×
Ad

ಮುಡಾ ಪ್ರಕರಣ: 20.85 ಕೋಟಿ ರೂ. ಮೌಲ್ಯದ ಆಸ್ತಿ ತಾತ್ಕಾಲಿಕ ಜಪ್ತಿ ಮಾಡಿದ ಈಡಿ

Update: 2026-01-23 21:05 IST

ಸಾಂದರ್ಭಿಕ ಚಿತ್ರ (PTI)

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿ ನಡೆದ ಅಕ್ರಮ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಈಡಿ), ಬೆಂಗಳೂರು ವಲಯ ಕಚೇರಿ ಅಧಿಕಾರಿಗಳ ತಂಡ 20.85 ಕೋಟಿ ರೂ. ಮಾರುಕಟ್ಟೆ ಮೌಲ್ಯದ ಆಸ್ತಿಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿದೆ.

ತಾತ್ಕಾಲಿಕ ಜಪ್ತಿಗೊಂಡ ಆಸ್ತಿಗಳಲ್ಲಿ ಕಾನೂನುಬಾಹಿರವಾಗಿ ಹಂಚಿಕೆಗೊಂಡ 6 ಮುಡಾ ನಿವೇಶನಗಳು, 3 ಇತರೆ ಮಾದರಿ ಆಸ್ತಿಗಳು ಹಾಗೂ ಒಂದು ವಾಣಿಜ್ಯ ಕಟ್ಟಡ ಸೇರಿವೆ. ಜನವರಿ 21ರಂದು ಈಡಿ ದಾಳಿಯನ್ನು ನಡೆಸಿದೆ.

ಮೈಸೂರಿನಲ್ಲಿ ದಾಖಲಾಗಿದ್ದ ಮುಡಾ ಪ್ರಕರಣದ ಎಫ್‍ಐಆರ್ ತನಿಖೆಯನ್ನು ಜಾರಿ ನಿರ್ದೇಶನಾಲಯ ಆರಂಭಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ (ಭೂಸ್ವಾಧೀನಕ್ಕೆ ಪರಿಹಾರವಾಗಿ ನಿವೇಶನ ಹಂಚಿಕೆ) ನಿಯಮಗಳು-2009 (2015ರ ತಿದ್ದುಪಡಿ ಸಹಿತ) ಹಾಗೂ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ (ಸ್ವಯಂ ಭೂಸರಣಿ ಪ್ರೋತ್ಸಾಹ ಯೋಜನೆ) ನಿಯಮಗಳು-1991ರ ಘೋರ ಉಲ್ಲಂಘನೆಯೊಂದಿಗೆ ನಿವೇಶನಗಳನ್ನು ಹಂಚಿಕೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಈಡಿ ಹೇಳಿದೆ.

ಇದೇ ವೇಳೆ, ಮುಡಾ ಅಧಿಕಾರಿಗಳು ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಗಳ ನಡುವಿನ ಸಂಬಂಧ ಹಾಗೂ ಪರಿಹಾರ ರೂಪದಲ್ಲಿ ನಿವೇಶನ ಹಂಚಿಕೆ ಹಾಗೂ ಲೇಔಟ್ ಅನುಮೋದನೆಗಾಗಿ ನಗದು ಪಾವತಿ ನಡೆದಿರುವುದಕ್ಕೆ ಸಂಬಂಧಿಸಿದ ಕೆಲ ಸಾಕ್ಷ್ಯಗಳು ಪತ್ತೆಯಾಗಿವೆ ಎಂದು ಈ.ಡಿ. ತಿಳಿಸಿದೆ.

ಇದಕ್ಕೂ ಮುನ್ನ, ಈಡಿ 283 ಕಾನೂನುಬಾಹಿರ ಮುಡಾ ನಿವೇಶನಗಳು ಮತ್ತು ಮೂರು ಜನರ ವೈಯಕ್ತಿಕ ಆಸ್ತಿಗಳನ್ನು ಜಪ್ತಿ ಮಾಡಿತ್ತು. ನಿವೇಶನ ಹಂಚಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆರೋಪದ ಮೇಲೆ ಮುಡಾದ ಮಾಜಿ ಆಯುಕ್ತ ಜಿ.ಟಿ.ದಿನೇಶ್ ಕುಮಾರ್ ಅವರನ್ನು 16.09.2025ರಂದು ಪಿಎಂಎಲ್‍ಎ ಅಡಿಯಲ್ಲಿ ಬಂಧಿಸಲಾಗಿದ್ದು, ಅವರು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಈವರೆಗೆ ಈ ಪ್ರಕರಣದಲ್ಲಿ ಸುಮಾರು 460 ಕೋಟಿ ರೂ. ಮಾರುಕಟ್ಟೆ ಮೌಲ್ಯದ ಆಸ್ತಿ ಇದಾಗಿದ್ದು, ತನಿಖೆ ಮುಂದುವರೆದಿದೆ ಎಂದು ಜಾರಿ ನಿರ್ದೇಶನಾಲಯದ ಪ್ರಕಟನೆಯಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News