ಡಿಆರ್‌ಡಿಒ ಆವರಣದಿಂದ 21 ಬೀದಿನಾಯಿಗಳ ನಾಪತ್ತೆ ಪ್ರಕರಣ; ತನಿಖೆ ಮುಂದುವರಿಸಲು ಹೈಕೋರ್ಟ್ ಅನುಮತಿ
ಬೆಂಗಳೂರು: ನಗರದ ಕಗ್ಗದಾಸಪುರದಲ್ಲಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಎರಡನೇ ಹಂತದ ಟೌನ್ಶಿಪ್ನಲ್ಲಿದ್ದ 21 ಬೀದಿನಾಯಿಗಳು ನಿಗೂಢವಾಗಿ ನಾಪತ್ತೆಯಾಗಿರುವ ಪ್ರಕರಣ ಸಂಬಂಧ ತನಿಖೆ ಮುಂದುವರೆಸಲು ಅನುಮತಿ ನೀಡಿರುವ ಹೈಕೋರ್ಟ್, ಈ ಸಂಬಂಧ ಆರೋಪ ಎದುರಿಸುತ್ತಿರುವ ಇಬ್ಬರು ಡಿಆರ್‌ಡಿಒ ಅಧಿಕಾರಿಗಳ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ನಿರ್ದೇಶಿಸಿದೆ.
ಮಹದೇವಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದುಕೋರಿ ಡಿಆರ್‌ಡಿಒ ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದ್ದು, ಕಾಣೆಯಾಗಿರುವ 21 ನಾಯಿಗಳು ಎಲ್ಲಿವೆ? ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಪೊಲೀಸರಿಗೆ ಸೂಚಿಸಿದೆ. ಜತೆಗೆ, ಪ್ರಕರಣದಲ್ಲಿ ಆರೋಪಿಗಳಾಗಿರುವ ಡಿಆರ್‌ಡಿಒ ಎಸ್ಟೇಟ್ ಅಧಿಕಾರಿ ರಾಜೇಶ್ ಕುಮಾರ್ ಸಾಹು, ಸ್ವಚ್ಚತಾ ಮೇಲ್ವಿಚಾರಕ ಟಿ.ಜಿ. ಸುಧಾರ್ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಪೊಲೀಸರಿಗೆ ನಿರ್ದೇಶಿಸಿದೆ.
ಅರ್ಜಿದಾರ ಅಧಿಕಾರಿಗಳು ತನಿಖೆಗೆ ಯಾವುದೇ ತಡೆ ಇಲ್ಲದಿದ್ದರೂ, ಸತ್ಯವನ್ನು ಹೊರತರಲು ಪೊಲೀಸರೊಂದಿಗೆ ಸಂಪೂರ್ಣವಾಗಿ ಸಹಕರಿಸಬೇಕು. ಡಿಆರ್‌ಡಿಒ ಅತ್ಯಂತ ಸುರಕ್ಷಿತ ವಲಯವಾಗಿದ್ದು, ಅನುಮತಿ ಇಲ್ಲದೇ ಯಾರೂ ಒಳಗೆ ಹೋಗಲು ಸಾಧ್ಯವಿಲ್ಲ. ಆದ್ದರಿಂದ, ನಾಯಿಗಳು ಹೇಗೆ ನಾಪತ್ತೆಯಾದವು ಎಂಬುದನ್ನು ಪತ್ತೆಹಚ್ಚಲು ಪೊಲೀಸರಿಗೆ 6 ವಾರಗಳ ಕಾಲಾವಕಾಶ ನೀಡಲಾಗಿದ್ದು, ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ನ್ಯಾಯಪೀಠ ನಿರ್ದೇಶಿಸಿದೆ.
ಪ್ರಕರಣವೇನು?
2026ರ ಮಾರ್ಚ್ ತಿಂಗಳಲ್ಲಿ ಡಿಆರ್‌ಡಿಒ ಟೌನ್ಶಿಪ್ ಆವರಣದಲ್ಲಿ ಬೀದಿನಾಯಿಗಳ ಕಾಲು ಮತ್ತು ಬಾಯಿಗಳನ್ನು ಕಟ್ಟಿ ಗೋಣಿಚೀಲದಲ್ಲಿ ಹಾಕಿ ಸಾಗಿಸುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ನಡುವೆ ಮೂರು ನಾಯಿಗಳನ್ನು ಸ್ಥಳೀಯರು ರಕ್ಷಣೆ ಮಾಡಿದ್ದರು. ಆದರೆ, ಆ ಭಾಗದಲ್ಲಿದ್ದ 21 ಬೀದಿ ನಾಯಿಗಳು ರಾತ್ರೋರಾತ್ರಿ ನಾಪತ್ತೆಯಾಗಿದ್ದವು. ಪ್ರಾಣಿ ಪ್ರಿಯರು ಮತ್ತು ಸಾರ್ವಜನಿಕರು ಈ ಕ್ರೌರ್ಯದ ವಿರುದ್ಧ ಫ್ರೀಡಂ ಪಾರ್ಕ್ನಲ್ಲಿ ದೊಡ್ಡ ಮಟ್ಟದ ಪ್ರತಿಭಟನೆಯನ್ನೂ ನಡೆಸಿದ್ದರು.
ಘಟನೆ ಸಂಬಂಧ ಬೆಂಗಳೂರು ಪೂರ್ವ ವಲಯದ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕರು ನೀಡಿದ್ದ ದೂರಿನ ಅನ್ವಯ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಡಿಆರ್‌ಡಿಒ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಇದನ್ನು ಪ್ರಶ್ನಿಸಿ ಅಧಿಕಾರಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.