×
Ad

ದೇಶಾದ್ಯಂತ ಎಕ್ಸ್ ನಲ್ಲಿ #NRIMinistry ಟ್ರೆಂಡ್: ಅನಿವಾಸಿ ಕನ್ನಡಿಗರ ಸಚಿವಾಲಯ, ಸಚಿವರ ಆಗ್ರಹಕ್ಕೆ ಬಲ

Update: 2026-06-26 20:44 IST

ಬೆಂಗಳೂರು, ಜೂ.26: ಕರ್ನಾಟಕದಲ್ಲಿ ಅನಿವಾಸಿ ಕನ್ನಡಿಗರ (NRK) ಹಿತಾಸಕ್ತಿಗಳನ್ನು ರಕ್ಷಿಸಲು ಪ್ರತ್ಯೇಕ ಖಾತೆಯನ್ನು ಸ್ಥಾಪಿಸಬೇಕು ಹಾಗೂ ಅದರ ಸಚಿವ ಸ್ಥಾನವನ್ನು ವಿಧಾನ ಪರಿಷತ್ ಸದಸ್ಯೆ ಡಾ. ಆರತಿ ಕೃಷ್ಣ ಅವರಿಗೆ ವಹಿಸಬೇಕು ಎಂಬ ಆಗ್ರಹಕ್ಕೆ ಬೆಂಬಲವಾಗಿ ಶುಕ್ರವಾರ ನಡೆದ ಎಕ್ಸ್ ಅಭಿಯಾನ ದೇಶಾದ್ಯಂತ ಟ್ರೆಂಡ್ ಆಗಿದೆ. ಎಕ್ಸ್‌ ನಲ್ಲಿ #NRIMinistry ಹ್ಯಾಶ್‌ಟ್ಯಾಗ್ ಮಿಂಚಿದೆ.

ಕರ್ನಾಟಕ ಅನಿವಾಸಿ ಫೆಡರೇಶನ್‌ನ ಕರೆ ಮೇರೆಗೆ ವಿಶ್ವದ ವಿವಿಧ ದೇಶಗಳಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರು ಮತ್ತು ಅವರ ಬೆಂಬಲಿಗರು #NRIMinistry ಹ್ಯಾಶ್‌ಟ್ಯಾಗ್ ಬಳಸಿ ಅಭಿಯಾನದಲ್ಲಿ ಭಾಗವಹಿಸಿದ್ದಾರೆ. ಸಾವಿರಾರು ಮಂದಿ ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದು, ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಅವರ ಕಲ್ಯಾಣಕ್ಕೆ ಸಂಬಂಧಿಸಿದ ವಿವಿಧ ವಿಚಾರಗಳನ್ನು ಮುಂದಿಟ್ಟಿದ್ದಾರೆ.

ಈ ನಡುವೆ, ಅನಿವಾಸಿ ಕನ್ನಡಿಗರಿಗಾಗಿ ಪ್ರತ್ಯೇಕ ಸೆಕ್ರೆಟರಿಯೇಟ್ ಸ್ಥಾಪಿಸುವ ಯೋಜನೆಯನ್ನು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಇತ್ತೀಚಿಗೆ ಘೋಷಿಸಿದ್ದರು. ಆದರೆ, ಪ್ರತ್ಯೇಕ ಸಚಿವಾಲಯ ಹಾಗು ಸಚಿವರ ನೇಮಕಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ನಿರ್ಧಾರ ಪ್ರಕಟಿಸಿಲ್ಲ. ಆ ಬಗ್ಗೆ ಇತ್ತೀಚಿಗೆ ಮುಖ್ಯಮಂತ್ರಿಗಳನ್ನು ಅನಿವಾಸಿ ಕನ್ನಡಿಗರ ಪರವಾಗಿ ಖ್ಯಾತ ಉದ್ಯಮಿ, ಕೊಡುಗೈ ದಾನಿ ಡಾ. ರೊನಾಲ್ಡ್ ಕೊಲಾಸೊ ಹಾಗು ಝಕರಿಯ ಜೋಕಟ್ಟೆ ಅವರ ನೇತೃತ್ವದಲ್ಲಿ ನಿಯೋಗಗಳು ಭೇಟಿ ಮಾಡಿ ಆಗ್ರಹಿಸಿದ್ದವು. ಇದೀಗ ಅದೇ ಆಗ್ರಹ ಇಟ್ಟುಕೊಂಡು ಆನ್ ಲೈನ್ ಅಭಿಯಾನ ನಡೆಸಲಾಗಿದೆ.

