ಆರೆಸ್ಸೆಸ್‍ಗೆ ಸಂವಿಧಾನಕ್ಕಿಂತ ಗೋಳ್ವಾಲ್ಕರ್ ಸಿದ್ದಾಂತವೇ ಮುಖ್ಯ: ಕ್ಲಿಫ್ಟನ್ ರೊಸಾರಿಯೋ
ಬೆಂಗಳೂರು: ಕೇಂದ್ರ ಬಿಜೆಪಿ ಸರಕಾರವು ಆರೆಸ್ಸೆಸ್‍ನ ಸರಕಾರವಾಗಿದ್ದು, ಆರೆಸ್ಸೆಸ್ ಎಂದರೆ ರಾಷ್ಟ್ರ ಸತ್ಯನಾಶ ಸಮಿತಿಯಾಗಿದೆ. ಈ ಆರೆಸ್ಸೆಸ್‍ಗೆ ಭಗತ್ ಸಿಂಗ್, ಗಾಂಧಿ, ಅಂಬೇಡ್ಕರ್, ಸಂವಿಧಾನಕ್ಕಿಂತ ಗೋಳ್ವಾಲ್ಕರ್ ಸಿದ್ದಾಂತವೇ ಮುಖ್ಯ ಎಂದು ಎಐಸಿಸಿಟಿಯು(ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್)ನ ರಾಜ್ಯಾಧ್ಯಕ್ಷ ಕ್ಲಿಫ್ಟನ್ ರೊಸಾರಿಯೋ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ಸಂಯುಕ್ತ ಕಿಸಾನ್ ಮೋರ್ಚ್ ಮತ್ತು ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಆಯೋಜಿಸಿದ್ದ ‘72 ಗಂಟೆಗಳು ದುಡಿಯುವ ಜನರ ಮಹಾ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೋದಿ ಸರಕಾರ ಬಂದಾಗ ಅಚ್ಚೇ ದಿನ್ ಬರುತ್ತದೆ ಎಂದರು, ಇದನ್ನೇ ಎರಡು ವರ್ಷ ಹೇಳಿದರು. ನಂತರ ಬ್ಲಾಕ್ ಮನಿ ತರುತ್ತೇವೆ ಎಂದು ನೋಟ್ ಬ್ಯಾನ್ ಮಾಡಿದರು. ಜಿಎಸ್‍ಟಿ ತಂದರು. ಕೊರೋನಾ ಸಮಯದಲ್ಲಿ ಲಾಕ್‍ಡೌನ್ ಮಾಡಿ ಮನೆಯಲ್ಲೆ ಕೆಲಸ ಮಾಡುವಂತೆ ಹೇಳಿದರು. ಆ ವೇಳೆ ಲಕ್ಷಾಂತರ ಜನರು ಸಾವಿಗೀಡಾದರು. ವಾಸ್ತವದಲ್ಲಿ ಅವರು ಸಾವಿಗೀಡಾಗಿದ್ದು ಅಲ್ಲ, ಈ ಸರಕಾರವೇ ಅವರನ್ನು ಕೊಂದಿದೆ ಎಂದರು.
ಕೇಂದ್ರ ಮತ್ತು ರಾಜ್ಯದಲಿದ್ದ ಬಿಜೆಪಿ ಸರಕಾರ ರೈತರ ವಿರೋಧಿ ಕಾನೂನು ತಂದು ಕಾರ್ಪೋರೇಟರ್ ಗಳಿಗೆ ಸಹಾಯ ಮಾಡಿತು. ಆದರೆ ರೈತರಿಗೆ, ಕೂಲಿ ಕಾರ್ಮಿಕರಿಗೆ ಪೌರ ಕಾರ್ಮಿಕರಿಗೆ ಯಾವ ಕಾನೂನನ್ನು ತಂದಿಲ್ಲ. ಕಾರ್ಮಿಕರು ಯಾವುದೇ ಸಂಘಟನೆ ಕಟ್ಟಬಾರದು ಎಂದು ಕಾನೂನು ತಂದರು. ನಾಗರಿಕ ಕಾಯ್ದೆ ತಿದ್ದುಪಡಿ ತಂದಿತು. ಅದಕ್ಕೆ ನಾಗರಿಕತೆ ಧರ್ಮ ಬಣ್ಣ ಹಚ್ಚಿದರು. ಕೊನೆಗೆ ರಾಜ್ಯದಲ್ಲಿರುವ ಹಿಜಾಬ್ ಹೆಸರಿನಲ್ಲಿ ಜನರನ್ನು ಒಡೆದರು. ಆದರೆ ಕರ್ನಾಟಕದ ಜನತೆ ಅವರನ್ನು ಮನೆಗೆ ಕಳುಹಿಸಿ, ಕರ್ನಾಟಕ ಮಾಡೆಲ್ ಏನೆಂದು ತೋರಿಸಿಕೊಟ್ಟರು. ಇದನ್ನೇ ಮುಂದಿನ ಚುನಾವಣೆಯಲ್ಲಿ ಮಾಡಬೇಕಾಗಿದೆ ಎಂದು ಅವರು ನೀಡಿದರು.
