ಧರ್ಮಸ್ಥಳ ಪ್ರಕರಣದಲ್ಲಿ ಸಂಪೂರ್ಣ ತನಿಖೆಯನ್ನು ಎಸ್‍ಐಟಿ ಅಧಿಕಾರಿಗಳ ವಿವೇಚನೆಗೆ ಬಿಟ್ಟಿದ್ದೇವೆ: ಡಾ.ಜಿ. ಪರಮೇಶ್ವರ್
Government Will Not Intervene In SIT Investigation, says Parameshwar
ಡಾ.ಜಿ. ಪರಮೇಶ್ವರ್ (Photo: PTI)
ಬೆಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ಸಂಪೂರ್ಣ ತನಿಖೆಯನ್ನು ಎಸ್‍ಐಟಿ ಅಧಿಕಾರಿಗಳ ವಿವೇಚನೆಗೆ ಬಿಟ್ಟಿದ್ದೇವೆ. ಇದು ಗಂಭೀರವಾದ ಪ್ರಕರಣವಾದ್ದರಿಂದ ಎಚ್ಚರಿಕೆಯಿಂದ ಪಾರದರ್ಶಕವಾಗಿ ತನಿಖೆ ನಡೆಯುತ್ತಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಮಂಗಳವಾರ ನಗರದಲ್ಲಿ ತಮ್ಮನ್ನು ಎಸ್‍ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಭೇಟಿಯಾದ ಬಗ್ಗೆ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಜಿ.ಪರಮೇಶ್ವರ್, ಕೇಂದ್ರ ಸೇವೆಗೆ ಪ್ರಣವ್ ಮೊಹಾಂತಿಯವರು ನೇಮಕವಾಗಿರುವ ಸಂಬಂಧ ಈ ಬಗ್ಗೆ ಕೆಲವೊಂದು ಚರ್ಚೆಗಳನ್ನು ನಡೆಸಿದೆವು ಎಂದರು.
ಧರ್ಮಸ್ಥಳ ಪ್ರಕರಣದಲ್ಲಿ ದೂರುದಾರ ಗುರುತಿಸುವ ಸ್ಥಳಗಳನ್ನು ಎಸ್‍ಐಟಿ ಅಧಿಕಾರಿಗಳು ಅಗೆಯುವ ಬಗ್ಗೆ ತೀರ್ಮಾನ ಮಾಡುತ್ತಾರೆ, ಇದರಲ್ಲಿ ಸರಕಾರದ ಯಾವುದೇ ಹಸ್ತಕ್ಷೇಪವಿಲ್ಲ. ಎಸ್‍ಐಟಿ ತಂಡ ಪಾರದರ್ಶಕವಾಗಿ ತನಿಖೆ ನಡೆಸುವ ವಿಶ್ವಾಸವಿದೆ. ಸಂಪೂರ್ಣ ತನಿಖೆ ಬಳಿಕ ವರದಿಯನ್ನು ಸಲ್ಲಿಸಿದಾಗ ಸರಕಾರ ಮುಂದಿನ ಕ್ರಮಗಳನ್ನು ಕೈಗೊಳ್ಳುತ್ತದೆ ಎಂದು ಜಿ.ಪರಮೇಶ್ವರ್ ಹೇಳಿದರು.