"IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆಯಾಗಿಲ್ಲ" : ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದೇನು?
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್
ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ಸಿ)ದ ಮಾಜಿ ಪರೀಕ್ಷಾ ನಿಯಂತ್ರಕರಾಗಿ ಕಾರ್ಯನಿರ್ವಹಿಸಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್, ನಾಪತ್ತೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಅವರು ರಜೆಯ ಮೇಲೆ ತಮ್ಮ ಹುಟ್ಟೂರು ಉತ್ತರಪ್ರದೇಶಕ್ಕೆ ತೆರಳಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ.
ಪಶುವೈದ್ಯಾಧಿಕಾರಿ ಹುದ್ದೆಗಳ ಪರೀಕ್ಷೆ ಅಕ್ರಮ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಕೆಪಿಎಸ್ಸಿ ಕಚೇರಿ, ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ನಿವಾಸ ಸೇರಿದಂತೆ ಹಲವು ಕಡೆಗಳಲ್ಲಿ ಇತ್ತೀಚೆಗೆ ಜಾರಿ ನಿರ್ದೇಶನಾಲಯ(ಈ.ಡಿ.)ದ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ಸಂದರ್ಭದಲ್ಲೆ ಪರೀಕ್ಷೆ ನಿಯಂತ್ರಕರಾಗಿ ಕೆಲಸ ಮಾಡಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ದಿಢೀರ್ ರಜೆ ಮೇಲೆ ತೆರಳಿದ್ದು ಆತಂಕಕ್ಕೆ ಕಾರಣವಾಗಿತ್ತು. ಅಲ್ಲದೆ, ನಿಗೂಢವಾಗಿ ನಾಪತ್ತೆಯಾಗಿದ್ದಾರೆಂಬ ಸುದ್ದಿಯು ಹಬ್ಬಿತ್ತು.
ಶನಿವಾರ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ಪ್ರಕರಣಕ್ಕೆ ಸಂಬಂಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದು, ‘ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಅವರೊಂದಿಗೆ ದೂರವಾಣಿ ಮೂಲಕ ನಾನೇ ಖುದ್ದು ಮಾತನಾಡಿದ್ದೇನೆ. ಅವರು ಯಾವುದೇ ರೀತಿಯಲ್ಲಿಯೂ ನಾಪತ್ತೆಯಾಗಿಲ್ಲ. ಅವರ ತಂದೆಯ ಅನಾರೋಗ್ಯದ ಹಿನ್ನಲೆ ಅವರನ್ನು ನೋಡಲು ತಮ್ಮ ಹುಟ್ಟೂರಾದ ಉತ್ತರಪ್ರದೇಶಕ್ಕೆ ತೆರಳಿದ್ದಾರೆ’ ಎಂದು ಸ್ಪಷ್ಟನೆ ನೀಡಿದ್ದಾರೆ.
ಪಶುವೈದ್ಯಾಧಿಕಾರಿ ಹುದ್ದೆಗಳ ಪರೀಕ್ಷೆ ಅಕ್ರಮ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಕೆಪಿಎಸ್ಸಿ ಕಚೇರಿ ಸೇರಿದಂತೆ ಹಲವು ಕಡೆಗಳಲ್ಲಿ ಇತ್ತೀಚೆಗೆ ಈ.ಡಿ. ಅಧಿಕಾರಿಗಳು ದಾಳಿ ನಡೆಸಿದ ನಂತರ ಪರೀಕ್ಷೆ ಕಂಟ್ರೋಲರ್ ಆಗಿ ಕೆಲಸ ಮಾಡಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಿಗೂಢವಾಗಿ ನಾಪತ್ತೆಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.
ʼಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆಯಾಗಿಲ್ಲ. ಅವರು ತುರ್ತು ಕಾರಣಕ್ಕೆ ತಮ್ಮ ಹುಟ್ಟೂರು ಉತ್ತರಪ್ರದೇಶಕ್ಕೆ ಹೋಗಿದ್ದು, ಇನ್ನೂ ಒಂದೆರಡು ದಿನದಲ್ಲಿ ವಾಪಸ್ ಬೆಂಗಳೂರಿಗೆ ಆಗಮಿಸಲಿದ್ದಾರೆ. ಸರಕಾರಿ ಅಧಿಕಾರಿಯಾಗಿರುವುದರಿಂದ ಯಾವುದೇ ತನಿಖೆ, ವಿಚಾರಣೆಗೂ ಸಿದ್ಧ ಎಂದು ತಿಳಿಸಿದ್ದಾರೆʼ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.
ಈ ಹಿಂದೆ ಜ್ಞಾನೇಂದ್ರ ಕುಮಾರ್ ಕೆಪಿಎಸ್ಸಿಯಲ್ಲಿ ಕಾರ್ಯನಿರ್ವಹಿಸಿದ್ದರು. ಈಗ ಕೆಪಿಎಸ್ಸಿ ಹಗರಣ ಸಂಬಂಧ ಈ.ಡಿ. ದಾಳಿ, ತನಿಖೆ ನಡೆಯುತ್ತಿದೆ. ಇದೇ ಕಾರಣಕ್ಕೆ ಭಯಗೊಂಡು ನಾಪತ್ತೆಯಾಗಿದ್ದಾರೆ ಎಂದು ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಯಾಗುತ್ತಿದೆ. ಆದರೆ, ಅವರ ವಿರುದ್ಧ ಅಂತಹ ಯಾವುದೇ ಆರೋಪಗಳಿಲ್ಲ. ಯಾವುದೇ ಪ್ರಕರಣವೂ ಅವರ ಮೇಲೇ ಇಲ್ಲ. ಹಾಗೊಂದು ವೇಳೆ ವಿಚಾರಣೆಗಳಿದ್ದರೆ ತನಿಖೆಯಾಗಲಿ ಎಂದು ಪ್ರಿಯಾಂಕ್ ಖರ್ಗೆ ವಿವರಣೆ ನೀಡಿದರು.
ಈ ಹಿಂದೆ ಕೆಪಿಎಸ್ಸಿ ಪರೀಕ್ಷಾ ನಿಯಂತ್ರಕರಾಗಿ ಕೆಲಸ ನಿರ್ವಹಿಸಿದ್ದ 2016ನೇ ಬ್ಯಾಚ್‍ನ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರ ಮೊಬೈಲ್‍ಫೋನ್ ಫೋನ್ ಸ್ವಿಚ್‍ಆಫ್ ಆಗಿದ್ದರಿಂದ ನಾಪತ್ತೆಯಾಗಿದ್ದಾರೆಂಬ ಸುದ್ದಿ ಹಬ್ಬಿತ್ತು. ಆ ಬಳಿಕ ಪೊಲೀಸರು ಪರಿಶೀಲನೆ ನಡೆಸಿದ್ದು, ಅವರು ಬೆಂಗಳೂರಿನಿಂದ ಹೊಸದಿಲ್ಲಿಗೆ ಪ್ರಯಾಣಿಸಿರುವುದು ಗೊತ್ತಾಗಿತ್ತು.
ಉತ್ತರ ಪ್ರದೇಶ ಮೂಲದ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರು ಪ್ರಸ್ತುತ ಬೆಂಗಳೂರು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಜಂಟಿ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಮಾರ್ಚ್ ವರೆಗೆ ಕೆಪಿಎಸ್ಸಿಯ ಪರೀಕ್ಷಾ ನಿಯಂತ್ರಕರಾಗಿ ಕಾರ್ಯ ನಿರ್ವಹಿಸಿದ್ದರು.