ಕರ್ನಾಟಕ ಸೇರಿ ದಕ್ಷಿಣ ಭಾರತಕ್ಕೆ ನ್ಯಾಯಯುತ ಅನುದಾನ ನೀಡಿ : ಸಿಎಂ ಡಿ.ಕೆ.ಶಿವಕುಮಾರ್

‘ಸಂಪನ್ಮೂಲಗಳಲ್ಲಿ ನ್ಯಾಯಯುತ ಪಾಲು ಅಗತ್ಯ’

Update: 2026-08-20 18:09 IST

ತಮಿಳುನಾಡು/ಮಹಾಬಲಿಪುರಂ : ಕರ್ನಾಟಕ ರಾಜ್ಯ ಬಷ್ಠವಾದಾಗ, ದಕ್ಷಿಣ ಭಾರತ ಮತ್ತಷ್ಟು ಬಲಿಷ್ಠವಾಗುತ್ತದೆ. ದಕ್ಷಿಣ ಭಾರತ ಬಲಿಷ್ಠವಾದಾಗ, ಭಾರತ ಮತ್ತಷ್ಟು ಬಲಿಷ್ಠವಾಗುತ್ತದೆ. ನಾವು ಭಾರತದ ಅಭಿವೃದ್ಧಿಯ ಪಾಲುದಾರರು. ನಮಗೆ ನಮ್ಮ ನಿಧಿಗಳಲ್ಲಿ, ನಮ್ಮ ಧ್ವನಿಯಲ್ಲಿ ನ್ಯಾಯ ಬೇಕು. ನಮಗೆ ನ್ಯಾಯಯುತವಾಗಿ ಅನುದಾನ ನೀಡಿ. ದಕ್ಷಿಣ ಭಾರತಕ್ಕೆ ಸಲ್ಲಬೇಕಾದ ನ್ಯಾಯಯುತ ಪಾಲನ್ನು ನೀಡಿ’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ.

ಗುರುವಾರ ತಮಿಳುನಾಡಿನ ಮಹಾಬಲಿಪುರಂನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಧ್ಯಕ್ಷತೆಯಲ್ಲಿ ನಡೆದ 31ನೇ ದಕ್ಷಿಣ ವಲಯ ಮಂಡಳಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಂದಿನ ಚರ್ಚೆಯ ಸಂದರ್ಭದಲ್ಲಿ ಈ ಪ್ರತಿಯೊಂದು ವಿಷಯದ ಕುರಿತಾದ ನಿರ್ದಿಷ್ಟ ಸಮಸ್ಯೆಗಳು, ಸಂಬಂಧಿತ ಅಂಕಿ-ಅಂಶಗಳು ಹಾಗೂ ಕರ್ನಾಟಕ ಪ್ರಸ್ತಾಪಿಸುವ ಪರಿಹಾರ ಕ್ರಮಗಳನ್ನು ಈ ಮಂಡಳಿಯ ಮುಂದೆ ಮಂಡಿಸುತ್ತೇನೆ ಎಂದರು.

ಕರ್ನಾಟಕ ಇಲ್ಲಿ ದೂರು ನೀಡಲು ಬಂದಿಲ್ಲ. ಆರ್ಥಿಕತೆಯನ್ನು ಮುನ್ನಡೆಸುತ್ತಿರುವ ರಾಜ್ಯಗಳಿಗೆ ಸಲ್ಲಬೇಕಾದ ಗೌರವ, ನ್ಯಾಯಯುತ ಅಂಶಗಳನ್ನು ತಿಳಿಸಲು ಬಂದಿದ್ದೇವೆ. ನಮ್ಮೊಂದಿಗೆ ಹೆಜ್ಜೆ ಹಾಕಿ. ನಾವು ಭಾರತದ ಭವಿಷ್ಯ ಬೆಳಗುವ ಅವಕಾಶಗಳನ್ನು ಮುಂದುವರೆಸಿಕೊಂಡು ಹೋಗುತ್ತೇವೆ ಎಂದು ಅವರು ನುಡಿದರು.

