ಬೆಂಗಳೂರು : ಏಳನೇ ವೇತನ ಆಯೋಗದ ಶಿಫಾರಸಿನಂತೆ, 70 ವರ್ಷಕ್ಕಿಂತ ಕಡಿಮೆ ವಯಸ್ಸಿನ ರಾಜ್ಯ ಸರಕಾರದ ನಿಯಮಿತ ಪಿಂಚಣಿದಾರರು ಹಾಗೂ ಅವರ ಕುಟುಂಬ ಪಿಂಚಣಿದಾರರು ಮತ್ತು ಪಿಂಚಣಿದಾರರ ಅವಲಂಬಿತ ದಿವ್ಯಾಂಗ ಮಕ್ಕಳಿಗಾಗಿ ‘ಸಂಧ್ಯಾ ಕಿರಣ’ ಎಂಬ ಮಹತ್ವಾಕಾಂಕ್ಷೆಯ ವಂತಿಕೆ ಆಧಾರಿತ ನಗದು ರಹಿತ ಆರೋಗ್ಯ ಯೋಜನೆಯನ್ನು ರಾಜ್ಯ ಸರಕಾರ ಜಾರಿಗೆ ತಂದು ಆದೇಶ ಹೊರಡಿಸಿದೆ.

1956ರ ನವೆಂಬರ್ 1ರ ನಂತರ ಸರಕಾರಿ ಸೇವೆಯಿಂದ ನಿವೃತ್ತಿ ಹೊಂದಿ ರಾಜ್ಯ ಸರಕಾರದಿಂದ ಪಿಂಚಣಿ ಪಡೆಯುತ್ತಿರುವವರು ಈ ಯೋಜನೆಗೆ ಅರ್ಹರಾಗಿರುತ್ತಾರೆ. ಯೋಜನೆಯಡಿ ಅರ್ಹ ಫಲಾನುಭವಿಗಳ ಕುಟುಂಬಕ್ಕೆ ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆಯ ನಿಯಮಾವಳಿಗಳ ಪ್ರಕಾರ ಪ್ರತಿ ವರ್ಷ ಗರಿಷ್ಠ 5 ಲಕ್ಷ ರೂ.ವರೆಗೆ ವಂತಿಕೆ ಆಧಾರದ ಮೇಲೆ ನಗದು ರಹಿತ ಆರೋಗ್ಯ ಸೇವೆ ಲಭ್ಯವಿರಲಿದೆ ಎಂದು ಹೇಳಿದೆ.

ಈ ಯೋಜನೆಯ ಒಟ್ಟು ವೆಚ್ಚದಲ್ಲಿ ಶೇ.70 ರಷ್ಟನ್ನು ಪಿಂಚಣಿದಾರರ ವಂತಿಕೆಯಿಂದ ಮತ್ತು ಉಳಿದ ಶೇ.30 ರಷ್ಟನ್ನು ಸರಕಾರ ಭರಿಸಲಿದೆ. ನಿಯಮಿತ ಪಿಂಚಣಿದಾರರು ತಮ್ಮ ಮೂಲ ಪಿಂಚಣಿಯ ಶೇ.1.25 ರಷ್ಟು ವಂತಿಕೆ ನೀಡಬೇಕು. ಕುಟುಂಬ ಪಿಂಚಣಿದಾರರು ತಮ್ಮ ಮೂಲ ಪಿಂಚಣಿಯ ಶೇ.0.75 ರಷ್ಟು ವಂತಿಕೆ ನೀಡಬೇಕು. ಯೋಜನೆಗೆ ಸೇರಲು ಇಚ್ಛಿಸುವ ಹಾಲಿ ಪಿಂಚಣಿದಾರರ ನೋಂದಣಿಗಾಗಿ ಮೂರು ತಿಂಗಳ ನಿಶ್ಚಿತ ಅವಧಿಯನ್ನು ನೀಡಲಾಗಿದೆ. ಮುಂದೆ ನಿವೃತ್ತಿಯಾಗುವವರು, ನಿವೃತ್ತಿಯ ದಿನಾಂಕದಿಂದ ಎರಡು ತಿಂಗಳ ಒಳಗಾಗಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು. ತಪ್ಪಿದಲ್ಲಿ ಅವರು ಈ ಯೋಜನೆಗೆ ಅನರ್ಹರಾಗುತ್ತಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor