ಎಫ್‌ಐಆರ್ ರದ್ದು ಕೋರಿದ ಅರ್ಜಿಗಳಲ್ಲಿ ಮಧ್ಯಂತರ ಜಾಮೀನಿಗೆ ಮನವಿ ಸರಿಯಲ್ಲ : ಹೈಕೋರ್ಟ್
ಬೆಂಗಳೂರು : ಕ್ರಿಮಿನಲ್ ಪ್ರಕರಣಗಳಲ್ಲಿ ಜಾಮೀನು ಪಡೆಯಲು ಅವಕಾಶವಿದ್ದರೂ, ಆರೋಪಿಗಳು ನೇರವಾಗಿ ಹೈಕೋರ್ಟ್‌ಗೆ ಎಫ್‌ಐಆರ್ ರದ್ದು ಕೋರಿ ಅರ್ಜಿ ಸಲ್ಲಿಸಿ, ಮಧ್ಯಂತರ ಜಾಮೀನು ಕೋರುವುದು ಸರಿಯಲ್ಲ ಎಂದು ಹೈಕೋರ್ಟ್ ಮೌಖಿಕವಾಗಿ ಹೇಳಿದೆ.
ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಗಳ ಪರ ವಕೀಲರು ಎಫ್‌ಐಆರ್ ರದ್ದತಿಗೆ ಕೋರಿ ಸಲ್ಲಿಸಿದ ಅರ್ಜಿಗಳಲ್ಲಿ ಆರೋಪಿಗಳಿಗೆ ಮಧ್ಯಂತರ ಜಾಮೀನು ಮಂಜೂರಾತಿಗೆ ಮನವಿ ಮಾಡುವುದನ್ನು ಗಮನಿಸಿದ ನ್ಯಾಯಮೂರ್ತಿ ಅನಂತ ರಾಮನಾಥ್ ಹೆಗಡೆ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.
ಅತಿಕ್ರಮ ಪ್ರವೇಶ ಸೇರಿ ಇನ್ನಿತರ ಜಾಮೀನು ಸಿಗಬಹುದಾದ ಪ್ರಕರಣಗಳಲ್ಲಿ ಆರೋಪಿಗಳು ಮೊದಲಿಗೆ ಹೈಕೋರ್ಟ್‌ಗೆ ಎಫ್‌ಐಆರ್ ರದ್ದು ಕೋರಿ ಅರ್ಜಿ ಸಲ್ಲಿಸುತ್ತಾರೆ. ಆ ಅರ್ಜಿ ವಿಚಾರಣೆ ವೇಳೆ ಮಧ್ಯಂತರ ಜಾಮೀನು ಕೋರಿ ಆರೋಪಿಗಳ ಪರ ವಕೀಲರು ಮನವಿ ಮಾಡುತ್ತಾರೆ. ಇದು ಸರಿಯಾದ ಕ್ರಮವಲ್ಲ. ಜಾಮೀನು ಕೋರಿಕೆಗೆ ನಿರ್ದಿಷ್ಟ ಕಾರ್ಯ ವಿಧಾನ/ನಿಯಮಗಳ ಮತ್ತು ಪ್ರಕ್ರಿಯೆ ಇರುತ್ತದೆ. ಬಂಧನದ ಆತಂಕವಿದ್ದರೆ, ಮೊದಲಿಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಿ, ವಿಚಾರಣಾ ನ್ಯಾಯಾಲಯದಿಂದಲೇ ಜಾಮೀನು ಪಡೆಯಬಹುದು ಎಂದು ಹೇಳಿತು.
ಆನಂತರ ಹೈಕೋರ್ಟ್‌ನಲ್ಲಿ ಎಫ್‌ಐಆರ್ ರದ್ದತಿಗೆ ಕೋರುವ ಅವಕಾಶವಿರುತ್ತದೆ. ಜಾಮೀನು ಪಡೆಯಲು ಅವಕಾಶವಿದ್ದರೂ, ಎಫ್‌ಐಆರ್ ರದ್ದತಿ ಕೋರಿದ ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿಗಳಲ್ಲಿ ಮಧ್ಯಂತರ ಜಾಮೀನು ಕೋರಲಾಗುತ್ತದೆ. ಆರೋಪಿಗಳಿಗೆ ವಕೀಲರು ನೀಡುವ ಭರವಸೆಯಿಂದ ಇಂತಹ ಬೆಳವಣಿಗೆಗಳು ನಡೆಯುತ್ತವೆ ಎಂದು ನ್ಯಾಯಾಲಯ ಮೌಖಿಕವಾಗಿ ನುಡಿಯಿತು.
ಅಂತಿಮವಾಗಿ ಎಫ್‌ಐಆರ್ ರದ್ದು ಕೋರಿದ ಹಲವು ಅರ್ಜಿಗಳಲ್ಲಿ ಆರೋಪಿಗಳಿಗೆ ಮಧ್ಯಂತರ ಜಾಮೀನು ಮಂಜೂರಾತಿಗೆ ವಕೀಲರು ಮಾಡಿದ ಮನವಿಗೆ ಒಪ್ಪದ ನ್ಯಾಯಪೀಠ, ಅರ್ಜಿಯಲ್ಲಿರುವ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ, ಆಕ್ಷೇಪಣೆ ಸಲ್ಲಿಕೆಗೆ ಸೂಚಿಸಿ ವಿಚಾರಣೆ ಮುಂದೂಡಿತು.