×
Ad

‘ಗೃಹಲಕ್ಷ್ಮಿ ಯೋಜನೆಯ ಪರಿಷ್ಕರಣೆ’ | ಮೃತ ಹಾಗೂ ಅನರ್ಹ ಫಲಾನುಭವಿಗಳ ಪತ್ತೆಗೆ ಮುಂದಾದ ಸರಕಾರ

ಬಯೋಮೆಟ್ರಿಕ್ ಕಡ್ಡಾಯ: ದೃಢೀಕರಣ ಮಾಡಿಸದಿದ್ದರೆ ಸಿಗಲ್ಲ 2,000 ರೂ.!

Update: 2026-06-11 19:31 IST

ಸಾಂದರ್ಭಿಕ ಚಿತ್ರ

ಬೆಂಗಳೂರು : ರಾಜ್ಯ ಸರಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ ಯೋಜನೆ’ಯ ಸೌಲಭ್ಯ ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ, ಮೃತ ಹಾಗೂ ಅನರ್ಹ ಫಲಾನುಭವಿಗಳನ್ನು ಪತ್ತೆ ಹಚ್ಚುವ ಕಾರ್ಯ ಭರದಿಂದ ಸಾಗಿದೆ. ಆದರೆ, ಸರಕಾರದ ಈ ಪರಿಷ್ಕರಣೆ ಕಾರ್ಯಕ್ಕೆ ವಿರೋಧ ಪಕ್ಷಗಳು ಟೀಕಿಸಿವೆ.

ಪ್ರಸಕ್ತ ಸಾಲಿನ ಮಾರ್ಚ್ ಅಂತ್ಯದ ವರೆಗಿನ ಅಂಕಿ-ಅಂಶಗಳನ್ನು ಗಮನಿಸಿದರೆ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಯಾಗಿದ್ದ 1,95,224 ಮಂದಿ ಮೃತಪಟ್ಟಿದ್ದಾರೆ. ಆದರೂ, ಅವರ ಖಾತೆಗಳಿಗೆ ಗೃಹಲಕ್ಷ್ಮಿ ಹಣ ಜಮೆಯಾಗುತ್ತಿದೆ. ಅಲ್ಲದೇ, ತೆರಿಗೆ ಪಾವತಿದಾರರು ಸಹ ಗೃಹಲಕ್ಷ್ಮಿ ಫಲಾನುಭವಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಮೃತಪಟ್ಟ ಫಲಾನುಭವಿಗಳು: ಬಾಗಲಕೋಟೆ-5907, ಬಳ್ಳಾರಿ-3415, ಬೆಳಗಾವಿ-15850, ಬೆಂಗಳೂರು ಗ್ರಾಮಾಂತರ-3911, ಬೆಂಗಳೂರು ನಗರ-14038, ಬೀದರ್-4063, ಚಾಮರಾಜನಗರ-4739, ಚಿಕ್ಕಬಳ್ಳಾಪುರ-5358, ಚಿಕ್ಕಮಗಳೂರು-5042, ಚಿತ್ರದುರ್ಗ-6543, ದಕ್ಷಿಣ ಕನ್ನಡ-6159, ದಾವಣಗೆರೆ-5926, ಧಾರವಾಡ-5628, ಗದಗ-3868, ಹಾಸನ-8033, ಹಾವೇರಿ-5905, ಕಲಬುರಗಿ-6408, ಕೊಡಗು-2193, ಕೋಲಾರ-5615, ಕೊಪ್ಪಳ-4475, ಮಂಡ್ಯ-9168, ಮೈಸೂರು-11541, ರಾಯಚೂರು-5181, ರಾಮನಗರ-5713, ಶಿವಮೊಗ್ಗ-6409, ತುಮಕೂರು-12139, ಉಡುಪಿ-4311, ಉತ್ತರ ಕನ್ನಡ-5546, ವಿಜಯನಗರ-3824, ವಿಜಯಪುರ-5540 ಹಾಗೂ ಯಾದಗಿರಿ-2775 ಸೇರಿದಂತೆ ಒಟ್ಟು 1,95,224 ಮಂದಿ ಫಲಾನುಭವಿಗಳು ಮೃತಪಟ್ಟಿದ್ದಾರೆ.

ಬಯೋಮೆಟ್ರಿಕ್ ದೃಢೀಕರಣ ಕಡ್ಡಾಯ: ಅನರ್ಹರಿಗೆ ಯೋಜನೆ ಸೌಲಭ್ಯ ಸಿಗುವುದನ್ನು ತಪ್ಪಿಸಲು ರಾಜ್ಯ ಸರಕಾರ ಬಯೋಮೆಟ್ರಿಕ್ ದೃಢೀಕರಣ ಮಾಡಿಸುವುದನ್ನು ಕಡ್ಡಾಯಗೊಳಿಸಿದೆ. ಯಾವ ಫಲಾನುಭವಿ ಬಯೋಮೆಟ್ರಿಕ್ ದೃಢೀಕರಣ ನೀಡುವುದಿಲ್ಲವೊ ಅವರ ಬ್ಯಾಂಕ್ ಖಾತೆಗಳಿಗೆ ಗೃಹಲಕ್ಷ್ಮಿ ಯೋಜನೆಯಡಿ 2 ಸಾವಿರ ರೂ.ಜಮೆಯಾಗುವುದಿಲ್ಲ.

ಬಯೋಮೆಟ್ರಿಕ್ ದೃಢೀಕರಣವನ್ನು ಬೆಂಗಳೂರು ಒನ್, ಗ್ರಾಮ ಒನ್, ಸೇವಾ ಕೇಂದ್ರ ಮತ್ತು ಬಾಪೂಜಿ ಸೇವಾ ಕೇಂದ್ರಗಳಲ್ಲಿ ಮಾಡಿಸಬಹುದು. ಇದಕ್ಕಾಗಿ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಮತ್ತು ಇತರ ಸಂಬಂಧಿತ ದಾಖಲೆಗಳನ್ನು ಸಲ್ಲಿಸಬೇಕು. ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದೆಯೆ ಮತ್ತು ಯೋಜನೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಸಕ್ರಿಯವಾಗಿದೆಯೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಅಗತ್ಯವಾಗಿದೆ.

ಈ ಸಂಬಂಧ ಮಾಧ್ಯಮ ಹೇಳಿಕೆ ನೀಡಿರುವ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ‘ರಾಜ್ಯದಲ್ಲಿ ಇದುವರೆಗೆ ಸುಮಾರು 1.24 ಕೋಟಿಗೂ ಅಧಿಕ ಮಹಿಳಾ ಯಜಮಾನಿಯರಿಗೆ ಪ್ರತಿ ತಿಂಗಳು ತಲಾ 2 ಸಾವಿರ ರೂ.ಗಳಂತೆ ಗೃಹಲಕ್ಷ್ಮಿ ಯೋಜನೆಯ ಹಣ ತಲುಪುತ್ತಿದೆ’ ಎಂದು ತಿಳಿಸಿದ್ದಾರೆ.

ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಯೋಜನೆಯ ಫಲಾನುಭವಿಗಳಾಗಿದ್ದ ಸುಮಾರು 1.95 ಲಕ್ಷಕ್ಕೂ ಹೆಚ್ಚು ಕುಟುಂಬದ ಯಜಮಾನಿಯರು ಮರಣ ಹೊಂದಿದ್ದಾರೆ. ಆದಾಗ್ಯೂ, ತಾಂತ್ರಿಕ ಕಾರಣಗಳಿಂದಾಗಿ ಮೃತಪಟ್ಟವರ ಬ್ಯಾಂಕ್ ಖಾತೆಗಳಿಗೂ ಇನ್ನೂ ಹಣ ಸಂದಾಯವಾಗುತ್ತಿರುವುದು ಗಮನಕ್ಕೆ ಬಂದಿದೆ. ಈ ರೀತಿಯ ದುರುಪಯೋಗವನ್ನು ತಡೆಯುವ ಕೆಲಸವನ್ನು ಸರಕಾರ ಮಾಡುತ್ತಿದೆ ಎಂದು ದಿನೇಶ್ ಗೂಳಿಗೌಡ ಹೇಳಿದ್ದಾರೆ.

