×
Ad

ಹಿಂದೂ ಉತ್ತರಾಧಿಕಾರ ತಿದ್ದುಪಡಿ ಕಾಯ್ದೆ; ಗೊಂದಲ ಪರಿಹರಿಸಲು ಕೇಂದ್ರಕ್ಕೆ ಹೈಕೋರ್ಟ್ ನಿರ್ದೇಶನ

Update: 2025-12-29 21:55 IST

ಬೆಂಗಳೂರು : ಹಿಂದೂ ಉತ್ತರಾಧಿಕಾರ ಕಾಯ್ದೆಗೆ 2005ರಲ್ಲಿ ತಂದಿರುವ ತಿದ್ದುಪಡಿಯಲ್ಲಿ ಮೃತ ವ್ಯಕ್ತಿಯ ವಿಧವಾ ಪತ್ನಿ ಮತ್ತು ತಾಯಿಯ ಹಕ್ಕುಗಳ ಸಂಬಂಧ ಕೆಲ ಗೊಂದಲಗಳಿದ್ದು, ಅದಕ್ಕೆ ಸೂಕ್ತ ತಿದ್ದುಪಡಿ ಮಾಡುವಂತೆ ಕೇಂದ್ರ ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಎರಡನೇ ಪತ್ನಿ ಮತ್ತು ಆಕೆಯ ಮೂವರು ಮಕ್ಕಳು ಸಲ್ಲಿಸಿರುವ ಅರ್ಜಿಯನ್ನು ಧಾರವಾಡ ಪೀಠದಲ್ಲಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್‌.ದೇವದಾಸ್‌ ಹಾಗೂ ನ್ಯಾಯಮೂರ್ತಿ ಬಿ. ಮುರಳೀಧರ್ ಪೈ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ನಿರ್ದೇಶನ ನೀಡಿದೆ.

ಹಿರೇಕೊಪ್ಪದ ಶರಣವ್ವ ಮತ್ತಿತರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡಸಿದ ನ್ಯಾಯಪೀಠ, ಕಾಯ್ದೆಯಲ್ಲಿನ ಗೊಂದಲಕಾರಿ ಅಂಶಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿ, ವಿಧವೆ ಮತ್ತು ತಾಯಿಯ ಹಕ್ಕುಗಳನ್ನು ರಕ್ಷಿಸುವ ಸಂಬಂಧ ಕೆಲವು ನಿಬಂಧನೆಗಳಿಗೆ ತಿದ್ದುಪಡಿ ಮಾಡಬೇಕಾದ ಅಗತ್ಯತೆ ಇದೆ ಎಂದು ಆದೇಶಿಸಿದೆ.

ವರ್ಗ-1ರಲ್ಲಿ ವಿಧವಾ ಪತ್ನಿ, ತಾಯಿ, ಪುತ್ರನ ವಿಧವಾ ಪತ್ನಿ ಇತ್ಯಾದಿಗೆ ಸಂಬಂಧಿಸಿದ ವಿಷಯಗಳನ್ನು ಅಚಾತುರ್ಯದಿಂದ ತಿದ್ದುಪಡಿ ಸೆಕ್ಷನ್‌ 6ರಲ್ಲಿ ಕೈಬಿಡಲಾಗಿದೆ. ಸಾಮಾನ್ಯವಾಗಿ ತಿದ್ದುಪಡಿಯಾಗಿರುವ ಸೆಕ್ಷನ್‌ 6 ಓದಿದರೆ ವರ್ಗ-1ರ ಉಲ್ಲೇಖವಿಲ್ಲ. ಷೆಡ್ಯೂಲ್‌ನ ವರ್ಗ-1ಕ್ಕೆ ಅದನ್ನು ಸೇರ್ಪಡೆ ಮಾಡಿ ತಿದ್ದುಪಡಿ ಮಾಡುವುದು ಗೊಂದಲ ನಿವಾರಿಸುವ ದೃಷ್ಟಿಯಿಂದ ಅಗತ್ಯವಾಗಿದೆ ಎಂದು ಆದೇಶಿಸಿರುವ ನ್ಯಾಯಪೀಠ, ಆದೇಶದ ಪ್ರತಿಯನ್ನು ಕೇಂದ್ರದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವಾಲಯಕ್ಕೆ ಕಳುಹಿಸಿಕೊಡಲು ರಿಜಿಸ್ಟ್ರಿಗೆ ನಿರ್ದೇಶಿಸಿದೆ.

