ಪರಿಷತ್ ಸದಸ್ಯ ಹರಿಪ್ರಸಾದ್‍ರ ಅಂಗಿ ಹರಿದದ್ದು ಯಾರು?: ಆರ್. ಅಶೋಕ್ ಪ್ರಶ್ನೆ
ಆರ್. ಅಶೋಕ್
ಬೆಂಗಳೂರು: ‘ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡಲು ಬಂದ ರಾಜ್ಯಪಾಲರನ್ನು ಅಗೌರವದಿಂದ ಸರಕಾರ ಬೀಳ್ಕೊಟ್ಟಿದೆ. ರಾಜ್ಯಪಾಲರ ವಿರುದ್ಧ ನಿನ್ನೆ ನಡೆದ ಘಟನೆಯಲ್ಲಿ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ತಮ್ಮ ಬಟ್ಟೆಯನ್ನು ಬಿಜೆಪಿಗರು ಹರಿದಿದ್ದಾರೆಂದು ಆರೋಪಿಸಿದ್ದಾರೆ. ಹರಿಪ್ರಸಾದ್‍ರ ಅಂಗಿ(ಜುಬ್ಬ) ಹರಿದಿದ್ದು ಯಾರು?’ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಇಂದಿಲ್ಲಿ ಪ್ರಶ್ನಿಸಿದರು.
ಶುಕ್ರವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ವಿವಾದಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ‘ರಾಜ್ಯಪಾಲರಿಗೆ ಅಡ್ಡ ನಿಂತವರು ಕಾಂಗ್ರೆಸ್‍ನ ಸದಸ್ಯರೇ, ಅವರ ಹಿಂದೆ ಸುತ್ತಮುತ್ತ ಇದ್ದವರೂ ಕಾಂಗ್ರೆಸ್‍ನವರೇ. ಮಾರ್ಷಲ್‍ಗಳೊಂದಿಗೆ ಜಗ್ಗಾಡಿದವರು ಅವರೇ, ಆರೋಪ ಮಾತ್ರ ಬಿಜೆಪಿ ಮೇಲೆ. ವಿಡಿಯೋ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ಆಡಳಿತ ಪಕ್ಷದ ಸದಸ್ಯರು ‘ರಾಜ್ಯಪಾಲರು ರಾಷ್ಟ್ರಗೀತೆಗೆ ಅಪಮಾನ ಮಾಡಿದ್ದಾರೆ’ ಎಂದು ಆರೋಪಿಸುತ್ತಿದ್ದಾರೆ. ಆದರೆ, ರಾಷ್ಟ್ರಗೀತೆ ಹಾಡಿಸಬೇಕಾದವರು ಸರಕಾರವೇ ಹೊರತು ರಾಜ್ಯಪಾಲರಲ್ಲ. ಅವರು ತಮ್ಮ ಭಾಷಣ ಮುಗಿಸಿ ‘ಜೈ ಹಿಂದ್’ ಎಂದು ನಿರ್ಗಮಿಸಿದ್ದಾರೆ. ರಾಜ್ಯಪಾಲರನ್ನು ಅಬಲೆಯಂತೆ ಮಾಡಿದ್ದು, ಅವರು ಏಕಾಂಗಿಯಾಗಿ ಹೊರಹೋದರು. ಅವರ ಜೊತೆ ಯಾರು ಇರಲಿಲ್ಲ ಎಂದು ಅಶೋಕ್ ದೂರಿದರು.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಚ್.ಕೆ.