×
Ad

ಇಸ್ರೇಲ್ ವಿರುದ್ಧ ಪ್ರತಿಭಟನೆಗೆ ಅವಕಾಶ ನೀಡದ ಕರ್ನಾಟಕ ಸರಕಾರ ಪ್ರಜಾಪ್ರಭುತ್ವವನ್ನು ಅಪಾಯದಲ್ಲಿಟ್ಟಿದೆ: PUCL ಖಂಡನೆ

Update: 2023-11-07 21:43 IST

ಬೆಂಗಳೂರು, ನ.7: ''ಇಸ್ರೇಲ್ ಉದ್ದೇಶ ಪೂರ್ವಕವಾಗಿ ನಾಗರಿಕರನ್ನು, ಫೆಲೆಸ್ತೀನ್‍ನ ಜನಸಾಮಾನ್ಯರನ್ನು ಗುರಿಮಾಡಿ ಕೊಂದಿದೆ. ಇದು ಇಸ್ರೇಲ್ ನಡೆಸುತ್ತಿರುವ ಜನಾಂಗೀಯ ನರಮೇಧ'' ಎಂದು ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟಿಸ್(ಪಿಯುಸಿಎಲ್) ರಾಜ್ಯಾಧ್ಯಕ್ಷ ಅರವಿಂದ್ ನಾರಾಯಣ್ ಆರೋಪಿಸಿದ್ದಾರೆ.

ಮಂಗಳವಾರ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಂತರ್ ರಾಷ್ಟ್ರೀಯ ಕಾನೂನು ಜನಸಾಮಾನ್ಯರಿಗೂ ಹಾಗು ಯುದ್ಧ ಮಾಡುವವರಿಗೆ ಪ್ರತ್ಯೇಕವಾಗಿ ನೋಡುತ್ತದೆ. ಇಸ್ರೆಲ್ ಯುದ್ಧ ಸಂಬಂಧಪಟ್ಟಂತೆ ಇರುವ ಹಲವು ಅಂತರ್ ರಾಷ್ಟ್ರೀಯ ಕಾನೂನುಗಳನ್ನು ಉಲ್ಲಂಘಿಸಿದೆ ಎಂದು ಸ್ಪಷ್ಟಪಡಿಸಿದರು.

ಲೇಖಕ, ರಾಜಕೀಯ ವಿಶ್ಲೇಷಕ ಆಕರ್ ಪಟೇಲ್ ಮಾತನಾಡಿ, ''ನಾನು ಪ್ರಧಾನ ಮಂತ್ರಿಯವರನ್ನು ಒಂದೇ ಒಂದು ಪ್ರಶ್ನೆ ಕೇಳುತ್ತೇನೆ. ಗಾಝಾದಲ್ಲಿ ಇಸ್ರೇಲ್-ಹಮಾಸ್ ನಡುವೆ ತಕ್ಷಣವೇ ಮಾನವೀಯ ಕದನ ವಿರಾಮ ಜಾರಿಯಾಗಬೇಕೆಂಬ ವಿಶ್ವಸಂಸ್ಥೆಯ ಸಾಮಾನ್ಯಸಭೆಯ ನಿರ್ಣಯದ ಮೇಲಿನ ಮತದಾನಕ್ಕೆ ಭಾರತವು ಗೈರಾಗಿದ್ದು, ಮತ ಹಾಕದೆ ಏಕೆ ವಿಶ್ವಗುರು ಎಂದು ತಮಗೆ ತಾವೇ ಹೇಳಿಕೊಳ್ಳುತ್ತೀರಿ. ನಮ್ಮ ಅಕ್ಕ ಪಕ್ಕದ ದೇಶಗಳೆಲ್ಲ ಈ ವಿಷಯದ ಬಗ್ಗೆ ಮತ ಹಾಕಿದ್ದರು. ಇನ್ನು ಪ್ರತಿಭಟನೆ ಮಾಡುವುದು ನಮ್ಮ ಮೂಲಭೂತ ಹಕ್ಕಾಗಿದ್ದು, ಕರ್ನಾಟಕ ಸರಕಾರ ಪ್ರತಿಭಟನೆಗೆ ಅವಕಾಶ ನೀಡದೆ ಪ್ರಜಾಪ್ರಭುತ್ವವನ್ನು ಅಪಾಯದಲ್ಲಿಟ್ಟಿದೆ'' ಎಂದು ಹೇಳಿದರು. 

ಎಐಸಿಸಿಟಿಯುನ ರಾಷ್ಟ್ರೀಯ ಕಾರ್ಯದರ್ಶಿ ಕ್ಲಿಫ್ಟನ್ ಡಿ. ರೊಜಾರಿಯೋ ಮಾತನಾಡಿ, ಇಸ್ರೆಲ್ ಯುದ್ದದಲ್ಲಿ ಒಂದೇ ತಿಂಗಳಿನಲ್ಲಿ 4 ಸಾವಿರ ಮಕ್ಕಳು ಸೇರಿ 10 ಸಾವಿರ ಜನರನ್ನು ಕೊಲ್ಲಲಾಗಿದೆ. ಬೆಂಗಳೂರಿಗಿಂತ ಚಿಕ್ಕದಾಗಿರುವ ಗಾಝಾ ಮೇಲೆ ಇಸ್ರೇಲ್ 30 ದಿವಸಗಳಿಂದ ಬಾಂಬ್ ದಾಳಿ ನಡೆಸುತ್ತಿದೆ. ಇನ್ನು ನಾವು ಕಣ್ಣು ಮುಚ್ಚಿ ಕೂರಲು ಸಾಧ್ಯವಿಲ್ಲ ಎಂದರು.

