ಧರ್ಮಸ್ಥಳ ಪ್ರಕರಣ | ತಾಂತ್ರಿಕ ಕಾರಣಗಳಿಂದ ಎಸ್‍ಐಟಿ ತನಿಖಾ ವರದಿ ವಿಳಂಬ : ಗೃಹ ಸಚಿವ ಜಿ.ಪರಮೇಶ್ವರ್
ಜಿ.ಪರಮೇಶ್ವರ್
ಬೆಂಗಳೂರು : ತಾಂತ್ರಿಕ ಕಾರಣಗಳಿಂದ ಧರ್ಮಸ್ಥಳ ಪ್ರಕರಣದ ಎಸ್‍ಐಟಿ ತನಿಖಾ ವರದಿ ವಿಳಂಬವಾಗಿದೆ. ಇದೇ ಕಾರಣದಿಂದಾಗಿ ವರದಿ ಪಡೆಯುವುದನ್ನು ಕೆಲ ದಿನಗಳ ಕಾಲ ಮುಂದೂಡಿದ್ದೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಮಹಿಳಾ ಆಯೋಗವು ತನಿಖೆ ಮಾಡಿ ಎಂದು ಕೋರಿದೆ. ಈ ಸಂಬಂಧ ಸಮಗ್ರ ತನಿಖೆಯಾದರೆ ಎಲ್ಲ ಮಾಹಿತಿ ಗೊತ್ತಾಗುತ್ತದೆ. ಅದಕ್ಕಾಗಿ ಸಮಯ ಹಿಡಿಯಲಿದ್ದು, ವರದಿಯನ್ನು ಎಲ್ಲ ಆಯಾಮಗಳನ್ನು ನೋಡಿಯೇ ಕೊಡಬೇಕು. ಜತೆಗೆ, ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದೆ ಎಂದು ತಿಳಿಸಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೊಸದಿಲ್ಲಿಗೆ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನೀರಾವರಿ ಇಲಾಖೆಗೆ ಸಂಬಂಧಿಸಿದಂತೆ ಹೋಗಿದ್ದಾರೆ. ಕಾನೂನು ತಜ್ಞರ ಜೊತೆ ಚರ್ಚೆ ಮಾಡಬಹುದು ಎಂದು ಅವರು ಮಾಹಿತಿ ನೀಡಿದರು.
ಕಬ್ಬು ಬೆಳೆಗಾರರ ಹೋರಾಟ ವಿಚಾರವಾಗಿ ಮಾತನಾಡಿ, ಪ್ರತಿ ವರ್ಷ ಕಬ್ಬು ಬೆಲೆ ನಿಗದಿ ವಿಚಾರದ ಚರ್ಚೆ ನಡೆಯುತ್ತದೆ. ಮಹಾರಾಷ್ಟ್ರದಲ್ಲಿನ ಬೆಲೆ ನೀಡಬೇಕು ಎಂದಿದ್ದಾರೆ. ಈ ಬಗ್ಗೆ ಸರಕಾರ ಚರ್ಚೆ ನಡೆಸಲಿದ್ದು, ಸೂಕ್ತ ಪರಿಹಾರ ನೀಡಲಿದೆ ಎಂದು ಅವರು ಹೇಳಿದರು.