ಬೆಂಗಳೂರು: ಕರ್ನಾಟಕ ಲೋಕಾ ಸೇವಾ ಆಯೋಗದಲ್ಲಿ (ಕೆಪಿಎಸ್‌ಸಿ) ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿರುವ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರನ್ನು ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.

ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಶಿವಶಂಕರಪ್ಪ ಸಾಹುಕಾರ್ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಎಸ್‌. ವಿಶ್ವಜಿತ್‌ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಈ ವೇಳೆ ನ್ಯಾಯಪೀಠ, ಅತ್ಯುನ್ನತ ಸಾಂವಿಧಾನಿಕ ಹುದ್ದೆಯಲ್ಲಿದ್ದ ಅರ್ಜಿದಾರರು ಅದು ಹೇಗೆ ನೇಮಕಾತಿಗೆ ಸಂಬಂಧಿಸಿದ ವಂಚನೆಯಲ್ಲಿ ಪಾಲ್ಗೊಳ್ಳಲು ಸಾಧ್ಯ? ಅತ್ಯುನ್ನತ ಹುದ್ದೆಯಲ್ಲಿದ್ದ ವ್ಯಕ್ತಿಯ ನಡತೆ ಹೀಗೆ ಏಕಿದೆ? ಇಂಥ ಅಪರಾಧ ಕೃತ್ಯದಲ್ಲಿ ಅವರು ಭಾಗಿಯಾಗಿದ್ದಾರೆ. ಭವಿಷ್ಯದ ಆಡಳಿತಗಾರರನ್ನು ನೇಮಕ ಮಾಡುವ ಹುದ್ದೆಯ ಉಸ್ತುವಾರಿಯಲ್ಲಿದ್ದ ನೀವು ಇಂಥ ಕೃತ್ಯದಲ್ಲಿ ಭಾಗಿಯಾಗಿದ್ದೀರಿ. ಭವಿಷ್ಯದಲ್ಲಿ ಯಾವ ಸಮಾಜವನ್ನು ನಾವು ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿತು.

ಇಂಥ ವಂಚನೆಯಲ್ಲಿ ತೊಡಗುವ ಮೂಲಕ ಅನರ್ಹರನ್ನು ವ್ಯವಸ್ಥೆಯ ಒಳಗೆ ತಂದರೆ ಅವರು ನಾಳಿನ ಆಡಳಿತಗಾರರಾಗುತ್ತಾರೆ ಎಂಬುದನ್ನು ನೆನಪಿಡಿ ಎಂದು ತೀಕ್ಷ್ಣವಾಗಿ ನುಡಿದ ನ್ಯಾಯಪೀಠ, ಈ ದುಷ್ಕೃತ್ಯದಲ್ಲಿ ನಿಮ್ಮ ಪಾತ್ರವೂ ಪತ್ತೆಯಾಗಿದೆ. ಸರ್ಕಾರ ಒಂದಷ್ಟು ದಾಖಲೆ ನೀಡಿದೆ. ನೀವು ಸಹ (ಹಣ) ಪಡೆದಿದ್ದೀರಿ. ನಿಮ್ಮ ಪುತ್ರಿಯ ನೇಮಕಾತಿಗೆ ಸಂಬಂಧಿಸಿದ ವಾಸ್ತವಿಕ ವಿಚಾರವನ್ನು ನೀವು ಮರೆಮಾಚಿದ್ದೀರಿ. ಅದು ಬೇರೆಯದೇ ಅಪರಾಧ ಪ್ರಕರಣವಾಗಿರಬಹುದು. ಇಂಥ ಕೃತ್ಯದಲ್ಲಿ ತೊಡಗಿರುವ ನೀವು ಯಾವ ಮಟ್ಟಕ್ಕಾದರೂ ಇಳಿಯಬಲ್ಲಿರಿ ಎಂದು ಕಟು ಶಬ್ದಗಳಿಂದ ತರಾಟೆಗೆ ತೆಗೆದುಕೊಂಡಿತು.

ಮುಚ್ಚಿದ ಲಕೋಟೆಯಲ್ಲಿನ ಅಂಶಗಳು ಗೌಪ್ಯ ವಿಚಾರಗಳಾಗಿದ್ದು, ನಿಮಗೆ ಅದನ್ನು ಬಹಿರಂಗಪಡಿಸಲಾಗದು. ತನಿಖೆ ನಡೆಯುತ್ತಿದೆ. ಮಧ್ಯಂತರ ಜಾಮೀನು ಅರ್ಜಿಯ ಮೇಲೆ ನೀವು ಬೇಕಿದ್ದರೆ ವಾದಿಸಬಹುದು ಎಂದು ಸಾಹುಕಾರ್‌ ಪರ ವಕೀಲರನ್ನು ಕುರಿತು ಪೀಠ ಹೇಳಿತು.