ಅಭಿವೃದ್ಧಿ ಪಯಣ :

ನಾನು ಹೆಮ್ಮೆಯ ಭಾರತೀಯನಾಗಿ ಹಾಗೂ 16 ಶತಮಾನಗಳಿಗೂ ಹೆಚ್ಚಿನ ಇತಿಹಾಸವನ್ನು ಹೊಂದಿರುವ ನಮ್ಮ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಹೆಮ್ಮೆಯ ಕನ್ನಡಿಗನಾಗಿ ಮಾತನಾಡುತ್ತಿದ್ದೇನೆ. ನಾನು ಕರ್ನಾಟಕದ ಪರವಾಗಿ ಮಾತ್ರವಲ್ಲ, ಇಡೀ ದಕ್ಷಿಣ ಭಾರತದ ಪರವಾಗಿ ಮಾತನಾಡುತ್ತಿದ್ದೇನೆ. ಭಾರತದ ಅಭಿವೃದ್ಧಿಯ ಪಯಣವು ದಕ್ಷಿಣ ಭಾರತದ ಮೂಲಕ ಸಾಗುತ್ತದೆ. ಭಾರತದ ಅಭಿವೃದ್ಧಿಯ ತೇರು ದಕ್ಷಿಣ ಭಾರತ ಮೂಲಕವೇ ಸಾಗುತ್ತದೆ ಎಂದರು.

ನಮ್ಮ ಐದು ರಾಜ್ಯಗಳು ಭಾರತದ ಒಟ್ಟು ಜನಸಂಖ್ಯೆಯ ಸುಮಾರು ಶೇ.20ರಷ್ಟನ್ನು ಹೊಂದಿದ್ದರೂ, ದೇಶದ ಒಟ್ಟು ಜಿಡಿಪಿಗೆ ಸುಮಾರು ಶೇ.33ರಷ್ಟು ಕೊಡುಗೆ ನೀಡುತ್ತಿವೆ. ಅಂದರೆ, ಭಾರತದ ಆರ್ಥಿಕತೆಯಲ್ಲಿ ಉತ್ಪತ್ತಿಯಾಗುವ ಪ್ರತಿ ಮೂರು ರೂ. ಗಳಲ್ಲಿ ಒಂದು ರೂಪಾಯಿ ದಕ್ಷಿಣ ಭಾರತದಿಂದ ಬರುತ್ತದೆ. ಭಾರತದ ಆರ್ಥಿಕತೆಯ ಈ ಪ್ರಮುಖ ಎಂಜಿನ್‍ಲ್ಲಿ ಕರ್ನಾಟಕವು ಅತ್ಯಂತ ಬಲಿಷ್ಠ ಚಾಲಕ ಶಕ್ತಿಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದರು.

ಸಾಫ್ಟ್ ವೇರ್ ರಪ್ತಿನಲ್ಲಿ ನಾವು ದೇಶದಲ್ಲೇ ಪ್ರಥಮ ಸ್ಥಾನದಲ್ಲಿದ್ದೇವೆ. ಭಾರತದ ಸಾಫ್ಟ್ ವೇರ್ ರಪ್ತಿನಲ್ಲಿ ಕರ್ನಾಟಕದ ಕೊಡುಗೆ ಶೇ.42ರಷ್ಟಿದೆ. ಸುಮಾರು 1,100 ಗ್ಲೋಬಲ್ ಕೇಪಬಲಿಟಿ ಸೆಂಟರ್ ಗಳನ್ನು ಹೊಂದಿರುವ ನಾವು, ದೇಶದಲ್ಲೇ ಅತಿ ಹೆಚ್ಚು ಊರುಗಳನ್ನು ಹೊಂದಿರುವ ರಾಜ್ಯವಾಗಿದ್ದೇವೆ. 2019ರಿಂದ 2025ರ ಅವಧಿಯಲ್ಲಿ ಭಾರತದ ಒಟ್ಟು ವಿದೇಶಿ ನೇರ ಬಂಡವಾಳ ಈಕ್ವಿಟಿ ಒಳಹರಿವಿನಲ್ಲಿ ಶೇ.21ಕ್ಕಿಂತ ಹೆಚ್ಚಿನ ಪಾಲನ್ನು ಕರ್ನಾಟಕ ಆಕರ್ಷಿಸಿದೆ ಎಂದು ಅವರು ವಿವರಿಸಿದರು.

ಭಾರತದ ಜನಸಂಖ್ಯೆಯಲ್ಲಿ ಕರ್ನಾಟಕದ ಪಾಲು ಕೇವಲ ಶೇ.5.5ರಷ್ಟಿದ್ದರೂ, ದೇಶದ ಜಿಡಿಪಿಗೆ ನಮ್ಮ ಕೊಡುಗೆ ಶೇ.9ರಷ್ಟಿದೆ. ಕರ್ನಾಟಕದ ತಲಾ ಆದಾಯ ದೇಶದಲ್ಲೇ ಅತ್ಯಧಿಕವಾಗಿದ್ದು, ಭಾರತದ ತಲಾ ಆದಾಯಗಿಂತ ಸುಮಾರು ಎರಡು ಪಟ್ಟು ಹೆಚ್ಚಾಗಿದೆ. ದೇಶದ ಏರೋಸ್ಪೇಸ್ ಉದ್ಯಮದ ಶೇ.60ರಷ್ಟು ಭಾಗ ಕರ್ನಾಟಕದಲ್ಲಿದೆ. ದೇಶ ಕಾಫಿ ಉತ್ಪಾದನೆಯ ಸುಮಾರು ಶೇ.70 ಮತ್ತು ಸಂಸ್ಕರಿಸಿದ ಸೌತೆಕಾಯಿ ರಫ್ತಿನ ಶೇ.90ರಷ್ಟು ಕೊಡುಗೆ ನಮ್ಮದಾಗಿದೆ. ಬೆಂಗಳೂರು ಇಂದು ಕ್ಯಾಲಿಫೋರ್ನಿಯಾ ಸಿಲಿಕಾನ್ ವ್ಯಾಲಿ, ನ್ಯೂಯಾರ್ಕ್, ಬೀಜಿಂಗ್ ಮತ್ತು ಲಂಡನ್‍ಗಳೊಂದಿಗೆ ವಿಶ್ವದ ಪ್ರಮುಖ ಐದು ಎಐ ನಗರಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ ಎಂದು ಹೇಳಿದರು.

ಪಾಲು ನಿರೀಕ್ಷಿಸುತ್ತಿದ್ದೇವೆ :

15ನೆ ಹಣಕಾಸು ಆಯೋಗದ ಅವಧಿಯಲ್ಲಿ ವಿಭಜಿಸಬಹುದಾದ ತೆರಿಗೆ ಭಾಗದಲ್ಲಿ ಕರ್ನಾಟಕದ ಪಾಲು ಶೇ.4.7ರಿಂದ ಶೇ.3.6ಕ್ಕೆ ಇಳಿಕೆಯಾಯಿತು. ಇದು ಸುಮಾರು ಶೇ.23ರಷ್ಟು ಕಡಿತವಾಗಿದ್ದು, ಆರು ವರ್ಷಗಳ ಅವಧಿಯಲ್ಲಿ ರಾಜ್ಯಕ್ಕೆ ಅಂದಾಜು 65 ಸಾವಿರ ಕೋಟಿ ರೂ. ನಷ್ಟು ನಷ್ಟ ಉಂಟಾಗಿದೆ. 15ನೇ ಹಣಕಾಸು ಆಯೋಗವು ಕರ್ನಾಟಕಕ್ಕೆ 5,495 ಕೋಟಿ ರೂ. ವಿಶೇಷ ಅನುದಾನ ಮತ್ತು 6 ಸಾವಿರ ಕೋಟಿ ರೂ. ರಾಜ್ಯ-ನಿರ್ದಿಷ್ಟ ಅನುದಾನವನ್ನು ಶಿಫಾರಸು ಮಾಡಿತ್ತು. ಆದರೆ, ಈ ಎರಡೂ ಶಿಫಾರಸು ಮಾಡಿದ ಅನುದಾನಗಳು ಬಿಡುಗಡೆಯಾಗಿಲ್ಲ ಎಂದು ಅವರು ದೂರಿದರು.

16ನೇ ಹಣಕಾಸು ಆಯೋಗವು ನಮ್ಮ ರಾಜ್ಯಕ್ಕೆ ಭಾಗಶಃ ನ್ಯಾಯ ಒದಗಿಸಿದ್ದು, ಕರ್ನಾಟಕದ ಪಾಲನ್ನು ಶೇ.3.64ರಿಂದ ಶೇ.4.131ಕ್ಕೆ ಹೆಚ್ಚಿಸುವ ಮೂಲಕ ಕೆಲವು ಮಟ್ಟಿಗೆ ಮರುಸ್ಥಾಪಿಸಿದೆ. ಆದಾಗ್ಯೂ, ನಮ್ಮ ಪಾಲನ್ನು ಸಂಪೂರ್ಣವಾಗಿ ಶೇ.4.7ಕ್ಕೆ ನಿಲ್ಲಿಸಬೇಕಿದೆ. ಕರ್ನಾಟಕವು ಜಿಎಸ್ಟಿ ಮತ್ತು ಆದಾಯ ತೆರಿಗೆಗೆ ಎರಡನೇ ಅತಿ ದೊಡ್ಡ ಕೊಡುಗೆ ನೀಡುವ ರಾಜ್ಯವಾಗಿದೆ. ಬೆಳವಣಿಗೆ ಮತ್ತು ಆದಾಯದ ವಿಷಯದಲ್ಲಿ ಉತ್ತಮ ಸಾಧನೆ ಮಾಡುವ ರಾಜ್ಯವನ್ನು ಪ್ರೋತ್ಸಾಹಿಸಬೇಕೇ ಹೊರತು, ದಂಡಿಸಬಾರದು ಎಂದರು.

