×
Ad

ಬಿಜೆಪಿಗೆ ಪಾಕಿಸ್ತಾನದ ಮೇಲೆ ನಿಜಕ್ಕೂ ರೋಷಾವೇಷ ಇದ್ದರೆ ʼಶತ್ರು ರಾಷ್ಟ್ರʼ ಎಂದು ಘೋಷಿಸಲಿ: ಬಿ.ಕೆ ಹರಿಪ್ರಸಾದ್

Update: 2024-02-28 19:29 IST

ಬೆಂಗಳೂರು: ಬಿಜೆಪಿ ಪಕ್ಷಕ್ಕೂ, ಪಾಕಿಸ್ತಾನದ ನೆಂಟಸ್ತನಕ್ಕೂ ಹಲವು ದಶಕಗಳ ಇತಿಹಾಸವಿದೆ. ಪಾಕಿಸ್ತಾನದ ಜಪ ಮಾಡದೆ ಬಿಜೆಪಿ ಚುನಾವಣೆ ಎದುರಿಸಿದ ಇತಿಹಾಸವೇ ಇಲ್ಲ. ಪಾಕಿಸ್ತಾನದ ಮೇಲೆ ಬಿಜೆಪಿಗೆ ನಿಜಕ್ಕೂ ರೋಷಾವೇಷ ಇದ್ದರೆ ಶತ್ರು ರಾಷ್ಟ್ರವಾಗಿ ಘೋಷಿಸಲಿ ಎಂದು ಕಾಂಗ್ರೆಸ್‌ ಮುಖಂಡ ಬಿ.ಕೆ ಹರಿಪ್ರಸಾದ್‌ ಸವಾಲು ಹಾಕಿದ್ದಾರೆ.

ಈ ಸಂಬಂಧ ʼಎಕ್ಸ್‌ʼ ನಲ್ಲಿ ಬರೆದುಕೊಂಡಿರುವ ಅವರು, “ಒಕ್ಕೂಟ ಭಾರತವನ್ನು ಇಬ್ಭಾಗ ಮಾಡಿದ ಮುಹಮ್ಮದ್ ಅಲಿ ಜಿನ್ನಾಗೆ ಜಾತ್ಯಾತೀತ ನಾಯಕ ಎಂದು ಬಿರುದು ನೀಡಿ, ಸಮಾಧಿ ಎದುರು ಕಣ್ಣೀರು ಸುರಿಸಿದ ಲಾಲ್ ಕೃಷ್ಣ ಅಡ್ವಾನಿ ಯಾವ ಪಕ್ಷದವರು?”ಎಂದು ಪ್ರಶ್ನಿಸಿದ್ದಾರೆ.

“ಭಯೋತ್ಪಾದನೆಗೆ ತಲೆ ಬಾಗುವುದಿಲ್ಲ ಎಂದು ಚುನಾವಣೆಯ ಭಾಷಣ ಬೀಗಿದ್ದ ನರೇಂದ್ರ ಮೋದಿಯವರು, ಪಾಕಿಸ್ತಾನದ ಪ್ರಧಾನಿಯ ಮೊಮ್ಮಗಳ ಮದುವೆಗೆ ಆಹ್ವಾನವೇ ಇಲ್ಲದೆ, ರಹಸ್ಯವಾಗಿ ಬಿರಿಯಾನಿ ತಿಂದು ಬಂದಿದ್ದು ನೆಂಟಸ್ತನ ಅಲ್ಲವೇ?”ಎಂದು ಗುಡುಗಿದ್ದಾರೆ.

“ಪಾಕಿಸ್ತಾನವನ್ನು ‘ಭಯೋತ್ಪಾದನೆ ಪ್ರಾಯೋಜಿತ ರಾಷ್ಟ್ರವೆಂದು ಘೋಷಣೆ ಮಾಡಬೇಕು ಎಂದು ಸಂಸತ್ತಿನಲ್ಲಿ ಬಿಜೆಪಿ ಸಂಸದ ರಾಜೀವ್ ಚಂದ್ರಶೇಖರ್ ಮಂಡಿಸಿದ್ದ ಖಾಸಗಿ ಮಸೂದೆಯನ್ನು ವಾಪಾಸ್ ಪಡೆದಿದ್ದು ಯಾಕೆ?. 56 ಇಂಚಿನ ಎದೆಯಲ್ಲಿ ದೈರ್ಯವೇ ಇರಲಿಲ್ಲವೇ? ಯಾರ ಒತ್ತಡದಿಂದ ಮಸೂದೆ ವಾಪಾಸ್ ಪಡೆಯಲಾಯಿತು?”ಎಂದು ಕೇಳಿದ್ದಾರೆ.

“ಪಾಕಿಸ್ತಾನದಿಂದ ಆಮದು ಮಾಡಿಕೊಳ್ಳುತ್ತಿರುವ ಸಕ್ಕರೆ ಸೇರಿದಂತೆ ಎಲ್ಲಾ ವ್ಯವಹಾರವನ್ನು ನಿಲ್ಲಿಸಲು ಕೇಂದ್ರದ ಬಿಜೆಪಿ ಸರಕಾರಕ್ಕೆ ಧೈರ್ಯ ಇದೆಯಾ? ಬೀದಿಯಲ್ಲಿ ನಿಂತು ಬೊಬ್ಬೆ ಹಾಕುತ್ತಿರುವ ಬಿಜೆಪಿ, ಪಾಕಿಸ್ತಾನದ ನಂಟಸ್ತನದಿಂದ ರಾಜಕೀಯ ಬೇಳೆ ಬೆಳೆಸುತ್ತಿರುವುದು ಪುಲ್ವಾಮ ದಾಳಿಯಲ್ಲೇ ಸಾಬೀತಾಗಿದೆ. ರಾಜ್ಯದ ಜನರನ್ನು ಮೂರ್ಖರನ್ನಾಗಿ ಮಾಡಲು ಹೋಗಿ, ಮುಖವಾಡ ಬಯಲಾಗುತ್ತಿರುವುದು ಸ್ಪಷ್ಟವಾಗಿದೆ”ಎಂದು ಕಿಡಿಕಾರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News