ಸದನದಿಂದ ಬಿ.ಕೆ. ಹರಿಪ್ರಸಾದ್ ಅಮಾನತಿಗೆ ಪ್ರತಿಪಕ್ಷ ಪಟ್ಟು; ಮೇಲ್ಮನೆಯಲ್ಲಿ ಭಾರೀ ಗದ್ದಲ-ಕೋಲಾಹಲ
ಬೆಂಗಳೂರು: ಕೇವಲ ಒಂದು ನಿಮಿಷದ ಭಾಷಣ ಮುಗಿಸಿ ವಿಧಾನ ಮಂಡಲದ ಜಂಟಿ ಅಧಿವೇಶನದಿಂದ ನಿರ್ಗಮಿಸುವ ವೇಳೆ ರಾಜ್ಯಪಾಲರನ್ನು ತಡೆದು ಅಗೌರವ ಸೂಚಿಸಿದ ಪರಿಷತ್‍ನ ಹಿರಿಯ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರನ್ನು ಸದನದಿಂದ ಅಮಾನತು ಮಾಡಬೇಕೆಂದು ಮೇಲ್ಮನೆಯಲ್ಲಿ ಶುಕ್ರವಾರ ಪ್ರತಿಪಕ್ಷ ಬಿಜೆಪಿ ಪಟ್ಟುಹಿಡಿದ ಕಾರಣ ಸದಸ್ಯರ ನಡುವೆ ಭಾರೀ ಗದ್ದಲ-ಕೋಲಾಹಲ ಉಂಟಾಗಿ ಕಲಾಪವನ್ನು ಎರಡು ಬಾರಿ ಮುಂದೂಡಿದ ಪ್ರಸಂಗ ಜರುಗಿತು.
ಶುಕ್ರವಾರ ಕಲಾಪ ಆರಂಭವಾಗುತ್ತಿದ್ದಂತೆ ಮೇಲ್ಮನೆಯ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಈ ವಿಷಯ ಪ್ರಸ್ತಾಪಿಸಿದರು. ಉಭಯ ಸದನವನ್ನುದ್ದೇಶಿಸಿ ಚುಟುಕು ಭಾಷಣ ಮುಗಿಸಿ ಹೊರ ಹೋಗುತ್ತಿದ್ದ ರಾಜ್ಯಪಾಲರ ಎದುರು ಗೂಂಡಾಗಳ ರೀತಿ ವರ್ತಿಸಿ, ಅವರನ್ನು ತಡೆಯಲು ಪ್ರಯತ್ನಿಸಿದ್ದಾರೆ. ಈ ಮೂಲಕ ರಾಜ್ಯಪಾಲರಿಗೆ ಅಗೌರವ ಸೂಚಿಸಿದ್ದಾರೆ. ಹೀಗಾಗಿ, ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.
ಹರಿಪ್ರಸಾದ್ ವಿರುದ್ಧ ಕ್ರಮ ಆಗಬೇಕು ಎನ್ನುತ್ತ ಒಕ್ಕೊರಲಿನಿಂದ ವಿಪಕ್ಷ ಸದಸ್ಯರು ಎದ್ದು ನಿಂತು ಆಗ್ರಹಿಸಿದರು. ಛಲವಾದಿ ನಾರಾಯಣಸ್ವಾಮಿ ಮಾತಿಗೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರು, ‘ಶೇಮ್.. ಶೇಮ್ ಎನ್ನುತ್ತಾ, ಗೋಬ್ಯಾಕ್ ಗವರ್ನರ್’ ಎಂದು ಘೋಷಣೆ ಕೂಗುವ ಮೂಲಕ ತಿರುಗೇಟು ನೀಡಿದರು.
ಈ ವೇಳೆ ಕ್ರಿಯಾಲೋಪ ಎತ್ತಿದ ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್ ಮಾತನಾಡಲು ಆರಂಭಿಸುತ್ತಿದ್ದಂತೆ, ವಿಪಕ್ಷ ಸದಸ್ಯರು ಆಕ್ಷೇಪಿಸಿದರು. ‘ಗೂಂಡಾಗಿರಿ ವರ್ತನೆ ತೋರಿದ ಹರಿಪ್ರಸಾದ್ ಅವರನ್ನು ಕೂಡಲೇ ಅಮಾನತು ಮಾಡಬೇಕು’ ಎಂದು ಪಟ್ಟು ಹಿಡಿದರು. ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ, ಗದ್ದಲ ಉಂಟಾಯಿತು.
