ನನಗೆ ಕ್ರೀಡಾ ಖಾತೆ ಕೊಟ್ಟಿದ್ದರೆ ಕ್ರಾಂತಿ ಮಾಡುತ್ತಿದ್ದೆ : ಸಚಿವ ಸತೀಶ್ ಜಾರಕಿಹೊಳಿ
ಸತೀಶ್ ಜಾರಕಿಹೊಳಿ(PC : x/ANI)
ಬೆಂಗಳೂರು : ನನಗೆ ಹೆಚ್ಚುವರಿಯಾಗಿ ಕ್ರೀಡಾ ಖಾತೆ ಕೈ ತಪ್ಪಿದೆ. ಒಂದು ವೇಳೆ ಈ ಖಾತೆ ನನಗೆ ಕೊಟ್ಟಿದ್ದರೆ ರಾಜ್ಯದ ಕ್ರೀಡಾ ಕ್ಷೇತ್ರದಲ್ಲಿ ಕ್ರಾಂತಿ ಮಾಡುತ್ತಿದ್ದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆಯೂ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಸರಕಾರದ ಅವಧಿಯಲ್ಲಿ ಕ್ರೀಡಾ ಖಾತೆ ನೀಡಬೇಕೆಂದು ಕೇಳಿದ್ದೆ. ಆದರೆ, ನೀಡಿರಲಿಲ್ಲ. ಈಗ ಹೊಸ ಸರಕಾರದಲ್ಲೂ, ಹೆಚ್ಚುವರಿಯಾಗಿ ಕ್ರೀಡಾ ಖಾತೆ ನೀಡಿ ಎಂದಿದ್ದೆ. ಅದನ್ನು ಡಾ.ಜಿ.ಪರಮೇಶ್ವರ್ ಅವರಿಗೆ ಕೊಟ್ಟಿದ್ದಾರೆ. ಒಂದು ವೇಳೆ ನನಗೆ ಕ್ರೀಡಾ ಖಾತೆ ಕೊಟ್ಟಿದ್ದರೆ ಕ್ರಾಂತಿ ಮಾಡುತ್ತಿದ್ದೆ ಎಂದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಚಾರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ನಡೆದಿದೆ. ಆದರೆ, ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದಂತೆ ಅಹಿಂದ ಸಮುದಾಯ ಕಟ್ಟಬೇಕು. ನಮಗೇನು ಇದರಿಂದ ನಷ್ಟ ಆಗುವುದಿಲ್ಲ. ಅಹಿಂದ ಸಂಘಟನೆಯಿಂದ ಪಕ್ಷಕ್ಕೂ ಬಲ ಬರಲಿದೆ ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಆಗಲು ಅಧ್ಯಕ್ಷ ಸ್ಥಾನವೇ ಬೇಕು ಎನ್ನುವ ಮಾತಿಲ್ಲ. ನಾವು ಶಿಗ್ಗಾಂವಿ, ಬಾಗಲಕೋಟೆ ಗೆದ್ದಿದ್ದೇವೆ. ಕೆಲಸ ಮಾಡಿದ್ದರೆ ಕೂಲಿ ಸಿಗುತ್ತದೆ. ಕೆಲಸ ಮಾಡಲಿ ಎನ್ನುವ ಕಾರಣಕ್ಕಾಗಿಯೇ ಈಗ ಅವರಿಗೆ ಮುಖ್ಯಮಂತ್ರಿ ಮಾಡಿದ್ದಾರೆ. ನಮಗೆ ಇನ್ನೂ ವಯಸ್ಸಿದೆ, ಕಾಯೋಣ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.