ಕೊಡಗಿನಲ್ಲಿ ಉತ್ತಮ ಮಳೆ : ನದಿಗಳಲ್ಲಿ ನೀರಿನ ಮಟ್ಟ ಏರಿಕೆ : ಭಾಗಮಂಡಲ, ಪೊನ್ನಂಪೇಟೆಯಲ್ಲಿ 7 ಇಂಚು ಮಳೆ
ಮಡಿಕೇರಿ : ಕೊಡಗಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ನದಿ ನೀರಿನ ಮಟ್ಟ ಏರಿಕೆಯಾಗುತ್ತಲೇ ಇದೆ. ಭಾಗಮಂಡಲ ಮತ್ತು ಪೊನ್ನಂಪೇಟೆಯಲ್ಲಿ ಕಳೆದ 24 ಗಂಟೆಗಳಲ್ಲಿ ತಲಾ 7 ಇಂಚು ಮಳೆ ದಾಖಲಾಗಿದೆ.
ವಿರಾಜಪೇಟೆ ತಾಲ್ಲೂಕು ಅಮ್ಮತಿ ಹೋಬಳಿ ಕರಡಿಗೋಡು ಕಾವೇರಿ ನದಿ ಪಾತ್ರದಲ್ಲಿರುವ ಹೊಳೆಕೆರೆಯಲ್ಲಿ ಕರಡಿಗೋಡು ಚಿಕ್ಕನಳ್ಳಿ ಸಂಪರ್ಕ ರಸ್ತೆ ಪ್ರವಾಹದಿಂದ ಕಡಿತ ಗೊಂಡಿದೆ. ನೂಡಲ್ ಅಧಿಕಾರಿಗಳು, ಕಂದಾಯ ಪರಿವೀಕ್ಷಕರು, ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ರಸ್ತೆಯಲ್ಲಿ ಬ್ಯಾರಿಕೆಡ್ ಅಳವಡಿಸಿ ಸಂಚಾರ ನಿಷೇಧಿಸಿದ್ದಾರೆ.
ವಿರಾಜಪೇಟೆ ಹೋಬಳಿ ಅರಮೇರಿ-ಚಾಮಿಯಾಲ ಸಂಪರ್ಕ ಸೇತುವೆಯು ಸಂಪೂರ್ಣ ಜಲಾವೃತವಾಗಿದ್ದು, ಇಲ್ಲಿ ಕೂಡ ಮುನ್ನೆಚ್ಚರಿಕೆ ಕ್ರಮವಾಗಿ ಬ್ಯಾರಿಕೇಡ್ ಹಾಕಲಾಗಿದೆ.
ಮಡಿಕೇರಿ ತಾಲ್ಲೂಕಿನಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಮೈಕೊರೆಯುವ ಚಳಿಯ ವಾತಾವರಣವಿದೆ.
ಕೊಡಗು ಜಿಲ್ಲೆಯಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 60.45 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 19.29 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 631.54 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 1617.95 ಮಿ.ಮೀ ಮಳೆಯಾಗಿತ್ತು.
ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 87.75 ಮಿ.ಮೀ. ಕಳೆದ ವರ್ಷ ಇದೇ ದಿನ 20.65 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 906.27 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 2329.56 ಮಿ.ಮೀ. ಮಳೆಯಾಗಿತ್ತು.
ಹಾರಂಗಿ ಜಲಾಶಯದ ನೀರಿನ ಮಟ್ಟ
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2838.68 ಅಡಿಗಳು. ಕಳೆದ ವರ್ಷ ಇದೇ ದಿನ 2852.31 ಅಡಿಗಳು. ಹಾರಂಗಿಯಲ್ಲಿ ಬಿದ್ದ ಮಳೆ 9.20 ಮಿ.ಮೀ., ಕಳೆದ ವರ್ಷ ಇದೇ ದಿನ 1.80 ಮಿ.ಮೀ., ಇಂದಿನ ನೀರಿನ ಒಳಹರಿವು 2090 ಕ್ಯುಸೆಕ್, ಕಳೆದ ವರ್ಷ ಇದೇ ದಿನ 4686 ಕ್ಯುಸೆಕ್., ಇಂದಿನ ನೀರಿನ ಹೊರ ಹರಿವು ನದಿಗೆ 180 ಕ್ಯುಸೆಕ್. ಕಳೆದ ವರ್ಷ ಇದೇ ದಿನ ನೀರಿನ ಹೊರ ಹರಿವು ನದಿಗೆ 7083 ಕ್ಯುಸೆಕ್.