ಎಐಟಿಯುಸಿ ಮುಖಂಡ ವಿಜಯ ಭಾಸ್ಕರ್ ಮಾತನಾಡಿ, ಬೇಡಿಕೆಗಳ ಈಡೇರಿಕೆಗೆ ಮಾತ್ರ ಸೀಮಿತವಾದ ಹೋರಾಟ ಇದಲ್ಲ. 2024ರ ಚುನಾವಣೆಯಲ್ಲಿ ಬಿಜೆಪಿಯನ್ನು ಮನೆಗೆ ಕಳುಹಿಸುವ ಸ್ಪಷ್ಟ ರಾಜಕೀಯ ಸಂದೇಶ ಕಳುಹಿಸುವ ಒಂದು ಹೋರಾಟವಾಗಿದೆ. ಇದರಲ್ಲಿ ರಾಜಕೀಯ ಬೇಡ ಎಂದು ಹೇಳುತ್ತಿದ್ದಾರೆ. ಆದರೆ ಸ್ಪಷ್ಟವಾಗಿ ಹೇಳುತ್ತೇವೆ, ನಮಗೆ ಇಲ್ಲಿ ಸ್ಪಷ್ಟ ರಾಜಕೀಯ ಸಂದೇಶವಿದೆ. ದೇಶದ್ರೋಹಿ ಸರಕಾರವನ್ನು ಮನೆಗೆ ಕಳುಹಿಸುವ ಹೋರಾಟ ಇದಾಗಿದೆ. ಈ ದೇಶ ಮತ್ತು ಇಲ್ಲಿನ ಜನರನ್ನು ಉಳಿಸುವ ಹೋರಾಟ ಇದಾಗಿದೆ ಎಂದರು.
ನೀತಿಗಳನ್ನು ವಾಪಾಸು ಪಡೆಯುವ ಬಗ್ಗೆ ರಾಜ್ಯ ಸರಕಾರಕ್ಕೂ ನೀಡಿದ್ದೇವೆ. ರಾಜ್ಯ ಸರಕಾರದಿಂದ ಸಚಿವರು ಬಂದು ಮನವಿ ಸ್ವೀಕರಿಸಿ ಹೋಗಿದ್ದಾರೆ. ಅಷ್ಟು ಮಟ್ಟದ ಸೌಜನ್ಯ ರಾಜ್ಯ ಸರಕಾರ ತೋರಿದೆ. ಆದರೆ ಮೂರು ವರ್ಷಗಳ ಹಿಂದೆ ಕೇಂದ್ರ ಸರಕಾರ ರೈತ ಹೋರಾಟಗಾರರನ್ನು ಖಲಿಸ್ತಾನಿಗಳು ಎಂದು ಬಿಂಬಿಸಿ ಅವರನ್ನು ದೇಹಲಿಯ ಹೊರಗಡೆ ಇರುವಂತೆ ಮಾಡಿತ್ತು ಎಂದು ಹೇಳಿದರು.
ಯಾವುದೇ ಕಾರಣಕ್ಕೂ 2024ರ ಚುನಾವಣೆಯಲ್ಲಿ ದುಷ್ಟ ಎನ್‍ಡಿಎ ಕೂಟವನ್ನು ಸೋಲಿಸಬೇಕು. ಪ್ರಶಾಂತವಾಗಿ ಇದ್ದ ರಾಜ್ಯದ 64 ಸಾವಿರ ಎಕರೆ ಜಮೀನನ್ನು ಕಾರ್ಪೋರೇಟ್ ಗೆ ನೀಡಲು ಮಣಿಪುರಕ್ಕೆ ಬೆಂಕಿ ಹಚ್ಚಿದ್ದಾರೆ. 2024ಕ್ಕೆ ಮತ್ತೆ ಬಿಜೆಪಿ ಬಂದರೆ, ಇಡೀ ದೇಶವನ್ನು ಮಣಿಪುರ ಮಾಡುತ್ತಾರೆ. ಒಂದೇ ಒಂದು ಗುರಿಯನ್ನು ಇಟ್ಟುಕೊಂಡು ಈ ಫ್ಯಾಸಿಸ್ಟ್ ಶಕ್ತಿಯನ್ನು ನಾವು ಸೋಲಿಸಬೇಕಾಗಿದೆ ಎಂದರು.