ಪುಣ್ಯ ಕ್ಷೇತ್ರಗಳ ನದಿ, ಕಲ್ಯಾಣಿ ಸಮೀಪ ಸೋಪು, ಶ್ಯಾಂಪೂ ಮಾರಾಟ ನಿಷೇಧಿಸಿ : ಈಶ್ವರ್ ಖಂಡ್ರೆ ಸೂಚನೆ
ಬೆಂಗಳೂರು,: ಪುಣ್ಯ ಕ್ಷೇತ್ರಗಳ ನದಿ, ಸರೋವರ, ಕಲ್ಯಾಣಿಯ ದಂಡೆ, ಸ್ನಾನಘಟ್ಟಗಳ 500 ಮೀಟರ್ ವ್ಯಾಪ್ತಿಯಲ್ಲಿ ಸೋಪು, ಶ್ಯಾಂಪೂ ಮಾರಾಟ ಮಾಡದಂತೆ ನಿಷೇಧಿಸಲು ಕ್ರಮ ಕೈಗೊಳ್ಳಬೇಕು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ, ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ರವಿವಾರ ಈ ಸಂಬಂಧ ತಮ್ಮ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಟಿಪ್ಪಣಿಯ ಮೂಲಕ ಸೂಚನೆ ನೀಡಿರುವ ಅವರು, ಸ್ನಾನಘಟ್ಟಗಳಲ್ಲಿ ಭಕ್ತರು ಶ್ಯಾಂಪೂ, ಸೋಪು ಬಳಸಿ ಸ್ನಾನ ಮಾಡಿ ಉಳಿದ ತುಂಡು ಮತ್ತು ಶ್ಯಾಂಪೂ ಪ್ಯಾಕೆಟ್ ಬಿಟ್ಟು ಹೋಗುತ್ತಿದ್ದು, ಇದೆಲ್ಲ ನದಿ ಸೇರಿ ನೊರೆ ಉಕ್ಕುತ್ತಿದೆ. ನೀರು ಕಲುಷಿತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ನದಿ, ಕೊಳ, ಸರೋವರದ 500 ಮೀಟರ್ ವ್ಯಾಪ್ತಿಯಲ್ಲಿ ಸೋಪು, ಶ್ಯಾಂಪೂ ಮಾರಾಟ ಮಾಡದಂತೆ ನಿಷೇಧಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಅದೇ ರೀತಿ ನದಿ, ಸರೋವರ, ಕೊಳ, ಕಲ್ಯಾಣಿಗಳಲ್ಲಿ ಭಕ್ತರು ತಾವು ಉಟ್ಟ ಬಟ್ಟೆಯನ್ನು ವಿಸರ್ಜಿಸದಂತೆ ನಿರ್ಬಂಧಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಒಂದರೆಡು ರೂ. ಮೌಲ್ಯದ ಶ್ಯಾಂಪೂ ಪೊಟ್ಟಣ, ಕಡಿಮೆ ಬೆಲೆಯ ಸಣ್ಣ ಸೋಪುಗಳು ನದಿ, ಸರೋವರ, ಕಲ್ಯಾಣಗಳ ಬಳಿಯೇ ಇರುವ ಅಂಗಡಿಗಳಲ್ಲಿ ಲಭಿಸುತ್ತಿದ್ದು, ಸುಲಭವಾಗಿ ಖರೀದಿಸುವ ಜನರು ಅದನ್ನು ಬಳಸಿ ಉಳಿದ ಸೋಪು, ಶ್ಯಾಂಪೂ ಸ್ಯಾಚೆಟ್‍ಗಳನ್ನು ನೀರಿನಲ್ಲಿ ಅಥವಾ ದಂಡೆಯಲ್ಲಿ ಎಸೆದು ಹೋಗುತ್ತಿದ್ದು, ಇದು ನೀರಲ್ಲಿ ಬೆರೆತು ಜಲಚರಗಳು ಸಾವನ್ನಪ್ಪುತ್ತಿದ್ದರೆ, ಈ ನೀರು ಕುಡಿಯುವ ಜನ, ಜಾನುವಾರುಗಳು ಕಾಯಿಲೆಯಿಂದ ಬಳಸುವಂತಾಗಿದೆ. ಈ ನಿಟ್ಟಿನಲ್ಲಿ ನದಿಗಳ ಸಮೀಪ ಶ್ಯಾಂಪೂ, ಸೋಪು ಲಭ್ಯವಾಗದಂತೆ ತಡೆಯುವುದು ಅನಿವಾರ್ಯವಾಗಿದೆ ಎಂದು ಈಶ್ವರ್ ಖಂಡ್ರೆ ಹೇಳಿದ್ದಾರೆ.
ಇದರ ಜೊತೆಗೆ ಜನರು ನದಿಗಳಲ್ಲಿ ವಸ್ತ್ರಗಳನ್ನು ವಿಸರ್ಜನೆ ಮಾಡುತ್ತಿದ್ದು, ಕೆಲವು ತೀರ್ಥ ಕ್ಷೇತ್ರಗಳಲ್ಲಿ ರಾಶಿ ರಾಶಿ ವಸ್ತ್ರ ಬಿದ್ದಿರುವುದು ಗೋಚರಿಸುತ್ತದೆ. ಈ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ನಿಯಮವನ್ನು ಅನುಷ್ಠಾನಗೊಳಿಸುವಂತೆ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.