ರಾಜ್ಯಪಾಲರು ರಾಜ್ಯದ ಜನತೆಯ ಬಳಿ ಕ್ಷಮೆ ಕೇಳಬೇಕು: ಸಚಿವ ಎಚ್.ಕೆ. ಪಾಟೀಲ್
ಬೆಂಗಳೂರು: ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್ ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಿದ ಭಾಷಣವನ್ನು ಪೂರ್ತಿಯಾಗಿ ಓದದೆ ಸದನಕ್ಕೆ ಅಪಮಾನ ಮಾಡಿದ್ದು, ರಾಜ್ಯದ ಜನತೆಯ ಕ್ಷಮೆ ಕೇಳಬೇಕಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಒತ್ತಾಯಿಸಿದ್ದಾರೆ.
ಶುಕ್ರವಾರ ವಿಧಾನಸಭೆ ಕಲಾಪದಲ್ಲಿ ಜಂಟಿ ಅಧಿವೇಶನ ಸಂದರ್ಭದಲ್ಲಿ ರಾಜ್ಯಪಾಲರು ಭಾಷಣ ಕುರಿತು ನಡೆದ ಚರ್ಚೆಗೆ ಉತ್ತರ ನೀಡಿದ ಅವರು, ‘ಈ ಹಿಂದೆ ಬಿಜೆಪಿ ಶಾಸಕರು ವಿಧಾನಸಭೆಯಲ್ಲಿ ಗದ್ದಲ ಮಾಡಿ ಕಾಗದ ಪತ್ರಗಳನ್ನು ಹರಿದು ಸ್ಪೀಕರ್ ಮುಖಕ್ಕೆ ತೂರಿ, ಪೀಠದ ಬಳಿಗೆ ಹೋಗಿ ಭುಜಕ್ಕೆ ಭುಜಕೊಟ್ಟು ನಿಂತಿದ್ದರು. ಆ ಮಹಾಪರಾಧಕ್ಕಾಗಿ 18 ಜನರನ್ನು ಅಮಾನತುಗೊಳಿಸಲಾಗಿತ್ತು. ಅಂದಿನ ಘಟನೆಯನ್ನು ನಿನ್ನೆ ಜಂಟಿ ಅಧಿವೇಶನದ ಬಳಿಕ ನಡೆದ ಬೆಳವಣಿಗೆಗಳಿಗೆ ಹೋಲಿಕೆ ಮಾಡಿ ಸಮರ್ಥಿಸಿಕೊಳ್ಳುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ರಾಜ್ಯ ಸರಕಾರ ತನ್ನ ನೀತಿ ನಿಲುವುಗಳನ್ನು ರಾಜ್ಯಪಾಲರ ಮೂಲಕ ಭಾಷಣ ಮಾಡಿಸಿ ಕೇಂದ್ರ ಸರಕಾರಕ್ಕೆ ಮನವರಿಕೆ ಮಾಡಿಕೊಡುವುದು ಪ್ರಜಾಪ್ರಭುತ್ವದ ಹಾದಿಯಾಗಿದೆ. ರಾಜ್ಯಪಾಲರು ಖುಷಿಯಾಗಲಿ ಎಂದು ಸರಕಾರ ಭಾಷಣವನ್ನು ಸಿದ್ದಪಡಿಸುವುದಿಲ್ಲ. ಒಟ್ಟು 122 ಪ್ಯಾರಾಗಳ ಭಾಷಣದಲ್ಲಿ ಯಾರನ್ನೂ ವೈಯಕ್ತಿಕವಾಗಿ ನಿಂದಿಸಿರಲಿಲ್ಲ ಎಂದು ಅವರು ಸ್ಪಷ್ಟಣೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಸದಸ್ಯ ಸುರೇಶ್‍ಕುಮಾರ್ ಮಾತನಾಡಿ, ‘ಈ ಹಿಂದೆ ರಾಜ್ಯಪಾಲರಾಗಿದ್ದ ಹಂಸರಾಜ್ ಭಾರದ್ವಾಜ್ ಅವರಿಗೆ ಆಗಿನ ಕೇಂದ್ರ ಸರಕಾರ ಯಾವ ರೀತಿ ಕರೆ ಮಾಡುತ್ತಿತ್ತು ಎಂಬುದನ್ನು ಹೇಳಬೇಕಾಗುತ್ತದೆ’ ಎಂದರು.
