ಹುಬ್ಬಳ್ಳಿ | ಕಾಲೇಜು ವಿದ್ಯಾರ್ಥಿನಿಯರ ಪೋಟೋ ಅಶ್ಲೀಲವಾಗಿ ಎಡಿಟ್ ಮಾಡಿ ಹರಿಬಿಟ್ಟ ಪ್ರಕರಣ: ಪ್ರಮುಖ ಆರೋಪಿ ಕಿರಣ್ ಸೇರಿ ಮತ್ತೆ ಇಬ್ಬರನ್ನು ಬಂಧಿಸಿದ ಪೊಲೀಸರು
ರೇಣುಕಾ ಕೆ. ಸುಕುಮಾರ್- ಪೊಲೀಸ್ ಕಮಿಷನರ್
ಹುಬ್ಬಳ್ಳಿ, ಆ., 12: ನಗರದ ಖಾಸಗಿ ಕಾಲೇಜು ಒಂದರ ವಿದ್ಯಾರ್ಥಿನಿಯರ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ, ಅವುಗಳನ್ನು ಇನ್ ಸ್ಟಾಗ್ರಾಮ್ ಮೂಲಕ ಹರಿಬಿಟ್ಟ ಪ್ರಕರಣದಲ್ಲಿ ಅದೇ ಕಾಲೇಜಿನ ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಮುಖ ಆರೋಪಿ ಕಿರಣ್ ಚೌಹಾನ್ ಗೌಡರ ಮತ್ತು ಆತನ ಸ್ನೇಹಿತ ನವೀನ್ ಅಕ್ಕಿ ಬಂಧಿತರು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳಿಬ್ಬರೂ ತಾಲೂಕಿನ ಇಂಗಳಹಳ್ಳಿ ಗ್ರಾಮದವರಾಗಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಈ ಹಿಂದೆ ಸಂಶಯದ ಹಿನ್ನೆಲೆಯಲ್ಲಿ ವಿಜಯನಗರದ ರಜನಿಕಾಂತ ತಳವಾರ ಎಂಬಾತನನ್ನು ಬಂಧಿಸಿ ನ್ಯಾಯಾಲಯ ವಶಕ್ಕೆ ನೀಡಿದ್ದರು. ನಂತರ 7 ದಿನ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದರು.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾದ ರೇಣುಕಾ ಕೆ. ಸುಕುಮಾರ್, ಪ್ರಕರಣಕ್ಕೆ ಸಂಬಂಧಿಸಿ ರಜನಿಕಾಂತ ತಳವಾರ ಎಂಬಾತನನ್ನು ಬಂಧಿಸಲಾಗಿತ್ತು. ಇದೀಗ ಪ್ರಮುಖ ಆರೋಪಿ ಕಿರಣ್ ಚೌಹಾನ್ ಗೌಡರ ಮತ್ತು ನವೀನ್ ಅಕ್ಕಿ ಬಂಧಿಸಲಾಗಿದೆ. ಪ್ರಮುಖ ಆರೋಪಿಯ ಬಂಧನದಿಂದ ನಮಗೆ ಹೆಚ್ಚಿನ ಮಾಹಿತಿ ಸಿಕ್ಕಿದ್ದು, ಕಿರಣ್ ಎಂಬಾತನೇ ಕೃತ್ಯ ನಡೆಸಿರುವುದು ಗೊತ್ತಾಗಿದೆʻ ಎಂದು ಹೇಳಿದರು.
ʻʻಆರೋಪಿ ಕಿರಣ್ ಹ್ಯಾಕರ್ ಅಲ್ಲʻʻ
ʻಪ್ರಮುಖ ಆರೋಪಿ ಕಿರಣ್ ಚೌಹಾನ್ ಗೌಡರ ಹ್ಯಾಕರ್ ಅಲ್ಲ.ಆತ ಸೈಬರ್ ಬಗ್ಗೆ, ಸಾಮಾಜಿಕ ಜಾಲತಾಣಗಳ ಬಗ್ಗೆ ತಿಳಿದುಕೊಂಡಿದ್ದ, ಆತ ಡಾರ್ಕ್ ವೆಬ್ ಬಳಸಿ ಕೃತ್ಯ ಎಸಗಿದ್ದಾನೆ. ಮತ್ತಿಬ್ಬರು ಆತನಿಗೆ ಸಹಾಯ ಮಾಡುತ್ತಿದ್ದರುʻ ಎಂದು ಅವರು ಮಾಹಿತಿ ನೀಡಿದರು.
ಆರೋಪಿಗಳು ತಾಕತ್ ಇದ್ದರೆ ಬಂಧಿಸುವಂತೆ ಇನ್ ಸ್ಟಾಗ್ರಾಮ್ ನಲ್ಲಿ ಪೊಲೀಸರಿಗೆ ಸವಾಲು ಹಾಕಿದ್ದರು. ಇದೀಗ ಹುಬ್ಬಳ್ಳಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.