2005ರಲ್ಲಿ ಹಿಂದೂ ಉತ್ತರಾಧಿಕಾರ ಕಾಯ್ದೆ ಸೆಕ್ಷನ್‌ 6ಕ್ಕೆ ತಂದಿರುವ ಜಂಟಿಯಾಗಿರುವ ಪಿತ್ರಾರ್ಜಿತ ಆಸ್ತಿಯ ವಿಭಜನೆಗೆ ಕುರಿತ ವಿಚಾರದಲ್ಲಿ ವಿಧವೆ ಮತ್ತು ಆಕೆಯ ಅತ್ತೆಯ (ಪತಿಯ ತಾಯಿ) ಕುರಿತು ಕೆಲವು ಗೊಂದಲಗಳಿರುವುದನ್ನು ಈ ಸಂದರ್ಭದಲ್ಲಿ ಸಂಬಂಧಿತರ ಗಮನಕ್ಕೆ ತರುವುದು ನಮ್ಮ ಕರ್ತವ್ಯವಾಗಿದೆ. ಸೆಕ್ಷನ್‌ 6ರಲ್ಲಿ ವಿಧವಾ ಪತ್ನಿ ಮತ್ತು ತಾಯಿಯ ಬಗ್ಗೆ ಉಲ್ಲೇಖವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣವೇನು?

2008ರಲ್ಲಿ ಮೃತಪಟ್ಟ ವ್ಯಕ್ತಿಯ ಪಿತ್ರಾರ್ಜಿತ ಆಸ್ತಿಯಲ್ಲಿ ವಿಭಾಗದ ಮಾಲೀಕತ್ವಕ್ಕೆ ಸಂಬಂಧಿಸಿದ ವಿವಾದ ಪ್ರಕರಣ ಇದಾಗಿದ್ದು, ಮೃತ ವ್ಯಕ್ತಿಯ ಎರಡನೇ ಪತ್ನಿ ಮತ್ತು ಆಕೆಯ ಮೂವರು ಮಕ್ಕಳು ಹಾಗೂ ಮೊದಲ ಪತ್ನಿ (ಸಂತಾನವಿಲ್ಲ) ಆಸ್ತಿ ವಿಭಾಗ ಮತ್ತು ಮಾಲೀಕತ್ವಕ್ಕೆ ಸಂಬಂಧಿಸಿದಂತೆ 2021ರ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿದ್ದರು.

ಎರಡನೇ ಪತ್ನಿಯ ಮಕ್ಕಳು ತಮ್ಮ ತಂದೆಯ ಮೊದಲ ಪತ್ನಿಯ ಮದುವೆಯ ಸಿಂಧುತ್ವದ ಬಗ್ಗೆ ಅನುಮಾನ ವ್ಯಕ್ತಪಡಿಸಿ ಅದನ್ನು ಅಕ್ರಮವೆಂದಿದ್ದರು. ಮೊದಲ ಪತ್ನಿಯ ಪರ ವಕೀಲರು ಪತಿಯ ಎರಡನೇ ವಿವಾಹವು ಕಾನೂನುಬಾಹಿರವಾಗಿದ್ದು ಅಕೆಯಿಂದ ಪಡೆದ ಮಕ್ಕಳು ಕಾನೂನುರೀತ್ಯಾ ಆಸ್ತಿ ಪಡೆಯುವ ಪ್ರಶ್ನೆ ಉದ್ಭವಿಸುವುದಿಲ್ಲಎಂದು ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News