×
Ad

ಬಿಜೆಪಿ ಸೇರಿದಂತೆ ಇಡೀ ದೇಶಕ್ಕೆ ಗಾಂಧೀಜಿ, ಕಾಂಗ್ರೆಸ್ ಆಸರೆ: ಡಿಸಿಎಂ ಡಿ.ಕೆ. ಶಿವಕುಮಾರ್

Update: 2025-10-02 13:58 IST

ಬೆಂಗಳೂರು, ಅ.02: “ಗಾಂಧೀಜಿಯವರ ಹಾಗೂ ಕಾಂಗ್ರೆಸ್ ಪಕ್ಷದ ಸಿದ್ಧಾಂತ ಒಂದೇ ಆಗಿದೆ. ಆದರೆ ಬಿಜೆಪಿ ಸಿದ್ಧಾಂತ ಬೇರೆ. ಹೀಗಿದ್ದರೂ ಬಿಜೆಪಿಯವರು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಬೇಕಾದರೆ ಗಾಂಧಿ ಪ್ರತಿಮೆ ಮುಂದೆಯೇ ನಿಲ್ಲಬೇಕು. ಇನ್ನು ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳನ್ನು ನಕಲು ಮಾಡಿಕೊಂಡೇ ಬಿಜೆಪಿ ತಮ್ಮ ಪಕ್ಷವನ್ನು ಕಟ್ಟಿಕೊಳ್ಳುತ್ತಿದೆ. ಆ ಮೂಲಕ ಬಿಜೆಪಿ ಸೇರಿದಂತೆ ಇಡೀ ದೇಶಕ್ಕೆ ಗಾಂಧೀಜಿ ಹಾಗೂ ಕಾಂಗ್ರೆಸ್ ಆಸರೆಯಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.

“ನಾವು ಕೊಟ್ಟಿರುವ ಗ್ಯಾರಂಟಿ ಹಾಗೂ ರಾಷ್ಟ ಮಟ್ಟದ ಯೋಜನೆಗಳನ್ನು ಸಂವಿಧಾನದ ಮೂಲಕ ಜನರಿಗೆ ನೀಡಿದ್ದು, ಇವುಗಳನ್ನು ಬಿಜೆಪಿಯವರಾಗಲಿ, ದಳದವರಾಗಲಿ ಬದಲಾವಣೆ ಮಾಡಲು ಸಾಧ್ಯವಾಗಿಲ್ಲ. ಆಧಾರ್ ಯೋಜನೆಯನ್ನೇ ತೆಗೆದುಕೊಳ್ಳಿ. ಆರಂಭದಲ್ಲಿ ಬಿಜೆಪಿಯವರು ಸಾಕಷ್ಟು ಟೀಕೆ ಟಿಪ್ಪಣಿ ಮಾಡಿದರು. ಆದರೆ ಈಗ ಆಧಾರ್ ಅಲ್ಲದಿದ್ದರೆ ವ್ಯಕ್ತಿಯ ಗುರುತು ಇಲ್ಲದಂತಾಗಿದೆ. ಇದು ಕಾಂಗ್ರೆಸ್ ಪಕ್ಷದ ಯೋಜನೆ. ಆಹಾರ ಭದ್ರತೆ, ಉದ್ಯೋಗ ಖಾತ್ರಿ, ಶೈಕ್ಷಣಿಕ ಹಕ್ಕುಗಳನ್ನು ಕಾಂಗ್ರೆಸ್ ಕೊಟ್ಟಿದೆ” ಎಂದು ತಿಳಿಸಿದರು.

“ಮಹಾತ್ಮಾ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಮತ್ತು ವಿಜಯದಶಮಿ ದಿನ ಆಚರಿಸುತ್ತಿದ್ದೇವೆ. ಕಳೆದ ವರ್ಷದಿಂದ ನಾವು ಗಾಂಧಿ ಭಾರತ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದೇವೆ. ಮಹಾತ್ಮ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿ ನೂರು ವರ್ಷ ಪೂರ್ಣಗೊಂಡಿದೆ. ಈ ಹೋರಾಟದಿಂದ ಸ್ವಾತಂತ್ರ್ಯ ಪಡೆದು ಆ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ತರಲಾಗಿದೆ” ಎಂದು ತಿಳಿಸಿದರು.

