×
Ad

ಮಹಾರಾಷ್ಟ್ರದಲ್ಲಿ ಭಾರೀ ಮಳೆ: ಚಿಕ್ಕೋಡಿ–ನಿಪ್ಪಾಣಿ ಭಾಗದ 8 ಸೇತುವೆಗಳು ಜಲಾವೃತ, ಕೃಷ್ಣಾ ನದಿಗೆ 1 ಲಕ್ಷ ಕ್ಯೂಸೆಕ್‌ ನೀರಿನ ಹರಿವು

Update: 2026-07-08 23:18 IST

ಬೆಳಗಾವಿ : ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಭಾರೀ ಮಳೆ ಮುಂದುವರಿದ ಪರಿಣಾಮ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಹಾಗೂ ನಿಪ್ಪಾಣಿ ಭಾಗದಲ್ಲಿ ಪ್ರವಾಹದ ಆತಂಕ ಹೆಚ್ಚಾಗಿದೆ. ಕೃಷ್ಣಾ ನದಿಗೆ ಪ್ರತಿದಿನ ಸುಮಾರು 1 ಲಕ್ಷ ಕ್ಯೂಸೆಕ್‌ ನೀರು ಹರಿದು ಬರುತ್ತಿದ್ದು, ನದಿ ಪಾತ್ರದ ಜನರು ಭಯದ ವಾತಾವರಣದಲ್ಲಿ ದಿನ ಕಳೆಯುವಂತಾಗಿದೆ. ಈಗಾಗಲೇ ಚಿಕ್ಕೋಡಿ–ನಿಪ್ಪಾಣಿ ವ್ಯಾಪ್ತಿಯ ಎಂಟು ಪ್ರಮುಖ ಸೇತುವೆಗಳು ಜಲಾವೃತಗೊಂಡಿದ್ದು, ಸಂಚಾರಕ್ಕೆ ತೊಂದರೆ ಉಂಟಾಗಿದೆ.

ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ರಾಜಾಪೂರ್ ಬ್ಯಾರೇಜ್‌ನಿಂದ ಕೃಷ್ಣಾ ನದಿಗೆ 59,875 ಕ್ಯೂಸೆಕ್‌ ನೀರು ಬಿಡುಗಡೆ ಮಾಡಲಾಗಿದೆ. ದೂಧಗಂಗಾ ನದಿಯಲ್ಲಿ ಮಲಿಕವಾಡ–ದತ್ತವಾಡ ಸೇತುವೆ ಬಳಿ 17,248 ಕ್ಯೂಸೆಕ್‌ ಹರಿವು ದಾಖಲಾಗಿದ್ದು, ಕಲ್ಲೋಳ–ಯಡೂರ ಬ್ಯಾರೇಜ್ ಬಳಿ ಕೃಷ್ಣಾ ನದಿಗೆ 77,123 ಕ್ಯೂಸೆಕ್‌ ನೀರು ಹರಿಯುತ್ತಿದೆ. ಹಿಪ್ಪರಗಿ ಬ್ಯಾರೇಜ್‌ನಿಂದ 50,150 ಕ್ಯೂಸೆಕ್‌ ನೀರು ಹೊರಬಿಡಲಾಗಿದೆ.

ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿರುವ ಕೊಯ್ನಾದಲ್ಲಿ 77 ಮಿ.ಮೀ., ನವಜಾದಲ್ಲಿ 56 ಮಿ.ಮೀ., ಮಹಾಬಳೇಶ್ವರದಲ್ಲಿ 75 ಮಿ.ಮೀ., ವಾರಣಾದಲ್ಲಿ 46 ಮಿ.ಮೀ. ಹಾಗೂ ರಾಧಾನಗರಿಯಲ್ಲಿ 75 ಮಿ.ಮೀ. ಮಳೆಯಾಗಿದ್ದು, ರಾಜ್ಯದ ಬಹುತೇಕ ಜಲಾಶಯಗಳು ಶೇ.40ರಷ್ಟು ಭರ್ತಿಯಾಗಿವೆ.

ಭಾರೀ ಮಳೆಯ ಪರಿಣಾಮ ನಿಪ್ಪಾಣಿ ತಾಲ್ಲೂಕಿನ ಭೋಜ–ಕಾರದಗಾ, ಭೋಜ–ಕುನ್ನೂರ, ಅಕ್ಕೋಳ–ಸಿದ್ನಾಳ, ಜತ್ರಾಟ–ಭೀವಶಿ, ಹುನ್ನೂರಗಿ–ಮಮದಾಪುರ, ಬಾರವಾಡ–ಕುನ್ನೂರ ಹಾಗೂ ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ–ಯಡೂರ ಮತ್ತು ಮಲಿಕವಾಡ–ದತ್ತವಾಡ ಸಂಪರ್ಕ ಸೇತುವೆಗಳು ಸಂಪೂರ್ಣ ಜಲಾವೃತಗೊಂಡಿವೆ. ಇದರಿಂದ ಈ ಮಾರ್ಗಗಳ ಸಂಚಾರ ಸ್ಥಗಿತಗೊಂಡಿದ್ದು, ಸಾರ್ವಜನಿಕರು ಪರ್ಯಾಯ ಮಾರ್ಗಗಳನ್ನು ಬಳಸುತ್ತಿದ್ದಾರೆ.

ಗಡಿಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಹಿನ್ನೆಲೆಯಲ್ಲಿ ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ ಸುಮಾರು 1 ಲಕ್ಷ ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ರಾಜಾಪೂರ್ ಬ್ಯಾರೇಜ್‌ನಿಂದ ಹೆಚ್ಚಿನ ಪ್ರಮಾಣದ ನೀರು ಬಿಡುಗಡೆಯಾಗಿರುವುದರ ಜೊತೆಗೆ ದೂಧಗಂಗಾ ಹಾಗೂ ವೇದಗಂಗಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಪರಿಣಾಮವಾಗಿ ಚಿಕ್ಕೋಡಿ ಹಾಗೂ ನಿಪ್ಪಾಣಿ ಭಾಗದ ಹಲವಾರು ಸಂಪರ್ಕ ಮಾರ್ಗಗಳು ಕಡಿತಗೊಂಡಿವೆ.

ಇದೀಗ ಕೃಷ್ಣಾ, ವೇದಗಂಗಾ ಹಾಗೂ ದೂಧಗಂಗಾ ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ಸಾರ್ವಜನಿಕರು ನದಿಗೆ ಇಳಿಯದಂತೆ ಹಾಗೂ ಪ್ರವಾಹಪೀಡಿತ ಪ್ರದೇಶಗಳಿಗೆ ತೆರಳದಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಸೂಚಿಸಿದೆ. ನದಿ ಪಾತ್ರದ ಗ್ರಾಮಗಳ ನಿವಾಸಿಗಳು ಎಚ್ಚರಿಕೆಯಿಂದ ಇರಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News