ಆಗ ಸಭಾನಾಯಕ ಎನ್.ಎಸ್.ಭೋಸ್‍ರಾಜ್ ಪ್ರತಿಪಕ್ಷದ ಸದಸ್ಯರು ಸದನವನ್ನು ಹಾಳು ಮಾಡಲು ಬಂದಿದ್ದಾರೆ. ಅವರಿಗೆ ಕಲಾಪ ನಡೆಯಬಾರದೆಂಬ ದುರುದ್ದೇಶವಿದೆ. ಹೀಗಾಗಿಯೇ ಬೇಡದ ವಿಷಯಗಳನ್ನು ಪ್ರಸ್ತಾಪಿಸಲು ಮುಂದಾಗುತ್ತಿದ್ದಾರೆ. ಸಂವಿಧಾನ ವಿರೋಧಿ ಯಾರು? ರಾಷ್ಟ್ರಗೀತೆಗೆ ಅಪಮಾನ ಮಾಡಿದ್ದು ಯಾರು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ತಿರುಗೇಟು ನೀಡಿದರು.
ಪ್ರತಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಪ್ರತಿಕ್ರಿಯಿಸಿ, ಪ್ರತಿಪಕ್ಷದ ನಾಯಕರು ಇನ್ನೂ ಸಂಪೂರ್ಣ ವಿಷಯವನ್ನೇ ಪ್ರಸ್ತಾಪಿಸಿಲ್ಲ. ಅವರು ಏನು ಹೇಳುತ್ತಾರೆ ಎಂಬುದು ಗೊತ್ತಿಲ್ಲ. ಅದಕ್ಕೂ ಮುನ್ನವೇ ಕ್ರಿಯಾಲೋಪ ಎತ್ತಲು ಅವಕಾಶ ನೀಡಿದರೆ ಹೇಗೆ ಎಂದು ಸಭಾಪತಿಯವರನ್ನು ಪ್ರಶ್ನಿಸಿದರು.
ಇದಕ್ಕೆ ದನಿಗೂಡಿಸಿದ ಜೆಡಿಎಸ್ ಸದಸ್ಯ ಭೋಜೇಗೌಡ, ಸಭಾ ನಾಯಕರಿಗೆ ಎಷ್ಟು ಸ್ಥಾನಮಾನ ಇರುತ್ತದೆಯೋ, ಅದೇ ರೀತಿ ಪ್ರತಿಪಕ್ಷದ ನಾಯಕರಿಗೂ ಸರಿಸಮಾನವಾದ ಸ್ಥಾನಮಾನ ಇರುತ್ತದೆ. ನೀವು ವಿಷಯ ಪ್ರಸ್ತಾಪಿಸಲು ಅವಕಾಶ ಕೊಡದಿದ್ದರೆ ಸದಸ್ಯರ ಹಕ್ಕನ್ನು ಮೊಟಕುಗೊಳಿಸಿದಂತಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಪಕ್ಷದ ನಾಯಕರು ಪತ್ರವನ್ನು ಕೊಟ್ಟಾಗ ಅದನ್ನು ಪರಿಶೀಲಿಸಿ ಚರ್ಚೆಗೆ ಅವಕಾಶ ಕೊಡಬೇಕು. ಅದಕ್ಕೂ ಮೊದಲೇ ಕ್ರಿಯಾಲೋಪ ಪ್ರಸ್ತಾಪಿಸಲು ಅವಕಾಶ ನೀಡಿದರೆ ಸದನಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಭೋಜೇಗೌಡ ಹೇಳಿದರು. ಇದಕ್ಕೆ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ದನಿಗೂಡಿಸಿದರು.
ಆಗ ಆಡಳಿತ ಪಕ್ಷದ ಮುಖ್ಯ ಸಚೇತಕ ಸಲೀಂ ಮಾತನಾಡಿ, ಸದನದಲ್ಲಿ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡವರು ಯಾರು? ರಾಷ್ಟ್ರಗೀತೆಗೆ ಅಪಮಾನ ಮಾಡಿದವರು ಯಾರು ಎಂದು ಪ್ರಶ್ನಿಸಿದರು.
ಈ ವೇಳೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ರಾಷ್ಟ್ರಗೀತೆಗೆ ಅವಮಾನ ಮಾಡಿದ ರಾಜ್ಯಪಾಲರಿಗೆ ಏನು ಶಿಕ್ಷೆ ಕೊಡುತ್ತೀರಾ, ಮೊದಲು ಅದು ಹೇಳಿ ಎಂದು ಒತ್ತಾಯಿಸಿದರು.
