪ್ರೀತಿ ಮತ್ತು ಸೌಹಾರ್ದತೆಯ ಹಾದಿಯಲ್ಲಿ ಮುನ್ನಡೆಸಿದ ಮಹಾನ್ ಸಂತ ಮಹಾತ್ಮ ಗಾಂಧಿಯವರು, ಅದೇ ಮೌಲ್ಯಗಳ ಕಾರಣಕ್ಕೆ ಕೊನೆಗೆ ಹುತಾತ್ಮರಾಗಬೇಕಾದದ್ದು ದುರಂತಕರ ಸಂಗತಿ ಎಂದು ಸಿಎಂ ಹೇಳಿದ್ದಾರೆ.
ಜಾತಿ, ಧರ್ಮ ಮತ್ತು ಗಡಿಗಳನ್ನು ಮೀರಿ ಲೋಕದ ನೋವಿಗೆ ಸ್ಪಂದಿಸಿದ್ದ ಮಹಾತ್ಮ ಗಾಂಧಿ ಒಬ್ಬ ದಾರ್ಶನಿಕ, ಸಂತ ಮತ್ತು ಮಾನವತಾವಾದಿ. ಅಂಥ ಮಹಾನ್ ವ್ಯಕ್ತಿತ್ವಕ್ಕೆ ಕೋಟಿ ಕೋಟಿ ನಮನಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗೌರವ ಸಲ್ಲಿಸಿದ್ದಾರೆ.