ಅನರ್ಹರ ಪತ್ತೆ: ಈ ಪ್ರಕ್ರಿಯೆಯ ಮೂಲ ಉದ್ದೇಶ ಮೃತಪಟ್ಟ ಹಾಗೂ ಅನರ್ಹ ಫಲಾನುಭವಿಗಳನ್ನು ಪತ್ತೆ ಹಚ್ಚಿ, ಸರಕಾರದ ಹಣ ದುರುಪಯೋಗವಾಗುವುದನ್ನು ತಪ್ಪಿಸುವುದೇ ಆಗಿದೆ. ಯಾವುದೆ ಕಾರಣಕ್ಕೂ ಪ್ರಸ್ತುತ ಸೌಲಭ್ಯ ಪಡೆಯುತ್ತಿರುವ ಯಾವುದೆ ಒಬ್ಬನೇ ಒಬ್ಬ ಅರ್ಹ ಫಲಾನುಭವಿಗೆ ಈ ಯೋಜನೆಯಿಂದ ಯಾವುದೇ ರೀತಿಯ ತೊಂದರೆಯಾಗಲಿ ಅಥವಾ ನಷ್ಟವಾಗಲಿ ಸಂಭವಿಸುವುದಿಲ್ಲ. ವಿರೋಧ ಪಕ್ಷದವರ ರಾಜಕೀಯ ಪ್ರೇರಿತ ಅಪಪ್ರಚಾರಗಳನ್ನು ಜನತೆ ನಂಬಬಾರದು ಎಂದು ಅವರು ಕೋರಿದ್ದಾರೆ.

ಮೃತಪಟ್ಟವರ ಖಾತೆಗಳಿಗೆ ಸರಕಾರದ ಹಣ ಪಾವತಿಯಾಗುತ್ತಿರುವುದನ್ನು ತಡೆಗಟ್ಟಲು ಮತ್ತು ಯೋಜನೆಯನ್ನು ಸದ್ವಿನಿಯೋಗಪಡಿಸಿಕೊಳ್ಳಲು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಾನು ಲಿಖಿತ ಮನವಿಯೊಂದನ್ನು ಸಲ್ಲಿಸಿ, ಫಲಾನುಭವಿಗಳಿಗೆ 'ಜೀವಿತ ಪ್ರಮಾಣ ಪತ್ರ' ಕಡ್ಡಾಯಗೊಳಿಸುವಂತೆ ಕೋರಿದ್ದೆ ಎಂದು ಅವರು ಸ್ಮರಿಸಿದ್ದಾರೆ.

ಅದೇ ರೀತಿ, ಪ್ರಸ್ತುತ ಮುಖ್ಯಮಂತ್ರಿಯಾಗಿರುವ ಡಿ.ಕೆ.ಶಿವಕುಮಾರ್ ಅವರಿಗೂ ಈ ಯೋಜನೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಿ, ಮೃತಪಟ್ಟವರು ಹಾಗೂ ಅನರ್ಹರನ್ನು ಯೋಜನೆಯಿಂದ ಹೊರಗಿಡುವ ಮೂಲಕ ಗೃಹಲಕ್ಷ್ಮಿ ಯೋಜನೆಯನ್ನು ಸಂಪೂರ್ಣವಾಗಿ ಪರಿಷ್ಕರಣೆ ಮಾಡಬೇಕೆಂದು ಮನವಿ ಮಾಡಿದ್ದೇನೆ ಎಂದು ದಿನೇಶ್ ಗೂಳಿಗೌಡ ತಿಳಿಸಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News