ಬಳಿಕ ಪ್ರತಿಕ್ರಿಯಿಸಿದ ಛಲವಾದಿ ನಾರಾಯಣಸ್ವಾಮಿ, ಈ ಹಿಂದೆ ರಾಜ್ಯಪಾಲರಾಗಿದ್ದ ಹಂಸರಾಜ್ ಭಾರದ್ವಾಜ್ ಅವರು ಸಹ ಭಾಷಣ ಮಾಡಿರಲಿಲ್ಲ, ನಾನು ಸರಕಾರದ ಗುಲಾಮನಲ್ಲ ಎಂದು ಹೇಳಿ ಹೋಗಿದ್ದರು. ಕಾನೂನು ಪ್ರಕಾರ ಹೋರಾಟ ಮಾಡಲಿ. ಅದು ಬಿಟ್ಟು ಗೂಂಡಾಗಿರಿ ಮಾಡುವುದು ಸರಿಯೇ? ರಾಜ್ಯಪಾಲರಿಗೆ ಅಪಮಾನವಾಗಿದೆ ಎಂದರು.
ಇದೇ ವೇಳೆ ಬಿ.ಕೆ.ಹರಿಪ್ರಸಾದ್ ಮಾತನಾಡಿ, ರಾಜ್ಯಪಾಲರ ಭಾಷಣದ ಪ್ರಕ್ರಿಯೆ ಬಗ್ಗೆ ನಿಯಮಾವಳಿ ಓದುತ್ತಿದ್ದಂತೆ ಬಿಜೆಪಿ ಸದಸ್ಯರು ಆಕ್ಷೇಪಿಸಿದರು. ಪೋಕ್ಸೋ ಪ್ರಕರಣದ ನಾಯಕರಿಗೆ ಹಾರ ಹಾಕುವ ಪಕ್ಷದವರು ಇವರು, ಇವರಿಂದ ಪಾಠ ಕಲಿಯಬೇಕಾ? ಎಂದು ಬಿ.ಕೆ.ಹರಿಪ್ರಸಾದ್ ಪ್ರಶ್ನಿಸಿದರು.
ಈ ಹಂತದಲ್ಲಿ ಮತ್ತೆ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಭಾರೀ ಗದ್ದಲ, ಕೋಲಾಹಲ ಸೃಷ್ಟಿಯಾಯಿತು. ಆರೋಪ, ಪ್ರತ್ಯಾರೋಪಗಳು ನಡೆದವು. ಹರಿಪ್ರಸಾದ್ ಎತ್ತಿದ್ದ ಕ್ರಿಯಾಲೋಪವನ್ನು ಸಭಾಪತಿ ಹೊರಟ್ಟಿ ಅವರು ತಿರಸ್ಕರಿಸಿ, ಸದನವನ್ನು ಮುಂದೂಡಿದರು. 10 ನಿಮಿಷಗಳ ಬಳಿಕ ಪುನಃ ಕಲಾಪ ಪ್ರಾರಂಭವಾಗುತ್ತಿದ್ದಂತೆ ಸದಸ್ಯರ ಗಲಾಟೆ ಮತ್ತೆ ಜೋರಾಗಿದ್ದರಿಂದ ಸಭಾಪತಿಯವರು ಮತ್ತೊಮ್ಮೆ ಸದನ ಮುಂದೂಡಿದರು.
ಅತ್ಯಾಚಾರಿ ಪಕ್ಷದವರಿಂದ ಪಾಠ ಕಲಿಯಬೇಕಿಲ್ಲ:
‘’ಸದನದಲ್ಲಿ ಬಿಜೆಪಿ ಸದಸ್ಯರು ಅಮಾನತಿಗೆ ಒತ್ತಾಯಿಸುತ್ತಿದ್ದಂತೆ ಎದ್ದು ನಿಂತು ಆಕ್ಷೇಪಿಸಿದ ಕಾಂಗ್ರೆಸ್‍ನ ಬಿ.ಕೆ.ಹರಿಪ್ರಸಾದ್, ‘ನಿಮ್ಮದು ಅತ್ಯಾಚಾರಿಗಳ ಪಕ್ಷ, ಭ್ರಷ್ಟಾಚಾರಿಗಳ ಪಕ್ಷ, ಬಲತ್ಕಾರಿ ಪಾಪಿಗಳಿವರು. ಆರೆಸ್ಸೆಸ್‍ನವರು ಸಂವಿಧಾನದ ಮೌಲ್ಯವನ್ನು ಕೊಲೆಗೈಯುತ್ತಿದ್ದಾರೆ. ಪೋಕ್ಸೋ ಪ್ರಕರಣದ ನಾಯಕರಿಗೆ ಹಾರ ಹಾಕುವ ಪಕ್ಷದವರು ಇವರು, ಇವರಿಂದ ನಾನು ಪಾಠ ಕಲಿಯಬೇಕೆ?’ ಎಂದು ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದರು.