‘ಕಲಬುರಗಿ ಜವಳಿ ಪಾರ್ಕ್’ ನೀಲನಕ್ಷೆ ಸಿದ್ಧ: ಪ್ರಿಯಾಂಕ್ ಖರ್ಗೆ
ಬೆಂಗಳೂರು : ಕಲಬುರಗಿಯಲ್ಲಿ ಸ್ಥಾಪನೆಯಾಗಲಿರುವ ಮಹತ್ವಾಕಾಂಕ್ಷಿ ‘ಪಿಎಂ-ಮಿತ್ರ ಜವಳಿ ಪಾರ್ಕ್' ಯೋಜನೆಯನ್ನು ವ್ಯವಸ್ಥಿತವಾಗಿ ಹಾಗೂ ವೇಗವಾಗಿ ಅನುಷ್ಠಾನಗೊಳಿಸಲು ಮೊದಲ ಹಂತದ ಮೂಲಸೌಕರ್ಯ ನೀಲನಕ್ಷೆ ಮತ್ತು ಆಡಳಿತಾತ್ಮಕ ಮಾರ್ಗಸೂಚಿಯನ್ನು ಸಿದ್ಧಪಡಿಸಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಗುರುವಾರ ವಿಕಾಸಸೌಧದಲ್ಲಿನ ತಮ್ಮ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಕಲಬುರಗಿ ಬಳಿ ಮೊದಲ ಹಂತದಲ್ಲಿ 1ಸಾವಿರ ಎಕರೆ ಪ್ರದೇಶದಲ್ಲಿ ರೂಪಿಸಲಾಗುತ್ತಿರುವ ಜವಳಿ ಪಾರ್ಕ್ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಲಾಗಿದೆ. ಪಾರ್ಕ್ ನಿರ್ಮಾಣ ಕಾಮಗಾರಿಗಳು ಆರಂಭವಾಗಲಿದ್ದು, ಹೂಡಿಕೆ ಮಾಡುವ ಉದ್ಯಮಗಳಿಗೆ ತಕ್ಷಣವೇ ಉತ್ಪಾದನೆ ಆರಂಭಿಸಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಮೂಲಸೌಕರ್ಯಗಳನ್ನು ಒಳಗೊಂಡ ‘ಪ್ಲಗ್ ಅಂಡ್ ಪ್ಲೇ' ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದರು.
ಮೊದಲ ಹಂತದಲ್ಲಿ ಕೋರ್ ಮೂಲಸೌಕರ್ಯಗಳ ಕಾಮಗಾರಿಗಳು ಆರಂಭವಾಗಲಿದ್ದು, ಸಿವಿಲ್ ಮತ್ತು ಭೂ ಅಭಿವೃದ್ಧಿ, ಆಂತರಿಕ ರಸ್ತೆಗಳ ನಿರ್ಮಾಣ ಮತ್ತು ಮಳೆ ನೀರನ್ನು ಸುಲಭವಾಗಿ ಹೊರಹಾಕಲು ಸುಸಜ್ಜಿತ ಆರ್‍ಸಿಸಿ ಒಳಚರಂಡಿ ವ್ಯವಸ್ಥೆ ಕಲ್ಪಿಸಲಾಗುವುದು. ಇಡೀ ಪಾರ್ಕ್‍ನಲ್ಲಿ ಭೂಗತ ಹೈ-ಟೆನ್ಷನ್/ ಲೋ-ಟೆನ್ಷನ್ ವಿದ್ಯುತ್ ವಿತರಣಾ ಮಾರ್ಗಗಳು ಮತ್ತು ಪರಿಸರ ಸ್ನೇಹಿ ಸೋಲಾರ್ ಬೀದಿ ದೀಪಗಳ ಅಳವಡಿಸುವ ಪ್ರಕ್ರಿಯೆಯೂ ನಡೆಯಲಿದೆ ಎಂದು ಅವರು ತಿಳಿಸಿದರು.
5 ಲಕ್ಷ ಲೀಟರ್ ಸಾಮರ್ಥ್ಯದ ನೆಲಮಟ್ಟದ ಜಲಸಂಗ್ರಹಾಗಾರ ಮೂಲಕ ಶುದ್ಧ ನೀರು ಸರಬರಾಜು ಜಾಲ ಮತ್ತು ಸಂಸ್ಕರಿಸಿದ ನೀರಿಗಾಗಿ 10ಲಕ್ಷ ಲೀಟರ್ ಸಾಮಥ್ರ್ಯದ ಮೇಲ್ಮಟ್ಟದ ಜಲ ಸಂಗ್ರಹಾಗಾರ ನಿರ್ಮಾಣ. ಪರಿಸರ ಸಂರಕ್ಷಣೆಗಾಗಿ ಶೂನ್ಯ ದ್ರವ ವಿಸರ್ಜನೆ ತಂತ್ರಜ್ಞಾನ ಹೊಂದಿರುವ ಅತ್ಯಾಧುನಿಕ 2.5 ಎಂಎಲ್‍ಡಿ ಸಾಮಥ್ರ್ಯದ ಸಾಮಾನ್ಯ ಒಳಚರಂಡಿ ತ್ಯಾಜ್ಯ ಸಂಸ್ಕರಣಾ ಘಟಕ ಮತ್ತು ಅದಕ್ಕೆ ಪೂರಕವಾದ ಪೈಪ್‍ಲೈನ್ ಜಾಲದ ಸ್ಥಾಪನೆ ಕಾರ್ಯ ಆರಂಭಗೊಳ್ಳಲಿದೆ ಎಂದಿರುವ ಸಚಿವರು ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡಿಕೊಳ್ಳಬೇಕು ಎಂದು ಅವರು ಸೂಚನೆ ನಿಡಿದರು.
ಸಭೆಯಲ್ಲಿ ವಾಣಿಜ್ಯ ಹಾಗೂ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಸೆಲ್ವಕುಮಾರ್ ಎಸ್., ಜವಳಿ ಇಲಾಖೆಯ ಕಾರ್ಯದರ್ಶಿ ರೋಹಿಣಿ ಸಿಂಧೂರಿ, ಕೆಐಎಡಿಬಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಗೋವಿಂದರೆಡ್ಡಿ ಹಾಗೂ ಆನ್‍ಲೈನ್ ಮೂಲಕ ಕಲಬುರಗಿ ಜಿಲ್ಲಾಧಿಕಾರಿ ಮೊಹಮ್ಮದ್ ಇಕ್ರಮುಲ್ಲಾ ಶರೀಷ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.