“ದುರ್ಗೆ ಎಂದರೆ ಶಕ್ತಿ, ಗಾಂಧಿ ಎಂದರೆ ಶಾಂತಿ. ಶಕ್ತಿ ಹಾಗೂ ಶಾಂತಿ ಎಲ್ಲರಿಗೂ ಸಿಗಲೆಂದು ಪಕ್ಷ ಹಾಗೂ ಸರ್ಕಾರದ ಪರವಾಗಿ ಪ್ರಾರ್ಥಿಸುತ್ತೇನೆ. ಗಾಂಧೀಜಿ ಅವರು ದೇಶದ ಆತ್ಮ. ವಿಶ್ವಕ್ಕೆ ಶಾಂತಿ ಸಹಬಾಳ್ವೆ ಸಂದೇಶ ರವಾನಿಸಿದವರು” ಎಂದು ತಿಳಿಸಿದರು.

“ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಕಾಂಗ್ರೆಸ್ ಸರ್ಕಾರದ ಪ್ರತಿ ಕಾರ್ಯಕ್ರಮವನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡಲು ಸಾಧ್ಯವಾಗಿಲ್ಲ. ಮಹಾತ್ಮಾ ಗಾಂಧಿ ಅವರು ಪ್ರಪಂಚಕ್ಕೆ ಅಹಿಂಸಾ ತತ್ವ ನೀಡಿದರು. ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರಿಗೂ ಅತ್ಯಂತ ಸ್ಫೂರ್ತಿದಾಯಕ ವ್ಯಕ್ತಿ ಎಂದು ಬಣ್ಣಿಸಿದ್ದಾರೆ. ನೆಲ್ಸನ್ ಮಂಡೆಲಾ ಅವರು 'ನಾನು ಗಾಂಧೀಜಿ ಅವರ ಆಚಾರ ವಿಚಾರ ಅರಿತು ಪ್ರತಿ ಹೆಜ್ಜೆ ಇಡುತ್ತೇನೆ' ಎಂದಿದ್ದಾರೆ" ಎಂದು ಹೇಳಿದರು.

ಎಷ್ಟೇ ಟೀಕೆ ಬಂದರೂ ಬೆಂಗಳೂರಿಗೆ ಹೊಸ ಸ್ವರೂಪ ನೀಡುತ್ತೇವೆ

“ಬೆಂಗಳೂರಿನಲ್ಲಿ ನಾವು ಐದು ಪಾಲಿಕೆಗಳನ್ನು ಅಸ್ತಿತ್ವಕ್ಕೆ ತಂದಿದ್ದು, 368 ವಾರ್ಡ್ ಮಾಡಲಾಗಿದೆ. ಇನ್ನೊಂದು ವಾರ್ಡ್ ಸೇರ್ಪಡೆಯಾಗಬಹುದು. ಈ ಮೂಲಕ ಹೆಚ್ಚಿನ ನಾಯಕರನ್ನು ಆಯ್ಕೆ ಮಾಡುವ ಶಕ್ತಿ ನೀಡಲಾಗಿದೆ. ಚುನಾವಣೆ ನಂತರ ಪಾಲಿಕೆ ಗಡಿ ಭಾಗದಲ್ಲಿರುವ ಪ್ರದೇಶಗಳನ್ನು ಸೇರಿಸಿಕೊಂಡು ಇನ್ನು 140-150 ವಾರ್ಡ್ ಗಳು ಸೇರ್ಪಡೆಯಾಗಲಿವೆ. ಈಗಾಗಲೇ 368 ವಾರ್ಡ್ ಗಳ ಘೋಷಣೆಯಾಗಿದೆ. ಇದಕ್ಕೆ ಆಕ್ಷೇಪಗಳಿದ್ದರೆ ಸಲ್ಲಿಸಬಹುದು. ಕಾನೂನು ಪ್ರಕಾರ ಸರಿ ಮಾಡಲಾಗುವುದು. ಸಂವಿಧಾನದ 74ನೇ ತಿದ್ದುಪಡಿ ಪ್ರಕಾರ ಜನರಿಗೆ ನಾವು ಅಧಿಕಾರ ನೀಡಬೇಕು. ಹೀಗಾಗಿ ಚುನಾವಣೆಯನ್ನು ನಿಲ್ಲಿಸಲು ಸಾಧ್ಯವಿಲ್ಲ. ನನ್ನ ವಿರುದ್ಧ ಟೀಕೆಗಳು ಬಂದರೂ ಪರವಾಗಿಲ್ಲ, ಬೆಂಗಳೂರಿಗೆ ಹೊಸ ರೂಪ ನೀಡುತ್ತೇನೆ. ಟೀಕೆಗಳು ಸಾಯುತ್ತವೆ, ಕೆಲಸಗಳು ಮಾತ್ರ ಉಳಿಯುತ್ತವೆ. ಬೆಂಗಳೂರಿನ ಜನರಿಗೆ ನೀಡಿರುವ ಕಾರ್ಯಕ್ರಮಗಳನ್ನು ಪಟ್ಟಿ ಮಾಡುತ್ತೇವೆ” ಎಂದು ತಿಳಿಸಿದರು.