ಅನಿವಾಸಿ ಕನ್ನಡಿಗರ ಕಲ್ಯಾಣ, ಹೂಡಿಕೆ ಉತ್ತೇಜನ, ಕಾನೂನು ನೆರವು, ಉದ್ಯೋಗಾವಕಾಶಗಳ ಮಾರ್ಗದರ್ಶನ, ವಿದ್ಯಾರ್ಥಿ ಕಲ್ಯಾಣ ಹಾಗೂ ತುರ್ತು ಸೇವೆಗಳಂತಹ ಕ್ಷೇತ್ರಗಳಲ್ಲಿ ಸಮನ್ವಯ ಸಾಧಿಸಲು ಕರ್ನಾಟಕದಲ್ಲಿ ಪ್ರತ್ಯೇಕ ಸಚಿವಾಲಯದ ಅಗತ್ಯವಿದೆ ಎಂದು ಅಭಿಯಾನ ಬೆಂಬಲಿಗರು ಪ್ರತಿಪಾದಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ಹರಡಿರುವ ಕನ್ನಡಿಗರ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಪ್ರತ್ಯೇಕ ಆಡಳಿತ ವ್ಯವಸ್ಥೆ ಅಗತ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ಅಭಿಯಾನದ ಭಾಗವಾಗಿ ಕರ್ನಾಟಕದ ಮೊದಲ ಎನ್‌ಆರ್‌ಐ ಸಚಿವೆಯಾಗಿ ಡಾ. ಆರತಿ ಕೃಷ್ಣ ಅವರನ್ನು ನೇಮಕ ಮಾಡಬೇಕು ಎಂಬ ಆಗ್ರಹವನ್ನೂ ಪುನರುಚ್ಚರಿಸಲಾಗಿದೆ. ವಿದೇಶದಲ್ಲಿರುವ ಕನ್ನಡ ಸಂಘಟನೆಗಳೊಂದಿಗೆ ಅವರ ದೀರ್ಘಕಾಲದ ಸಂಪರ್ಕ ಹಾಗೂ ಅನಿವಾಸಿ ಕನ್ನಡಿಗರ ಸಮಸ್ಯೆಗಳ ಪರಿಹಾರಕ್ಕಾಗಿ ಅವರು ನಡೆಸಿರುವ ಕಾರ್ಯವನ್ನು ಬೆಂಬಲಿಗರು ಈ ಅಭಿಯಾನದಲ್ಲಿ ಉಲ್ಲೇಖಿಸಿದ್ದಾರೆ.

ಇದರೊಂದಿಗೆ ಅನಿವಾಸಿ ಕನ್ನಡಿಗರಿಗಾಗಿ ಪ್ರತ್ಯೇಕ ಸಚಿವಾಲಯ ಮತ್ತು ನಿರ್ದೇಶನಾಲಯವನ್ನು ಸ್ಥಾಪಿಸುವಂತೆ ಸರಕಾರವನ್ನು ಒತ್ತಾಯಿಸುವ ಅಭಿಯಾನವು ಮತ್ತಷ್ಟು ವೇಗ ಪಡೆದುಕೊಂಡಿದೆ. ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್, ತಮಿಳುನಾಡು, ಪಂಜಾಬ್ ಹಾಗೂ ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳು ಈಗಾಗಲೇ ತಮ್ಮ ಸಾಗರೋತ್ತರ ನಾಗರಿಕರ ಅಗತ್ಯಗಳನ್ನು ಪೂರೈಸಲು ಪ್ರತ್ಯೇಕ ಸಾಂಸ್ಥಿಕ ವ್ಯವಸ್ಥೆಗಳನ್ನು ಹೊಂದಿವೆ ಎಂದು ಅಭಿಯಾನದಲ್ಲಿ ಗಮನಸೆಳೆಯಲಾಗಿದೆ.

100ಕ್ಕೂ ಹೆಚ್ಚು ದೇಶಗಳಲ್ಲಿ ಮೂವತ್ತು ಲಕ್ಷಕ್ಕೂ ಅಧಿಕ ಕನ್ನಡಿಗರು ನೆಲೆಸಿರುವ ಹಿನ್ನೆಲೆಯಲ್ಲಿ, ಜಾಗತಿಕ ಕನ್ನಡ ಸಮುದಾಯದೊಂದಿಗೆ ಕರ್ನಾಟಕದ ಬಾಂಧವ್ಯವನ್ನು ಬಲಪಡಿಸಲು ಪ್ರತ್ಯೇಕ ಇಲಾಖೆಯ ಸ್ಥಾಪನೆ ಅಗತ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಎಕ್ಸ್ ಅಭಿಯಾನ ಯಶಸ್ವಿಯಾಗಿರುವುದಕ್ಕೆ ಡಾ. ರೊನಾಲ್ಡ್ ಕೊಲಾಸೊ, ಝಕರಿಯ ಜೋಕಟ್ಟೆ, ಹಿದಾಯತ್ ಅಡ್ಡೂರು, ಮನ್ಸೂರ್ ಬಹರೈನ್, ಭಾರ್ಗವ ಶರ್ಮಾ ಮುಂತಾದವರು ಅಭಿನಂದನೆ ಸಲ್ಲಿಸಿದ್ದಾರೆ. ಜಗತ್ತಿನ ಬಹುತೇಕ ದೇಶಗಳ ಕನ್ನಡಿಗರು, ಕನ್ನಡ ಸಂಘಟನೆಗಳು, ಕನ್ನಡಿಗರು ಇರುವ ಎಲ್ಲ ರೀತಿಯ ಸಂಘ ಸಂಸ್ಥೆಗಳು ಒಟ್ಟಾಗಿ ಈ ಅಭಿಯಾನವನ್ನು ಯಶಸ್ವಿಗೊಳಿಸಿದ್ದಾರೆ. ಕರ್ನಾಟಕ ಸರಕಾರ ತಡಮಾಡದೇ ಡಾ. ಆರತಿ ಕೃಷ್ಣಾ ಅವರನ್ನು ಎನ್‌ಆರ್‌ಐ ಖಾತೆಗೆ ಸಚಿವರಾಗಿ ನೇಮಿಸಬೇಕು ಎಂದು ಡಾ. ರೊನಾಲ್ಡ್ ಕೊಲಾಸೊ ಹೇಳಿದ್ದಾರೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News