ನಮ್ಮ ಧ್ವನಿಯೂ ಬೇಕು :

ದಕ್ಷಿಣ ಭಾರತದ ಮತ್ತೊಂದು ಪ್ರಮುಖ ವಿಚಾರ ಎಂದರೆ ಲೋಕಸಭಾ ಕ್ಷೇತ್ರಗಳ ಪುನರ್‌ವಿಂಗಡಣೆ. ಯಾವುದೇ ರಾಜ್ಯ ತನ್ನ ಲೋಕಸಭಾ ಸ್ಥಾನಗಳನ್ನು ಕಳೆದುಕೊಳ್ಳುವುದಿಲ್ಲ ಎಂಬ ಭರವಸೆಯನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಪ್ರಾತಿನಿಧ್ಯವೆಂದರೆ ಕೇವಲ ಸಂಖ್ಯೆಗಳ ವಿಷಯವಲ್ಲ. ಅದು ನಮ್ಮ ಪ್ರಭಾವ-ಧ್ವನಿಯ ವಿಷಯವೂ ಹೌದು. ದಕ್ಷಿಣ ಭಾರತವು ದೇಶದ ಕರೆಯನ್ನು ಸ್ವೀಕರಿಸಿ, ಜನಸಂಖ್ಯೆಯನ್ನು ಶಿಸ್ತುಬದ್ಧವಾಗಿ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ. ಯಶಸ್ಸೇ ನಮ್ಮ ಧ್ವನಿಯನ್ನು ದುರ್ಬಲಗೊಳಿಸಲು ಕಾರಣವಾಗಬಾರದು. ನಮ್ಮ ಆರ್ಥಿಕ ತೂಕಕ್ಕೆ ತಕ್ಕ ರಾಜಕೀಯ ಧ್ವನಿಯೂ ಇರಬೇಕು ಎಂದು ಅವರು ಪ್ರತಿಪಾದಿಸಿದರು.

ನಮ್ಮ ಪ್ರಾತಿನಿಧ್ಯದ ಪಾಲನ್ನು ಸಂಖ್ಯಾತ್ಮಕವಾಗಿಯೂ ಅಥವಾ ಅನುಪಾತದಲ್ಲಿಯೂ ಕಡಿಮೆ ಮಾಡಬಾರದು. ನಾನು ಹೇಳುತ್ತಿರುವ ಈ ನಿಲುವನ್ನು ಇಲ್ಲಿ ಉಪಸ್ಥಿತರಿರುವ ಎಲ್ಲ ಮುಖ್ಯಮಂತ್ರಿಗಳು ಬೆಂಬಲಿಸುತ್ತಾರೆಂಬ ವಿಶ್ವಾಸ ನನಗಿದೆ. 1971ರ ಜನಸಂಖ್ಯಾ ಆಧಾರವನ್ನು ಗೌರವಿಸಬೇಕು ಮತ್ತು ನಮ್ಮ ಧ್ವನಿಯ ಬಲವನ್ನು ಸಂರಕ್ಷಿಸಬೇಕು ಎಂದು ಅವರು ಒತ್ತಾಯಿಸಿದರು.

ಯಥಾಸ್ಥಿತಿಯಲ್ಲಿ ಕಾಯ್ದುಕೊಂಡು ಮೀಸಲಾತಿ ಒದಗಿಸಿ :

ಮಹಿಳೆಯರಿಗೆ ದೊರೆಯಬೇಕಾದ ನ್ಯಾಯ ಮತ್ತಷ್ಟು ವಿಳಂಬವಾಗಬಾರದು. ಮಹಿಳೆಯರು ತಮ್ಮ ನ್ಯಾಯಯುತ ಪ್ರಾತಿನಿಧ್ಯಕ್ಕಾಗಿ ಬಹಳ ಕಾಲದಿಂದ ಕಾಯುತ್ತಿದ್ದಾರೆ. ಮಹಿಳಾ ಮೀಸಲಾತಿಯು ಮತ್ತೊಂದು ಜನಗಣತಿಯವರೆಗೆ ಕಾಯಬೇಕಾದ ಅಗತ್ಯವಿಲ್ಲ. ಆದುದರಿಂದ, ಪ್ರಸ್ತುತ ಇರುವ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ಯಥಾಸ್ಥಿತಿಯಲ್ಲಿ ಕಾಯ್ದುಕೊಂಡು, ಇದೇ ಸ್ಥಾನಗಳ ಸಂಖ್ಯೆಯೊಳಗೆ ಮಹಿಳಾ ಮೀಸಲಾತಿಯನ್ನು ಒದಗಿಸುವಂತೆ ಈ ಮಂಡಳಿಯು ಒಂದು ನಿರ್ಣಯವನ್ನು ಅಂಗೀಕರಿಸಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದರು.

