×
Ad

ಕೆಇಎ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣ: ಇಬ್ಬರು ಪ್ರಿನ್ಸಿಪಾಲರ ಬಂಧನ

Update: 2023-11-30 09:53 IST

ಕಲಬುರಗಿ: ಕೆಇಎ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಅಕ್ರಮ ಪ್ರಕರಣದಲ್ಲಿ ಸಿಐಡಿ ಪೋಲಿಸರು ಬುಧವಾರ ಅಫಜಲಪುರದ ಇಬ್ಬರು ಪ್ರಿನ್ಸಿಪಾಲರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಅಫ್ಜಲ್ ಪುರ ತಾಲ್ಲೂಕಿನ ಕರ್ಜಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಹಾಗೂ ಪ್ರಭಾರಿ ಪ್ರಿನ್ಸಿಪಾಲ್ ಚಂದ್ರಕಾಂತ್ ಬುರಕಲ್ ಹಾಗೂ ಅಫ್ಜಲ್ ಪುರ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಮತ್ತು ಪ್ರಭಾರಿ ಪ್ರಿನ್ಸಿಪಾಲ್ ಬಸಣ್ಣ ಪೂಜಾರಿಎಂದು ಗುರುತಿಸಲಾಗಿದೆ.

ಇಬ್ಬರನ್ನೂ ತೀವ್ರ ವಿಚಾರಣೆಗೆ ಒಳಪಡಿಸಿದ ಅಧಿಕಾರಿಗಳು ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಸಿಐಡಿ ಹಾಜರುಪಡಿಸಿದರು.

ಅಫ್ಜಲ್ ಪುರ ಪಟ್ಟಣದಲ್ಲಿನ ಮಹಾಂತೇಶ್ವರ್ ವಿದ್ಯಾವರ್ಧಕ ಸಂಘ, ಶಿವಲಿಂಗೇಶ್ವರ್ ಶಿಕ್ಷಣ ಸಂಸ್ಥೆ ಹಾಗೂ ರಾಯಲ್ ಪಬ್ಲಿಕ್ ಸ್ಕೂಲ್ ಸೇರಿ ಒಟ್ಟು ಮೂರು ಎಫ್ ಡಿಎ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ರಾಯಲ್ ಪಬ್ಲಿಕ್ ಸ್ಕೂಲ್ನಿಂದಲೇ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿರುವ ಕುರಿತು ದೃಢಪಟ್ಟ ಹಿನ್ನೆಲೆಯಲ್ಲಿ ಸಿಐಡಿ ಪೋಲಿಸರು ರಾಯಲ್ ಪಬ್ಲಿಕ್ ಸ್ಕೂಲ್ ಪರೀಕ್ಷಾ ಕೇಂದ್ರದಲ್ಲಿ ಮುಖ್ಯ ಅಧೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಪ್ರಭಾರಿ ಪ್ರಿನ್ಸಿಪಾಲ್ ಚಂದ್ರಕಾಂತ್ ಬುರಕಲ್ ಮತ್ತು ಬಸಣ್ಣ ಪೂಜಾರಿ ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಮೊದಲು ಸಿಐಡಿ ವಶಕ್ಕೆ ಹೋಗಿ ಬಂದ ಇಬ್ಬರು ತಾವು ಅಮಾಯಕರು ಎನ್ನುವ ರೀತಿಯಲ್ಲಿ ಹೇಳಿಕೆಗಳನ್ನೂ ಸಹ ಕೊಟ್ಟಿದ್ದರು. ಈಗ ಮತ್ತೆ ಇಬ್ಬರು ಆರೋಪಿಗಳನ್ನು ಬಂಧಿಸುವ ಮೂಲಕ ಪರೀಕ್ಷಾ ಅಕ್ರಮದ ಬಗ್ಗೆ ಸಿಐಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News