ಪಾಟೀಲ್ ಅವರೇ ‘ರಾಜ್ಯಪಾಲರು ಓಡಿಹೋಗಿದ್ದಾರೆ’ ಎಂದು ಹೇಳಿರುವುದು ಸರಿಯಲ್ಲ. ಸರಕಾರ ಇರಬಹುದು, ಹೋಗಬಹುದು. ಆದರೆ, ಸಂಪ್ರದಾಯ ಮತ್ತು ನಿಯಮಗಳ ಉಲ್ಲಂಘನೆಯಾಗಬಾರದು. ಈ ಹಿಂದೆ ಬಿಜೆಪಿಯ 18 ಶಾಸಕರನ್ನು ಅಮಾನತುಗೊಳಿಸಿದಂತೆ ನಿನ್ನೆ ರಾಜ್ಯಪಾಲರಿಗೆ ಅಗೌರವ ತೋರಿದ ಆಡಳಿತ ಪಕ್ಷದ ಸದಸ್ಯರ ವಿರುದ್ದವೂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬಿಜೆಪಿಯ ಡಾ.ಅಶ್ವತ್ಥನಾರಾಯಣ ಮಾತನಾಡಿ, ‘ಸ್ಪೀಕರ್ ಸದನದ ಘನತೆ, ಗೌರವವನ್ನು ಎತ್ತಿಹಿಡಿಯಬೇಕು. ಕಲಾಪಗಳ ನಿಯಮಾವಳಿ 27ರ ಅನುಸಾರ ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಿದವರ ವಿರುದ್ಧ ಮುಂದಿನ ಸದನ ಸಮಾವೇಶದಲ್ಲಿ ಕ್ರಮ ಕೈಗೊಳ್ಳಬೇಕೆಂದು ಸ್ಪಷ್ಟ ಉಲ್ಲೇಖವಿದೆ. ಹೀಗಾಗಿ ರಾಜ್ಯಪಾಲರಿಗೆ ಅಡಚಣೆ ಮಾಡಿದವರ ವಿರುದ್ಧ ಕ್ರಮ ಆಗಬೇಕು. ಗಲಾಟೆ ಪ್ರಕರಣ ಖಂಡಿಸುವ ನಿರ್ಣಯ ಕೈಗೊಳ್ಳಬೇಕು. ಜತೆಗೆ ರಾಜ್ಯಪಾಲರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಆಡಳಿತ ಪಕ್ಷದ ಸದಸ್ಯ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ‘ರಾಜ್ಯಪಾಲರನ್ನು ಗೌರವ ಪೂರ್ವಕವಾಗಿ ಸರಕಾರ ಸ್ವಾಗತಿಸಿದೆ. ಭಾಷಣ ಮುಗಿಸಿ ಹೋಗುವ ವೇಳೆ ರಾಷ್ಟ್ರಗೀತೆಗೆ ಅಗೌರವ ತೋರಿಸಿದ್ದು, ಇದನ್ನು ಸಹಿಸಲು ಸಾಧ್ಯವಿಲ್ಲ. ರಾಜ್ಯಪಾಲರು ಹೊರಗೆ ಹೋಗುವಾಗ ಕೆಲವರು ಅಡ್ಡಪಡಿಸಿರಬಹುದು. ಅದೇನೂ ದೊಡ್ಡ ಅಪರಾಧವಲ್ಲ’ ಎಂದರು.
ಬಳಿಕ ಮಾತನಾಡಿದ ಸ್ಪೀಕರ್ ಯು.ಟಿ.ಖಾದರ್, ಆಡಳಿತ ಪಕ್ಷದ ಕಡೆಯಿಂದ ‘ರಾಜ್ಯಪಾಲರು ರಾಷ್ಟ್ರಗೀತೆಗೆ ಅಪಮಾನ ಮಾಡಿದ್ದಾರೆ’ ಎಂಬ ಆಕ್ಷೇಪ ಸಲ್ಲಿಕೆಯಾಗಿದೆ. ವಿಪಕ್ಷದ ಸದಸ್ಯರು ‘ರಾಜ್ಯಪಾಲರಿಗೆ ಅಗೌರವ ತೋರಲಾಗಿದೆ’ ಎಂದು ಲಿಖಿತ ದೂರು ನೀಡಿದ್ದಾರೆ. ನಾವಿಲ್ಲಿ ಉದ್ದೇಶಕ್ಕಾಗಿ ಚರ್ಚೆ ನಡೆಸಬೇಕೇ ಹೊರತು ವೈಯಕ್ತಿಕವಾಗಿ ಹಗೆತನಕ್ಕಾಗಿ ಜಗಳವಾಡಬಾರದು. ಹೀಗಾಗಿ ಈ ವಿಷಯದ ಬಗ್ಗೆ ಪರಿಶೀಲಿಸಿ ರೂಲಿಂಗ್ ನೀಡುತ್ತೇನೆ ಎಂದು ತಿಳಿಸಿದರು.