×
Ad

ಸಿದ್ದರಾಮಯ್ಯ ಅವರಿಗೆ ಕಿಂಚಿತ್ತಾದರೂ ಆತ್ಮಸಾಕ್ಷಿ ಇದ್ದರೆ ಮುಡಾ ಹಗರಣವನ್ನು ಸಿಬಿಐಗೆ ಹಸ್ತಾಂತರಿಸಲಿ: ಆರ್.‌ ಅಶೋಕ್

Update: 2025-01-18 12:09 IST

PC: x.com/RAshokaBJP

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರಿಗೆ ಕಿಂಚಿತ್ತಾದರೂ ಆತ್ಮಸಾಕ್ಷಿ ಇದ್ದರೆ, ಈ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮೂಡಾ ಹಗರಣವನ್ನು ಸಿಬಿಐ ತನಿಖೆಗೆ ಹಸ್ತಾಂತರ ಮಾಡಬೇಕು ಎಂದು ವಿಪಕ್ಷ ನಾಯಕ ಆರ್.‌ ಅಶೋಕ್‌ ಅವರು ಆಗ್ರಹಿಸಿದ್ದಾರೆ.

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ತನಿಖೆ ನಡೆಸಿರುವ ಜಾರಿ ನಿರ್ದೇಶನಾಲಯದ ಬೆಂಗಳೂರು ವಲಯ ಅಂದಾಜು 300 ಕೋಟಿ ರೂ. ಮಾರುಕಟ್ಟೆ ಮೌಲ್ಯದ 142 ಸ್ಥಿರ ಆಸ್ತಿಗಳನ್ನು ಮುಟ್ಟಗೋಲು ಹಾಕಿಕೊಂಡಿರುವ ಕುರಿತು ಶುಕ್ರವಾರ ನೀಡಿರುವ ಪತ್ರಿಕಾ ಪ್ರಕಟಣೆಯ ಕುರಿತು ಅಶೋಕ್‌ ಅವರು ಸಾಮಾಜಿಕ ಜಾಲತಾಣ X ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಮೂಡಾ ಹಗರಣದಲ್ಲಿ ನನ್ನ ಪಾತ್ರವೇ ಇಲ್ಲ ಎಂದು ನಾಟಕವಾಡುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಖವಾಡ ನಿನ್ನೆ ಇಡಿ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಿಂದ ಸಂಪೂರ್ಣವಾಗಿ ಕಳಚಿ ಬಿದ್ದಿದೆ. ಮುಖ್ಯಮಂತ್ರಿಗಳ ಧರ್ಮಪತ್ನಿ ಅವರಿಗೆ ಅಕ್ರಮವಾಗಿ ಹಂಚಿಯಾಗಿರುವ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ನಿವೇಶನಗಳಲ್ಲಿ ಸಿದ್ದರಾಮಯ್ಯನವರ ರಾಜಕೀಯ ಪ್ರಭಾವ ಬಳಕೆಯಾಗಿರುವುದು ಇಡಿ ಹೇಳಿಕೆಯಲ್ಲಿ ಸುಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯನವರ ಧರ್ಮ ಪತ್ನಿ ಅವರಿಗೆ ಅಕ್ರಮವಾಗಿ ನಿವೇಶನ ಹಂಚಿಕೆಯಾದ ಸಂದರ್ಭದಲ್ಲಿ ಮೂಡಾ ಆಯುಕ್ತರಾಗಿದ್ದ ನಟೇಶ್ ಮತ್ತಿತರ ಅಧಿಕಾರಿಗಳು ಇನ್ನೂ ಅನೇಕ ಅಕ್ರಮಗಳನ್ನು ಎಸಗಿರುವುದೂ ಬೆಳಕಿಗೆ ಬಂದಿದ್ದು, ಸುಮಾರು 300 ಕೋಟಿ ರೂಪಾಯಿ ಬೆಲೆಬಾಳುವ 142 ಸ್ಥಿರಾಸ್ತಿಗಳನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News