16 ಜಿಲ್ಲಾಧ್ಯಕ್ಷರ ಬದಲಾವಣೆಗೆ ಸಿದ್ಧತೆ

“ಮಹಾತ್ಮಾ ಗಾಂಧಿ ಅವರು ಜನಿಸಿ 156 ವರ್ಷಗಳು ಸಂದಿವೆ. ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಶತಮಾನ ಕಳೆದಿವೆ. ನೀವೆಲ್ಲರೂ ಬೆಳಗಾವಿಗೆ ಬಂದು ಗಾಂಧಿ ಭಾರತ ಕಾರ್ಯಕ್ರಮದಲ್ಲಿ ಭಾಗವವಹಿಸಿದ್ದೀರಿ. ಇಡಿ ವರ್ಷವನ್ನು ಸಂಘಟನೆ ವರ್ಷವಾಗಿ ಮಾಡಲು ನಿರ್ಣಯ ಕೈಗೊಳ್ಳಲಾಯಿತು. ಅದರ ಕೆಲಸ ನಡೆಯುತ್ತಿದ್ದು, ಅನೇಕ ಜಿಲ್ಲಾ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕ ಮಾಡಲು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ನಾಯಕರನ್ನು ಪ್ರತಿ ಜಿಲ್ಲೆಗೆ ಕಳುಹಿಸಿ ಪರಿಶೀಲನೆ ಮಾಡಿ ಆಯ್ಕೆ ಮಾಡಲಾಗುತ್ತಿದೆ. ನಾನು ಕೂಡ ಒಂದು ತಂಡ ಕಳುಹಿಸಿದ್ದೆ. ಆದರೆ ಹೈಕಮಾಂಡ್ ನಾಯಕರು, ದೆಹಲಿಯಿಂದಲೇ ತಂಡ ಬರಲಿದೆ ಎಂದು ಹೇಳಿದ ಹಿನ್ನೆಲೆಯಲ್ಲಿ ನಾನು ಈ ಕೆಲಸವನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದೇನೆ. ಈಗಿರುವ ಜಿಲ್ಲಾಧ್ಯಕ್ಷರ ಪೈಕಿ ಅನೇಕರು ಅನೇಕ ವರ್ಷಗಳಿಂದ ಅಧಿಕಾರದಲ್ಲಿದ್ದಾರೆ. ಮತ್ತೆ ಕೆಲವರು ನಿಗಮ ಮಂಡಳಿ ಅಧ್ಯಕ್ಷರಾಗಿದ್ದಾರೆ. ಹೀಗಾಗಿ ಸುಮಾರು 16 ಜಿಲ್ಲೆಗಳ ಅಧ್ಯಕ್ಷರ ಬದಲಾವಣೆ ಮಾಡಲು ತೀರ್ಮಾನಿಸಿದ್ದೇನೆ” ಎಂದರು.

“ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸರಳತೆ ದೇಶಕ್ಕೆ ಮಾದರಿ. ಅವರು ಅಧಿಕಾರಕ್ಕೆ ಅಂಟಿಕೊಂಡವರಲ್ಲ. ಅವರನ್ನು ಸ್ಮರಿಸುವ ಭಾಗ್ಯ ನಮ್ಮದಾಗಿದೆ” ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News