ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ 9, 10ನೇ ತರಗತಿಗಳಿಗೂ ಆರ್‌ಟಿಇ ವಿಸ್ತರಣೆ; ಶಿಕ್ಷಣ ಇಲಾಖೆ ಸುತ್ತೋಲೆಗೆ ಹೈಕೋರ್ಟ್ ಮಧ್ಯಂತರ ತಡೆ
ಸಾಂದರ್ಭಿಕ ಚಿತ್ರ | PC : judiciary.karnataka.gov.in
ಬೆಂಗಳೂರು : ಕಡ್ಡಾಯ ಶಿಕ್ಷಣ ಹಕ್ಕು(ಆರ್‌ಟಿಇ) ಕಾಯ್ದೆಯಡಿ 2025-26ನೇ ಶೈಕ್ಷಣಿಕ ವರ್ಷಗಳಲ್ಲಿ ಎಂಟನೇ ತರಗತಿಯಲ್ಲಿ ತೇರ್ಗಡೆಯಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ 9 ಮತ್ತು 10ನೇ ತರಗತಿವರೆಗೂ ಅದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮುಂದುವರಿಸಲು ಅನುಮತಿ ನೀಡಿ ಶಿಕ್ಷಣ ಇಲಾಖೆ ಹೊರಡಿಸಿದ್ದ ಸುತ್ತೋಲೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ರಾಜ್ಯ ಸರ್ಕಾರ 2026ರ ಮೇ 21ರಂದು ಹೊರಡಿಸಿದ್ದ ಸುತ್ತೋಲೆ ಪ್ರಶ್ನಿಸಿ ಖಾಸಗಿ ಅನುದಾನರಹಿತ ಇಂಗ್ಲಿಷ್ ಮಾಧ್ಯಮ ಶಾಲೆಗಳ ಪ್ರತಿನಿಧಿ ಸಂಸ್ಥೆಯಾಗಿರುವ ಕರ್ನಾಟಕದ ಖಾಸಗಿ ಶಾಲೆಗಳ ಸಂಘ ಸೇರಿ ವಿವಿಧ ಶಿಕ್ಷಣ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಅಶೋಕ್ ಎಸ್.ಕಿಣಗಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿರುವ ವಿಷಯ ಪರಿಶೀಲನೆಗೊಳಪಡಬೇಕಾದ ಅವಶ್ಯಕತೆಯಿದ್ದು, ಅಂತಿಮ ಇತ್ಯರ್ಥದ ತನಕ ಸುತ್ತೋಲೆಯ ಜಾರಿಗೆ ತಡೆ ನೀಡಬೇಕೆಂಬ ಅರ್ಜಿದಾರರ ಮಧ್ಯಂತರ ಮನವಿ ಪರಿಗಣಿಸಲಾಗುತ್ತಿದ್ದು, ಮುಂದಿನ ವಿಚಾರಣೆವರೆಗೆ ಸುತ್ತೋಲೆಗೆ ತಡೆ ನೀಡಲಾಗಿದೆ ಎಂದು ಆದೇಶಿಸಿತು.
ಜತೆಗೆ, ಅರ್ಜಿಯಲ್ಲಿ ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಶಾಲಾ ಶಿಕ್ಷಣ ಇಲಾಖೆ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಜುಲೈ 3ಕ್ಕೆ ಮುಂದೂಡಿತು.
ಕೇವಲ ಎಸ್ಸಿ ಮತ್ತು ಎಸ್ಟಿ ವಿದ್ಯಾರ್ಥಿಗಳಿಗೆ ಮಾತ್ರ ಈ ಸೌಲಭ್ಯ ವಿಸ್ತರಿಸಿರುವುದು ಸಂವಿಧಾನ ಪರಿಚ್ಛೇದ 14ಕ್ಕೆ (ಸಮಾನತೆಯ ಹಕ್ಕು) ವಿರುದ್ಧವಾಗಿದ್ದು, ಇದು ತಾರತಮ್ಯದ ಕ್ರಮವಾಗಿದೆ. ಈ ಆದೇಶವನ್ನು ಮುಖ್ಯಮಂತ್ರಿಗಳ ಕಚೇರಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶನದ ಮೇರೆಗೆ ಹೊರಡಿಸಲಾಗಿದೆ. ಸಂಬಂಧಿತ ಅಧಿಕಾರಿಗಳು ಸ್ವತಂತ್ರವಾಗಿ ವಿಚಾರ ಪರಿಶೀಲನೆ ನಡೆಸಿಲ್ಲ. ಆದ್ದರಿಂದ, 2026ರ ಮೇ 21ರ ಸುತ್ತೋಲೆಯನ್ನು ರದ್ದುಪಡಿಸಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.
ಅರ್ಜಿದಾರರ ಆಕ್ಷೇಪವೇನು?
2026ರ ಮೇ 21ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆಯ ಪ್ರಕಾರ 2025-26ನೇ ಶೈಕ್ಷಣಿಕ ವರ್ಷದಲ್ಲಿ 8ನೇ ತರಗತಿ ಪೂರ್ಣಗೊಳಿಸಿರುವ ಎಸ್ಸಿ ಮತ್ತು ಎಸ್ಟಿ ವರ್ಗದ ವಿದ್ಯಾರ್ಥಿಗಳು ಕಾಯ್ದೆಯ ಸೆಕ್ಷನ್ 12(1)(ಸಿ) ಅಡಿಯಲ್ಲಿ ಅದೇ ಶಾಲೆಯಲ್ಲಿ 9ನೇ ಮತ್ತು 10ನೇ ತರಗತಿಯನ್ನು ಮುಂದುವರಿಸಬಹುದು ಎಂದು ಹೇಳಲಾಗಿದೆ. ಈ ಸುತ್ತೋಲೆ ಶಿಕ್ಷಣ ಹಕ್ಕು ಕಾಯ್ದೆ 2009 ಹಾಗೂ ಕರ್ನಾಟಕ ಶಿಕ್ಷಣ ಹಕ್ಕು ನಿಯಮಗಳು- 2012ಕ್ಕೆ ತದ್ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.
ಆರ್‌ಟಿಇ ಕಾಯ್ದೆಯ ಈ ವಿಧಿಯು 9 ಮತ್ತು 10ನೇ ತರಗತಿಗೆ ಅನ್ವಯಿಸುವುದಿಲ್ಲ. ಸುತ್ತೋಲೆ ಮೂಲಕ ಅದರ ವ್ಯಾಪ್ತಿಯನ್ನು ಅನಧಿಕೃತವಾಗಿ ವಿಸ್ತರಿಸಲಾಗಿದೆ. ಆರ್‌ಟಿಇ ಕಾಯ್ದೆಯು 6ರಿಂದ 14 ವರ್ಷದ ಮಕ್ಕಳಿಗೆ ಮಾತ್ರ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕು ನೀಡುತ್ತದೆ. ಸುತ್ತೋಲೆ ಮೂಲಕ 9 ಮತ್ತು 10ನೇ ತರಗತಿಗೆ ಈ ಸೌಲಭ್ಯ ವಿಸ್ತರಿಸುವ ಅಧಿಕಾರ ಸರ್ಕಾರಕ್ಕೆ ಇಲ್ಲ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.