ಸಣ್ಣ ವ್ಯಾಪಾರಿಗಳಿಗೆ ಜಿಎಸ್‍ಟಿ ನೋಟೀಸ್ ಹಿಂಪಡೆಯದಿದ್ದರೆ ಹೋರಾಟ : ರಾಜ್ಯ ಕಾರ್ಮಿಕ ಪರಿಷತ್ ಎಚ್ಚರಿಕೆ
ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು : ಡಿಜಿಟಲ್ ವಹಿವಾಟು ನಡೆಸುತ್ತಿರುವ ಸಣ್ಣ ವ್ಯಾಪಾರಿಗಳಿಗೆ ತೆರಿಗೆ ಪಾವತಿಸುವಂತೆ ನೀಡಿರುವ ನೋಟೀಸ್ ಅನ್ನು ಮಂಗಳವಾರ(ಜು.22) ಸಂಜೆ ವೇಳೆಗೆ ಹಿಂಪಡೆಯದಿದ್ದರೆ ಜು.23ರಿಂದ ಎರಡು ದಿನ ರಾಜ್ಯವ್ಯಾಪಿ ಹಾಲು, ಬೇಕರಿ ಉತ್ಪನ್ನಗಳ ಮಾರಾಟ ಬಂದ್ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ಎಚ್ಚರಿಕೆ ನೀಡಿದೆ.
ಸೋಮವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾರ್ಮಿಕ ಪರಿಷತ್ ಅಧ್ಯಕ್ಷ ರವಿಶೆಟ್ಟಿ ಬೈಂದೂರು, ಜಿಎಸ್‍ಟಿ ನೋಟಿಸ್ ನೀಡಿರುವುದನ್ನು ವಿರೋಧಿಸಿ ‘ಜು.25ರಂದು ಫ್ರೀಡಂ ಪಾರ್ಕ್‍ನಲ್ಲಿ ಇಡೀ ದಿನ ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ವರ್ತಕರೆಲ್ಲರೂ ಸೇರಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ಮಾರಾಟ ಬಂದ್: ಜು.23 ಮತ್ತು 24ರಂದು ಎರಡು ದಿನಗಳ ಹಾಲು, ಬೇಕರಿ ಉತ್ಪನ್ನಗಳು, ಬೀಡಿ, ಸಿಗರೇಟು ಮಾರಾಟವನ್ನು ಬಂದ್ ಮಾಡುತ್ತೇವೆ. ಎಲ್ಲ ಸಣ್ಣ ವ್ಯಾಪಾರಿಗಳು, ಅಂಡಿಗಳ ಮಾಲಕರು, ಕಾರ್ಮಿಕರು ಕಪ್ಪುಪಟ್ಟಿ ಧರಿಸಿ, ಅಂಗಡಿ ತೆರೆದಿದ್ದರೂ, ಹಾಲು, ಕಾಫಿ, ಚಹಾ, ಬೇಕರಿ ಉತ್ಪನ್ನಗಳನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡುವುದಿಲ್ಲ ಎಂದು ಅವರು ಹೇಳಿದರು.
ಸಣ್ಣ ವರ್ತಕರನ್ನು ಹತ್ತಿಕ್ಕಲು ವಾಣಿಜ್ಯ ಇಲಾಖೆಯಿಂದ ನೋಟೀಸ್ ಜಾರಿ ಮಾಡಿದ್ದು, ಇದರಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರದ ಪಾತ್ರವಿದೆ. ಡಿಜಿಟಲ್ ವಹಿವಾಟಿನ ಯಶಸ್ಸಿಗೆ ಕಾರಣರಾಗಿರುವ ಸಣ್ಣ ವ್ಯಾಪಾರಿಗಳನ್ನು ಶೋಷಣೆ ಮಾಡಲಾಗುತ್ತಿದೆ. ಆರ್ಥಿಕತೆಗೆ ಬಹುದೊಡ್ಡ ಕೊಡುಗೆ ನೀಡಿದ್ದೇವೆ. ಆದರೆ, ನೋಟಿಸ್ ನೀಡುವ ಮೂಲಕ ಡಿಜಿಟಲ್ ಇಂಡಿಯಾಗೆ ಕೊಳ್ಳಿ ಇಡಲು ಮುಂದಾಗಿದ್ದಾರೆ ಎಂದು ಅವರು ದೂರಿದರು.
ಬಿಜೆಪಿ ನಾಯಕರು ಡೋಂಘಿಗಳಂತೆ ವರ್ತಿಸುತ್ತಿದ್ದು, ಅವರಿಗೆ ಸಣ್ಣ ವ್ಯಾಪಾರಿಗಳ ಮೇಲೆ ಗೌರವ ಇದ್ದರೆ ಸಣ್ಣ ವ್ಯಾಪಾರಿಗಳಿಂದ ಸಂಗ್ರಹಿಸುವ ತೆರಿಗೆ ತಮಗೆ ಬೇಡ ಎಂದು ಹೇಳಲಿ ಎಂದು ಸವಾಲು ಹಾಕಿದ ಅವರು, ಹಣ್ಣು, ತರಕಾರಿ, ಹೂವಿನ ಮಾರಾಟ ಮಾಡುವವರಿಗೆ ತೆರಿಗೆ ನೋಟಿಸ್ ನೀಡಬಾರದು ಎಂಬ ನಿಯಮವಿದೆ. ಅದನ್ನು ಉಲ್ಲಂಘಿಸಿ ನೋಟಿಸ್ ನೀಡಲಾಗಿದೆ ಎಂದು ಟೀಕಿಸಿದರು.
ಕೇಂದ್ರ ಸರಕಾರ ಸಣ್ಣ ಉದ್ದಿಮೆದಾರರ ವಿರೋಧಿ ನೀತಿ ಅನುಸರಿಸುತ್ತಿದ್ದು, ನಮಗೆ ನ್ಯಾಯ ಸಿಗುವ ತನಕ ಹೋರಾಟ ನಡೆಸುತ್ತೇವೆ. ನಮ್ಮ ಹೋರಾಟಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ತೆರಿಗೆ ನೋಟೀಸ್ ನೋಡಿ ಈ ವರೆಗೆ ಯಾರಿಗೂ ಆಘಾತವಾಗಿಲ್ಲ. ಒಂದು ವೇಳೆ ಮುಂದಿನ ದಿನಗಳಲ್ಲಿ ಏನಾದರೂ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂದು ರವಿಶೆಟ್ಟಿ ಬೈಂದೂರು ಪ್ರಶ್ನಿಸಿದರು.
ಚಾಲಕರ ಸಂಘದ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ ಮಾತನಾಡಿ, ಚಾಲಕರು ಆನ್‍ಲೈನ್ ಮೂಲಕ ಹಣ ಸಂಗ್ರಹಿಸುತ್ತಿದ್ದು, ಭವಿಷ್ಯದಲ್ಲಿ ನಮಗೂ ತೆರಿಗೆ ಪಾವತಿಸುವಂತೆ ನೋಟೀಸ್ ನೀಡುವ ಆತಂಕವಿದೆ. ಏಕಾಏಕಿ ನೋಟಿಸ್ ನೀಡಿದರೆ ಪ್ರತಿಯೊಬ್ಬರಿಗೂ ತೊಂದರೆಯಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರಕಾರದ ಧೋರಣೆ ವಿರುದ್ಧ ಚಾಲಕ ಸಂಘಟನೆಗಳು ಹೋರಾಟಕ್ಕೆ ಬೆಂಬಲ ನೀಡುತ್ತಿವೆ ಎಂದರು.