×
Ad

ಗ್ರಾಮಸ್ವರಾಜ್ಯದ ಕಲ್ಪನೆಗೆ ಮಹಾತ್ಮಾ ಗಾಂಧೀಜಿ ಶಕ್ತಿ ತುಂಬಿದರು : ಮುಖ್ಯಮಂತ್ರಿ ಸಿದ್ದರಾಮಯ್ಯ

"ಗಾಂಧೀಜಿಯವರ ಕೊಡುಗೆಯನ್ನು ಇಡೀ ದೇಶ ಸ್ಮರಿಸುತ್ತದೆ"

Update: 2026-01-30 12:44 IST

ಬೆಂಗಳೂರು : ಹಳ್ಳಿಯಿಂದ ದಿಲ್ಲಿಯೇ ಹೊರತು, ದಿಲ್ಲಿಯಿಂದ ಹಳ್ಳಿ ಅಲ್ಲ ಎಂದು ಪ್ರತಿಪಾದಿಸಿದ ಮಹಾತ್ಮಾ ಗಾಂಧೀಜಿಯವರು ಗ್ರಾಮಸ್ವರಾಜ್ಯದ ಕಲ್ಪನೆಗೆ ಶಕ್ತಿ ತುಂಬಿದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಹುತಾತ್ಮ ದಿನಾಚರಣೆ ಅಂಗವಾಗಿ ಮಹಾತ್ಮಾಗಾಂಧೀಜಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರಮಾಧ್ಯಮದವರೊಂದಿಗೆ ಮಾತನಾಡಿದರು.

ಮಹಾತ್ಮಾಗಾಂಧೀಜಿಯವರು ದೇಶಕ್ಕೆ ನೀಡಿದ ಕೊಡುಗೆಯನ್ನು ಇಂದಿನ ದಿನ ಸ್ಮರಿಸಲಾಗುತ್ತಿದೆ. ಭಾರತ ಹಳ್ಳಿಗಳ ದೇಶವಾಗಿದ್ದು, ಅಂದು ಶೇ.80 ರಷ್ಟು ಜನ ಹಳ್ಳಿಗಳಲ್ಲಿ ವಾಸಿಸುತ್ತಿದ್ದರು. ಗ್ರಾಮಗಳು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಸ್ವಾವಲಂಬಿಯಾಗಬೇಕು. ಗ್ರಾಮಗಳ ಪ್ರಗತಿಯಲ್ಲಿಯೇ ದೇಶದ ಪ್ರಗತಿ ಅಡಗಿದೆ ಎಂದು ಅವರು ನುಡಿದಿದ್ದರು ಎಂದು ಹೇಳಿದರು.

ಪಂಚಾಯತ್‌ಗಳಿಗೆ ಮಹಾತ್ಮಾಗಾಂಧೀಜಿ ಹೆಸರು :

ರಾಜ್ಯದಲ್ಲಿ ಸುಮಾರು 6 ಸಾವಿರ ಪಂಚಾಯತ್‌ಗಳಿಗೆ. ಅವುಗಳಿಗೆ ಮಹಾತ್ಮಾಗಾಂಧಿಯವರ ಹೆಸರು ಇಡಬೇಕೆಂಬ ನಿರ್ಧಾರವನ್ನು ಕೈಗೊಳ್ಳಲಿದ್ದೇವೆ. ಗ್ರಾಮಸ್ವರಾಜ್ಯದ ಕಲ್ಪನೆಗೆ ಶಕ್ತಿ ತುಂಬಿದ್ದರು. ಹಳ್ಳಿಯಿಂದ ದಿಲ್ಲಿಯೇ ಹೊರತು, ದಿಲ್ಲಿಯಿಂದ ಹಳ್ಳಿಯಿಂದ ಅಲ್ಲ ಎಂಬುದನ್ನು ಪ್ರತಿಪಾದಿಸಿದ್ದುದಾಗಿ ತಿಳಿಸಿದರು.

ಗಾಂಧೀಜಿಯವರ ಕೊಡುಗೆಯನ್ನು ಇಡೀ ದೇಶ ಸ್ಮರಿಸುತ್ತದೆ :

ಇಂತಹ ಮಹಾನ್ ಚೇತನ ಗುಂಡೇಟಿಗೆ ಬಲಿಯಾಗಿ ನಮ್ಮನ್ನು ಅಗಲಿದ್ದಾರೆ. ಅವರ ಅಭಿಮಾನಿಯೊಬ್ಬರು- ಗಾಂಧೀಜಿಯವರು 100 ವರ್ಷ ಬದುಕಬೇಕೆಂದು ಹಾರೈಸಿದ್ದಕ್ಕೆ, ಗಾಂಧೀಜಿಯವರು ‘’ನಾನು 125 ವರ್ಷಗಳು ದೇಶಕ್ಕಾಗಿ ಬದುಕಲಿಚ್ಛಿಸುತ್ತೇನೆ’ ಎಂದು ಉತ್ತರಿಸಿದ್ದರು. ಇಡೀ ದೇಶ ಅವರ ಕೊಡುಗೆಯನ್ನು ಸ್ಮರಿಸುತ್ತದೆ ಎಂದರು.

ಬಾಕಿ ಬಿಲ್ಲುಗಳು ಹಿಂದಿನ ಬಿಜೆಪಿ ಸರಕಾರದ್ದು :

ಗುತ್ತಿಗೆದಾರರ ಬಾಕಿ ಬಿಲ್ಲುಗಳ ಪಾವತಿ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಹಿಂದಿನ ಬಿಜೆಪಿ ಸರಕಾರದವರು ಬಾಕಿ ಬಿಲ್ಲುಗಳನ್ನು ಪಾವತಿಸದೇ ಬಿಟ್ಟುಹೋಗಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News