×
Ad

ದಾಖಲೆ ಕೊಡಲು ನಾನು ಸಿದ್ಧನಿದ್ದೇನೆ; ತನಿಖೆ ನಡೆಸುವ ಧೈರ್ಯ ಸರಕಾರಕ್ಕೆ ಇದೆಯಾ?: ಹೆಚ್.ಡಿ.ಕುಮಾರಸ್ವಾಮಿ

Update: 2023-07-04 16:32 IST

ಬೆಂಗಳೂರು: ಈ ಸರಕಾರ ಬಂದ ಮೇಲೆ ನಡೆಯುತ್ತಿರುವ ವರ್ಗಾವಣೆ ದಂಧೆ ಹಾಗೂ ಕಾಸಿಗಾಗಿ ಪೋಸ್ಟಿಂಗ್ ಬಗ್ಗೆ ನಾನು ದಾಖಲೆ ಕೊಡಲು ಸಿದ್ಧನಿದ್ದೇನೆ. ತನಿಖೆ ನಡೆಸುವ ದಮ್ಮು ತಾಕತ್ತು ಸರಕಾರಕ್ಕೆ ಇದೆಯಾ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸವಾಲು ಹಾಕಿದ್ದಾರೆ.

ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಯಾರೋ ಒಬ್ಬರು ತಾಕತ್ತು ಇದ್ದರೆ ಕುಮಾರಸ್ವಾಮಿ ದಾಖಲೆ ಕೊಡಲಿ ಎಂದು ಹೇಳಿದ್ದಾರೆ. ಅದಕ್ಕೆ ಇದೇ ನನ್ನ ಉತ್ತರ. ನನ್ನ ಹತ್ತಿರ ದಾಖಲೆಗಳೂ ಇವೆ.ದಾಖಲೆ ಕೊಡುವ ದಮ್ಮು, ತಾಕತ್ತು ನನಗೆ ಇದೆ. ತನಿಖೆ ಮಾಡುವ ದಮ್ಮು, ತಾಕತ್ತು ಇವರಿಗೆ ಇದೆಯಾ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ನವರು ಸರಕಾರ ಇನ್ನೂ ಹನಿಮೂನ್ ಪೀರಿಯಡ್ ನಲ್ಲಿ ಇದೆ ಎಂದು ಹೇಳುತ್ತಿದ್ದಾರೆ. ಸರಕಾರಕ್ಕೆ ಐದು ಆರು ತಿಂಗಳಾದರೂ ಸಮಯ ಕೊಡಬೇಡವೇ ಎಂದು ಕೆಲವರು ಕೇಳುತ್ತಿದ್ದಾರೆ. ಹನಿಮೂನ್ ಪೀರಿಯಡ್ ನಲ್ಲಿದ್ದರೆ ಹೀಗೆಲ್ಲಾ ಮಾಡುತ್ತಾರೆಯೇ? ಹನಿಮೂನ್ ಪಿರಿಯಡ್ ನಲ್ಲೇ ಹೀಗಾದರೆ ಮುಂದಿರುವ ಪೀರಿಯಡ್ ಗಳ ಕಥೆ ಏನು? ಎಂದರು.

ನಾನು ನನ್ನ ಬಳಿ ಇರುವ ದಾಖಲೆಯನ್ನು ಸದನದಲ್ಲಿಯೇ ಇಡುತ್ತೇನೆ. ನಾನು ದಾಖಲೆ ಕೊಟ್ಟರೆ ಈ ಸರ್ಕಾರ ಎಲ್ಲಿರುತ್ತೊ ಗೊತ್ತಿಲ್ಲ. ಸುಮ್ಮನೆ ಸ್ವಲ್ಪ ದಿನ ಈ ಸರಕಾರ ನೆಮ್ಮದಿಯಾಗಿರಲಿ ಎಂದು ಬಿಟ್ಟಿದ್ದೀನಿ. ಸರಕಾರ ತಿದ್ದಿಕೊಂಡರೆ ಒಳ್ಳೆಯದು ಎಂದು ಬಿಟ್ಟಿದೀನಿ ಅಷ್ಟೇ ಎಂದರು.

ಚುನಾವಣೆ ಸಮಯದಲ್ಲಿ ಇವರು ಭ್ರಷ್ಟಾಚಾರದ ಬಗ್ಗೆ ಪುಟಗಟ್ಟಲೆ ಜಾಹಿರಾತು ಕೊಟ್ಟರು. ಆದರೆ, ಒಂದು ದಾಖಲೆಯನ್ನಾದರೂ ಬಿಡುಗಡೆ ಮಾಡಿದ್ದಾರಾ? ಸುಳ್ಳು ದಾಖಲೆ ಹೇಳಿ ಅಧಿಕಾರಕ್ಕೆ ಬಂದಿದ್ದೀರಾ? ಎಂದು ಪ್ರಶ್ನಿಸಿದರು.

ನನ್ನ ಅವಧಿಯಲ್ಲಿ ನಡೆದ ವರ್ಗಾವಣೆಗಳ ಬಗ್ಗೆಯೂ ತನಿಖೆ ನಡೆಸುವುದಾಗಿ ಹೇಳಿದ್ದಾರೆ. ನನ್ನ ಕಾಲದಲ್ಲಿ ನಡೆದ ವರ್ಗಾವಣೆಯನ್ನು ತನಿಖೆ ಮಾಡಲಿ. ಐದು ವರ್ಷ ಕಾಂಗ್ರೆಸ್ ಪಕ್ಷದ ಪೂರ್ಣ ಸರಕಾರ ಇತ್ತಲ್ಲ, ಆ ಸರಕಾರದ ಅವಧಿಯಲ್ಲಿ ನಡೆದ ವರ್ಗಾವಣೆಗಳ ಕುರಿತು ತನಿಖೆ ನಡೆಸಲಿ ಎಂದರು.

ಕಾಂಗ್ರೆಸ್ ನವರು ಹಗಲು ದರೋಡೆ ಗೆ ಇಳಿದಿದ್ದಾರೆ. ವರ್ಗವಣೆ ದಂಧೆಗೆ ಹಣ ನಿಗದಿ ಮಾಡಿದ್ದಾರೆ ಅಂತ ಗೊತ್ತು. ಪ್ರತಿ ಹುದ್ದೆಗೂ ಒಂದೊಂದು ರೇಟ್ ಫಿಕ್ಸ್ ಮಾಡಿದ್ದಾರೆ. ಸಮಯ ಬಂದಾಗ ದಾಖಲೆ ಕೊಡುತ್ತೇನೆ. ನಾನು ಕೊಡುವ ದಾಖಲೆ ನೋಡಿದ ಮೇಲೆ ಯಾವ ರೀತಿ ಕ್ರಮ ಕೈಗೊಳ್ಳುತ್ತೀರಿ ಅಂತ ಈ ಬಗ್ಗೆ ಪ್ರಶ್ನೆ ಎತ್ತಿದವರು ಉತ್ತರ ಕೊಡಲಿ ಎಂದರು.

ಕೆಲವರು ಸತೀಶ್ ಜಾರಕಿಹೊಳಿ ಮುಂದಿನ ಮುಖ್ಯಮಂತ್ರಿ ಅಂತ ಹೇಳ್ತಾರೆ. ಈಗಾಗಲೇ ಡಿಕೆ ಶಿವಕುಮಾರ್ ಅವರು ಟವೆಲ್ ಹಾಕಿದ್ದಾರೆ ಎಂದು ಟೀಕಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News