ಕರ್ನಾಟಕ ಜನಶಕ್ತಿಯ ಗೌರಿ ಮಾತನಾಡಿ, ಇಸ್ರೇಲ್ ಸತತವಾಗಿ ಫೆಲೆಸ್ತೀನ್ ಮೇಲೆ ನಡೆಸುತ್ತಿರುವ ದಾಳಿಯನ್ನು ಖಂಡಿಸುತ್ತೇವೆ. ಇದು ಯುದ್ಧವಲ್ಲ. ಬದಲಿಗೆ ಒಂದು ಜನಾಂಗದ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯಾಗಿದೆ. ಇದರ ಬಗ್ಗೆ ಪ್ರತಿಭಟಿಸುತ್ತಿರುವವರ ಮೇಲೆ ಕರ್ನಾಟಕ ಸರಕಾರ ಎಫ್‍ಐಆರ್ ಗಳನ್ನೂ ದಾಖಲಿಸುತ್ತಿರುವುದು ಖಂಡನೀಯ. ನಾವು ಇಂದು ಫೆಲೆಸ್ತೀನ್ ಜನರ ಪರವಾಗಿ ನಿಂತುಕೊಳ್ಳುವದು ಅಗತ್ಯ ಎಂದರು.

ಹೋರಾಟಗಾರ್ತಿ ನಿಷ್ಕಲ ಮಾತನಾಡಿ, ಇಸ್ರೇಲ್ 36 ಪತ್ರಕರ್ತರನ್ನು ಕೊಂದಿದೆ. ಗಾಝಾದಲ್ಲಿ ಇದ್ದ ಏಕೈಕ ಕ್ಯಾನ್ಸರ್ ಆಸ್ಪತ್ರೆ ಮೇಲೆ ದಾಳಿ ನಡೆಸಿದೆ. ಇಸ್ರೇಲ್ ನಡೆಸುತ್ತಿರುವ ಜನಾಂಗೀಯ ನರಮೇಧವನ್ನು ನಾವು ಖಂಡಿಸುತ್ತೇವೆ ಎಂದರು.

ಸಾಲಿಡಾರಿಟಿ ಮೂವ್‍ಮೆಂಟ್ ಅಧ್ಯಕ್ಷ ಲಬೀದ್ ಶಾಫಿ ಮಾತನಾಡಿ, ಇದು ಯುದ್ಧವಲ್ಲ, ಬದಲಿಗೆ ಒಂದು ದೇಶದ ಸರಕಾರ ಇಡೀ ಜನಾಂಗದ ಮೇಲೆ ಮಾಡುತ್ತಿರುವ ದಾಳಿಯಾಗಿದೆ. ಈ ಸಮಯದಲ್ಲಿ ನಾವು ಫೆಲೆಸ್ತೀನ್ ಪರ ನಿಲ್ಲಬೇಕಾಗಿದೆ. ಆದರೆ ಇಲ್ಲಿನ ರಾಜ್ಯ ಸರಕಾರ ನಮ್ಮ ಸಾಂವಿಧಾನಿಕ ಹಕ್ಕುಗಳ ಮೇಲೆ ದಾಳಿ ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ವಿಧಾರ್ಥಿಗಳು ಈ ವಿಷಯವಾಗಿ ಚಲನಚಿತ್ರ ಪ್ರದರ್ಶನಗಳನ್ನೂ ಮಾಡಲು ಬಿಡುತ್ತಿಲ್ಲ. ಕರಪತ್ರ ಹಂಚುವವರ ಮೇಲೆ ಎಫ್‍ಐಆರ್ ದಾಖಲಿಸುತ್ತಿದೆ. ತುಮಕೂರಿನಲ್ಲಿ ಪ್ರತಿಭಟನೆಗೆ ಅನುಮತಿ ನೀಡಿ ನಂತರ ಪ್ರತಿಭಟನಾಕಾರರ ಮೇಲೆ ಎಫ್‍ಐಆರ್ ದಾಖಲಿಸುತ್ತಿದೆ. ಒಂದು ಕಡೆ ಸೋನಿಯಾ ಗಾಂಧಿ ಈ ವಿಷಯವಾಗಿ ಸಂಪಾದಿಕೀಯ ಬರವಣಿಗೆ ಮಾಡುತ್ತಾರೆ. ಇನ್ನೊಂದು ಕಡೆ ಇಲ್ಲಿ ಅವರ ಸರಕಾರ ಪ್ರತಿಭಟನೆಯ ಹಕ್ಕನ್ನೇ ಕಸೆದುಕೊಳ್ಳುತ್ತಿದೆ ಎಂದು ಅವರು ಟೀಕಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News