×
Ad

ಕಸಾಪ ಆರ್ಥಿಕ ಅವ್ಯವಹಾರಕ್ಕೆ ಸಂಬಂಧಿಸಿದ 14 ಆರೋಪಗಳ ವಿಚಾರಣೆ ಪೂರ್ಣ : ಹೈಕೋರ್ಟ್‌ಗೆ ರಾಜ್ಯ ಸರಕಾರದ ಮಾಹಿತಿ

Update: 2025-12-08 19:04 IST

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ (ಕಸಾಪ) ನಡೆದಿದೆ ಎನ್ನಲಾದ ಆರ್ಥಿಕ ಅವ್ಯವಹಾರಕ್ಕೆ ಸಂಬಂಧಿಸಿದ 17 ಆರೋಪಗಳಲ್ಲಿ 14 ಆರೋಪಗಳ ವಿಚಾರಣೆ ಪೂರ್ಣಗೊಂಡಿದ್ದು, ಉಳಿದ 3 ಆರೋಪಗಳ ಕುರಿತ ವಿಚಾರಣೆಯನ್ನು 10 ದಿನಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ರಾಜ್ಯ ಸರಕಾರ ಹೈಕೋರ್ಟ್‌ಗೆ ತಿಳಿಸಿದೆ.

ಕಸಾಪ ಪದಾಧಿಕಾರಿಗಳ ಕಾರ್ಯವೈಖರಿ, ಅನುದಾನ ಮತ್ತು ಖರ್ಚು-ವೆಚ್ಚಗಳ ಕುರಿತು ವಿಚಾರಣೆ ನಡೆಸಲು ತನಿಖಾಧಿಕಾರಿ ನೇಮಕ ಮಾಡಿ 2025ರ ಜೂನ್ 26 ಹಾಗೂ 30ರಂದು ಸಹಕಾರ ಸಂಘಗಳ ನೋಂದಣಾಧಿಕಾರಿ ಹೊರಡಿಸಿದ್ದ ಆದೇಶಕ್ಕೆ ತಡೆ ಕೋರಿ ಕಸಾಪ ಅಧ್ಯಕ್ಷ ಮಹೇಶ್‌ ಜೋಶಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ರಾಜ್ಯ ಸರಕಾರದ ಪರ ಹಾಜರಿದ್ದ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ 14 ಆರೋಪಗಳ ಕುರಿತು ವಿಚಾರಣೆ ಪೂರ್ಣಗೊಳಿಸಲಾಗಿದ್ದು, ಬಾಕಿ 3 ಆರೋಪಗಳ ವಿಚಾರಣೆ ಪೂರ್ಣಗೊಳಿಸಲು 1 ವಾರ ಅಥವಾ 10 ದಿನ ಕಾಲಾವಕಾಶ ಬೇಕಾಗಲಿದೆ ಎಂದು ತಿಳಿಸಿದರಲ್ಲದೆ, ಈ ಸಂಬಂಧ ಡಿಸೆಂಬರ್ 5 ರಂದು ವಿಚಾರಣಾಧಿಕಾರಿ ಕಳುಹಿಸಿದ್ದ ಪತ್ರವನ್ನೊಳಗೊಂಡ ಮೆಮೊ ಅನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.

ಆಗ ನ್ಯಾಯಮೂರ್ತಿಗಳು, 1 ವಾರ ಬೇಕೇ ಅಥವಾ 10 ದಿನ ಬೇಕೇ ಎಂಬುದನ್ನು ಸ್ಪಷ್ಟವಾಗಿ ತಿಳಿಸಿ, 10 ದಿನ ಎಂದಾದರೆ ಚಳಿಗಾಲದ ರಜೆಯ ನಂತರ ಅರ್ಜಿಯನ್ನು ವಿಚಾರಣೆಗೆ ನಿಗದಿಪಡಿಸಲಾಗುವುದು ಎಂದರು.

ಅದಕ್ಕೆ ಅಡ್ವೊಕೇಟ್ ಜನರಲ್ 10 ದಿನಗಳ ಒಳಗೆ ವಿಚಾರಣೆ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು. ಇದನ್ನು ದಾಖಲಿಸಿಕೊಂಡ ನ್ಯಾಯಪೀಠ, ವಿಚಾರಣೆಯನ್ನು ಜನವರಿ 13ಕ್ಕೆ ಮುಂದೂಡಿತು.

ಕೋರ್ಟ್ ಅಭಿಪ್ರಾಯ ತೆಗೆದುಹಾಕಲು ಮನವಿ:

ವಿಚಾರಣೆ ವೇಳೆ ಮಹೇಶ್ ಜೋಶಿ ಪರ ಹಿರಿಯ ವಕೀಲ ಜಯಕುಮಾರ್ ಪಾಟೀಲ್ ಅವರು, ನವೆಂಬರ್ 6ರಂದು ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಕೆಲ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ. ಅವುಗಳನ್ನು ಆದೇಶದಿಂದ ತೆಗೆದುಹಾಕುವಂತೆ ಕೋರಿ ಅರ್ಜಿ ಸಲ್ಲಿಸಲಾಗಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಆ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸುವುದಾಗಿ ನ್ಯಾಯಪೀಠ ಹೇಳಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News