ಇದಕ್ಕೆ ಎಚ್.ಕೆ.ಪಾಟೀಲ್ ಅವರು, ‘ಸತ್ಯ ಹೇಳಿದರೆ ನೋವುಂಟಾಗುವುದು ಸಹಜ. ಆದರೆ ರಾಜ್ಯಪಾಲರ ಜವಾಬ್ದಾರಿಯ ಬಗ್ಗೆ ಸಂವಿಧಾನದಲ್ಲಿ ಸ್ಪಷ್ಟ ಉಲ್ಲೇಖವಿದೆ. ಸುಪ್ರೀಂ ಮತ್ತು ಹೈಕೋರ್ಟ್‍ನಲ್ಲೂ ಸಾಕಷ್ಟು ನಿರ್ಣಯಗಳಿವೆ. ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವರು ನೀಡಿರುವ ಹೇಳಿಕೆ ಹಾಗೂ ಸಂಸತ್‍ನಲ್ಲಿ ರಾಷ್ಟ್ರಪತಿಯವರ ಭಾಷಣದ ಸಂಪ್ರದಾಯ ಎಲ್ಲವನ್ನೂ ಪರಿಗಣಿಸಿ ಎಲ್ಲವನ್ನೂ ಸೇರಿಸಿ ಹೇಳುವುದಾದರೆ, ನಿನ್ನೆಯ ಘಟನೆಯಲ್ಲಿ ರಾಜ್ಯಪಾಲರು ಸಂವಿಧಾನ ಉಲ್ಲಂಘಿಸಿದ್ದಾರೆ’ ಎಂದು ಹೇಳಿದರು.
ವಿಷಯ ಪ್ರಸ್ತಾಪಿಸಿರುವ ವಿರೋಧ ಪಕ್ಷದ ನಾಯಕರು ಮತ್ತು ಸದಸ್ಯರುಗಳು ರಾಜ್ಯಪಾಲರಿಗೆ ಯಾರಿಂದ ಅವಮಾನವಾಗಿದೆ ಎಂದು ಹೆಸರನ್ನು ಉಲ್ಲೇಖಿಸಿಲ್ಲ. ಪರಿಷತ್‍ನ ಸದಸ್ಯ ಬಿ.ಕೆ.ಹರಿಪ್ರಸಾದ್ ಹೆಸರು ಹೇಳಿದ್ದಾರೆ. ಅವರು ಈ ಮನೆಯ ಸದಸ್ಯರಲ್ಲದ ಕಾರಣ ಚರ್ಚೆ ಮಾಡಲು ಅಥವಾ ಕ್ರಮ ತೆಗೆದುಕೊಳ್ಳಲು ಅವಕಾಶ ಇಲ್ಲ. ಇನ್ನೂ, ಮುಖ್ಯಮಂತ್ರಿ ಸಿದ್ದರಾಮಯ್ಯ, ನಾನು ಸೇರಿದಂತೆ ಸಂಪುಟದ ಸಚಿವರು ರಾಜ್ಯಪಾಲರಿಗೆ ಹಸ್ತಲಾಘವ ನೀಡಿ ಕಾರಿನಲ್ಲಿ ಕೂರಿಸಿ ಗೌರವಯುತವಾಗಿ ಬೀಳ್ಕೊಟ್ಟಿದ್ದೇವೆ. ಎಲ್ಲಿಯೂ ಅವರಿಗೆ ಅಪಮಾನ ಮಾಡಿಲ್ಲ ಎಂದು ಸಮರ್ಥಿಸಿಕೊಂಡರು.
‘ರಾಜ್ಯಪಾಲರು ಅಧಿವೇಶನದಿಂದ ಓಡಿಹೋಗಿದ್ದಾರೆಂಬ ಮಾತಿಗೆ ನಾನು ಈಗಲೂ ಬದ್ಧನಾಗಿದ್ದೇನೆ. ಇನ್ನೊಂದೆಡೆ, ರಾಜ್ಯಪಾಲರನ್ನು ಕರೆಯಲು ಹೋಗಿದ್ದರು ಎಂದು ವಿಪಕ್ಷದವರು ಆಪಾದಿಸಿದ್ದಾರೆ. ರಾಜ್ಯಪಾಲರು ನಿರ್ಗಮಿಸುವಾಗ ಅವರನ್ನು ಹಿಂಬಾಲಿಸುವಂತೆ ಮುಖ್ಯಮಂತ್ರಿಯವರು ಸನ್ನೆ ಮಾಡಿದರು. ಅದರಂತೆ ನಾನು ವೇಗವಾಗಿ ಹೆಜ್ಜೆ ಹಾಕಿದ್ದೆ. ಬಹುಶಃ ಅದನ್ನು ಪ್ರತಿಪಕ್ಷದ ಸದಸ್ಯರು ತಪ್ಪಾಗಿ ಭಾವಿಸಿದಂತಿದೆ’ ಎಂದು ಎಚ್.ಕೆ.ಪಾಟೀಲ್ ವಿವರಣೆ ನೀಡಿದರು.