ನಮ್ಮ ಧ್ವನಿಯಲ್ಲಿ ನ್ಯಾಯಯುತತೆ ಒಂದು ಭಾಗವಾದರೆ, ನಮ್ಮ ಸಂಪನ್ಮೂಲಗಳಲ್ಲಿ ನ್ಯಾಯಯುತ ಪಾಲು ಇನ್ನೊಂದು ಭಾಗವಾಗಿದೆ. ಈ ಸಭೆಯಲ್ಲಿರುವ ಪ್ರತಿಯೊಂದು ರಾಜ್ಯಕ್ಕೂ ನೀರಿಗಿಂತ ಮಹತ್ವದ ಸಂಪನ್ಮೂಲ ಮತ್ತೊಂದಿಲ್ಲ. ನಮ್ಮ ನದಿಗಳು ರಾಜಕೀಯ ಗಡಿಗಳನ್ನು ಗುರುತಿಸುವುದಿಲ್ಲ. ಕಾವೇರಿ, ಕೃಷ್ಣ, ತುಂಗಭದ್ರಾ, ಪೆನ್ನಾರ್ ಮತ್ತು ಪಾಲಾರ್ ನದಿಗಳು ಇಡೀ ದಕ್ಷಿಣ ಪರ್ಯಾಯ ದ್ವೀಪದ ಜೀವನಾಡಿಗಳಾಗಿವೆ. ನೀರು ನಮ್ಮನ್ನು ಒಗ್ಗೂಡಿಸಬೇಕು, ವಿಭಜಿಸಬಾರದು. ನೀರಿನ ಹಂಚಿಕೆಯಿಂದ ನೀರಿನ ಸಹಕಾರದತ್ತ ಸಾಗುವ ಸಮಯ ಈಗ ಬಂದಿದೆ ಎಂದು ಕರೆ ನೀಡಿದರು.

ಗಣಿಗಾರಿಕೆ ಮತ್ತು ಖನಿಜಗಳ(ಅಭಿವೃದ್ದಿ ಮತ್ತು ನಿಯಂತ್ರಣ) ತಿದ್ದುಪಡಿ ಮಸೂದೆ-2026ನ್ನು ಕೇಂದ್ರ ಸರಕಾರವು ಮರುಪರಿಶೀಲಿಸಬೇಕು. ಈ ಕಾಯ್ದೆಯು ಪ್ರಮುಖ ಖನಿಜಗಳ ಮೇಲೆ ತೆರಿಗೆ ವಿಧಿಸುವ ರಾಜ್ಯಗಳ ಹಕ್ಕನ್ನು ಕಸಿದುಕೊಳ್ಳುತ್ತಿದೆ. ಈ ಹಕ್ಕನ್ನು ಸುಪ್ರೀಂ ಕೋರ್ಟ್ ಒಂಬತ್ತು ನ್ಯಾಯಮೂರ್ತಿಗಳ ಪೀಠವು ರಾಜ್ಯಗಳಿಗೆ ನೀಡಿದೆ. ಎರಡನೆಯದು ಹೆಚ್ಚುತ್ತಿರುವ ಮಾದಕ ವಸ್ತುಗಳ ಕಳ್ಳಸಾಗಣೆಯ ಸವಾಲು. ಮಾದಕ ವಸ್ತುಗಳ ಕಳ್ಳಸಾಗಣೆಯನ್ನು ತಡೆಯಲು ನಮಗೆ ಬಲಿಷ್ಠ ಕಾನೂನುಗಳು, ಬಲಿಷ್ಠ ಜಾರಿ ವ್ಯವಸ್ಥೆ ಮತ್ತು ಕಳ್ಳಸಾಗಣೆದಾರರ ವಿರುದ್ಧ ಕಠಿಣ ಕ್ರಮಗಳ ಅಗತ್ಯವಿದೆ ಎಂದು ವಿವರಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News