ಶಿವಶಂಕರಪ್ಪ ಸಾಹುಕಾರ್‌ ಪರ ಹಿರಿಯ ವಕೀಲ ಎಂ. ಅರುಣ ಶ್ಯಾಮ್‌ ವಾದ ಮಂಡಿಸಿ, ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕರು ಮತ್ತು ಪರೀಕ್ಷಾ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆರೋಪಗಳು ಕೇಳಿ ಬಂದಿವೆ. ಪ್ರಶ್ನೆಪತ್ರಿಕೆ, ಉತ್ತರ ಪತ್ರಿಕೆಗಳ ಪರಿಶೀಲನೆ, ಅಂಕ ನಿಗದಿ ವಿಚಾರಗಳು ಪರೀಕ್ಷಾ ನಿಯಂತ್ರಕರ ವ್ಯಾಪ್ತಿಗೆ ಬರುತ್ತವೆ. ಸಾಹುಕಾರ್‌ ಅವರನ್ನು ಈಗಾಗಲೇ ಅಮಾನತುಗೊಳಿಸಲಾಗಿದ್ದು, ಅವರಿಗೆ ಕೆಪಿಎಸ್‌ಸಿ ಕಚೇರಿ ಪ್ರವೇಶ ನಿರಾಕರಿಸಲಾಗಿದೆ ಎಂದರು.

ಸಾಹುಕಾರ್‌ ಪುತ್ರಿಯ ನೇಮಕಾತಿಗೆ ಸಂಬಂಧಿಸಿದಂತೆ ಕೆಪಿಎಸ್‌ಸಿ ಕಾಯ್ದೆ, ನಿಯಮ ಅಥವಾ ಕೈಪಿಡಿ ಅಡಿ ಕೆಪಿಎಸ್‌ಸಿ ಆಡಳಿತಗಾರರ ಪುತ್ರಿ ಪರೀಕ್ಷೆಗೆ ಹಾಜರಾಗಬಾರದು ಎಂದೇನಿಲ್ಲ. ಇದನ್ನು ಬಹಿರಂಗಪಡಿಸುವ ಅಗತ್ಯವು ಸಂದರ್ಶನದಲ್ಲಿ ಬರುತ್ತದೆ. ಜಾರಿ ನಿರ್ದೇಶನಾಲಯದ ಶೋಧದ ವೇಳೆಯೂ ಸಾಹುಕಾರ್‌ ಮನೆಯಲ್ಲಿ ಯಾವುದೇ ಆಕ್ಷೇಪಾರ್ಹವಾದ ದಾಖಲೆ ಪತ್ತೆಯಾಗಿಲ್ಲ ಎಂದು ತಿಳಿಸಿದರು.

ಸಂಜೆ ನಾಲ್ಕು ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಸಿಐಡಿ ಮಧ್ಯಾಹ್ನ ಒಂದು ಗಂಟೆಗೆ ನೋಟಿಸ್‌ ಜಾರಿ ಮಾಡಿದೆ. ನ್ಯಾಯಾಲಯ ವಿಧಿಸುವ ಯಾವುದೇ ಷರತ್ತಿಗೆ ಬದ್ಧವಾಗಿದ್ದು, ತನಿಖೆಗೆ ಸಹಕರಿಸಲಿದ್ದಾರೆ. ಆದ್ದರಿಂದ, ರಕ್ಷಣೆ ಒದಗಿಸಬೇಕು ಎಂದು ಕೋರಿದರು.

ರಾಜ್ಯ ಸರ್ಕಾರಿ ಅಭಿಯೋಜಕ ಬಿ.ಎನ್‌. ಜಗದೀಶ್‌ ಅವರು, ಮಧ್ಯಂತರ ಅರ್ಜಿಯ ಸಂಬಂಧ ನ್ಯಾಯಪೀಠ ತನ್ನ ವಿಶೇಷಾಧಿಕಾರ ಬಳಸದಂತೆ ಮನವಿ ಮಾಡಿದರು.

ಅಂತಿಮವಾಗಿ, ಸಿಐಡಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಿದ ನ್ಯಾಯಪೀಠ ವಿಚಾರಣೆಯನ್ನು ಸೋಮವಾರಕ್ಕೆ (ಸೆಪ್ಟೆಂಬರ್ 7) ಮುಂದೂಡಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor