ಹೊಸದಿಲ್ಲಿ : ಹರಿದು ಹಂಚಿಹೋಗಿರುವ ಎಲ್ಲ ಕನ್ನಡಪರ ಸಂಘಟನೆಗಳು ಹಾಗೂ ಹೋರಾಟಗಾರರು ನಾಡಿನ ಹಿತಕ್ಕಾಗಿ ಒಂದು ವೇದಿಕೆಯಡಿ ಬಂದು ಒಂದಾಗಬೇಕು, ನಿಮ್ಮ ದನಿ ಒಂದೇ ಆಗಿರಬೇಕು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸಲಹೆ ಮಾಡಿದರು.

ಬೆಂಗಳೂರಿನಲ್ಲಿ ರವಿವಾರ ಹಮ್ಮಿಕೊಳ್ಳಲಾಗಿರುವ ‘ಎಚ್‍ಎಂಟಿ ಕನ್ನಡಿಗ’ ಕೈಗಡಿಯಾರಗಳ ಲೋಕಾರ್ಪಣೆಗೆ ಕನ್ನಡಪರ ಸಂಘಟನೆಗಳನ್ನು ಆಹ್ವಾನಿಸುವ ಉದ್ದೇಶದಿಂದ ಹೊಸದಿಲ್ಲಿಯಲ್ಲಿರುವ ತಮ್ಮ ಸಚಿವಾಲಯದ ಕಚೇರಿಯಿಂದಲೇ ಆನ್‍ಲೈನ್ ವೇದಿಕೆ ಮೂಲಕ ಕನ್ನಡಪರ ಹೋರಾಟಗಾರರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನೀವೆಲ್ಲರೂ ಒಂದಾಗಬೇಕು ಎಂಬುದು ನನ್ನ ಕಳಕಳಿಯ ಮನವಿ ಎಂದರು.

ನಮ್ಮ ಸಮೃದ್ಧ ರಾಜ್ಯದ ತೆರಿಗೆ ಹಣ ಪೋಲಾಗುತ್ತಿದೆ. ನಮ್ಮ ಸಂಪತ್ತು ದುರುಪಯೋಗ ಆಗುತ್ತಿದೆ. ಅದನ್ನು ನಾವು ತಡೆಯಬೇಕು. ಕನ್ನಡ ರಕ್ಷಣೆಯಲ್ಲಿ ನಿಮ್ಮ ಪಾತ್ರ ದೊಡ್ಡದು. ನೀವೆಲ್ಲ ಹರಿದು ಹಂಚಿ ಹೋಗಿದ್ದೀರಿ. ನೀವು ಒಂದಾದರೆ ದೊಡ್ಡ ಶಕ್ತಿ ಆಗುತ್ತದೆ. ಒಂದಾಗುವ ಸಂಕಲ್ಪ ಮಾಡಿ ಒಂದು ದ್ವನಿಯಾಗಬೇಕು ಎಂದು ಅವರು ಹೇಳಿದರು.

ರಾಜ್ಯೋತ್ಸವ ಸಂದರ್ಭದಲ್ಲಿ ನೀವು ಒಂದಾಗುವ ಪಣ ತೊಡಬೇಕು. ನಿಮ್ಮ ನೋವುಗಳಿಗೆ ಸ್ಪಂದಿಸುತ್ತೇನೆ. ನೀವು ಹೆದರಬೇಡಿ, ನಿಮ್ಮೊಂದಿಗೆ ನಾನು ಇದ್ದೇನೆ. ನಾಳೆ ನಡೆಯುವ ಕಾರ್ಯಕ್ರಮದಲ್ಲಿ ತಾವೆಲ್ಲರೂ ತಪ್ಪದೇ ಭಾಗಿಯಾಗಬೇಕು. ರಾಜ್ಯೋತ್ಸವದಲ್ಲಿ ನಾವೆಲ್ಲರೂ ಭಾಗಿಯಾಗೋಣ. ತಾವೆಲ್ಲರೂ ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಅವರು ಕರೆ ನೀಡಿದರು.

25 ಸಂಘಟನೆಗಳ ರಾಜ್ಯಾಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತಿ ಇದ್ದ ಈ ಸಭೆಯಲ್ಲಿ ಕೆಲ ಮಹತ್ವದ ಅಂಶಗಳನ್ನು ಪ್ರಸ್ತಾಪ ಮಾಡಿದ ಕುಮಾರಸ್ವಾಮಿ, ಕೆಲ ಸೂಕ್ಷ್ಮವಾದ ವಿಚಾರಗಳು ಇವೆ. ನನ್ನದೇ ಆದ ಇತಿಮಿತಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಕನ್ನಡನಾಡಿನ ಸ್ವಾಭಿಮಾನ ಉಳಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕು ಎಂದು ಹೇಳಿದರು.

ನನ್ನ ಇಲಾಖೆಯಿಂದ ಎಚ್‍ಎಂಟಿ ಕನ್ನಡಿಗ ಕೈಗಡಿಯಾರಗಳ ಲೋಕಾರ್ಪಣೆ ಮಾಡುತ್ತಿದ್ದೇವೆ. ಒಂದು ಕಾಲದಲ್ಲಿ ಈ ಕಾರ್ಖಾನೆ ಚೆನ್ನಾಗಿತ್ತು. ಅದಕ್ಕೆ ಮರಳಿ ವೈಭವ ತಂದುಕೊಡಬೇಕು ಎಂದು ಪ್ರಯತ್ನ ಮಾಡುತ್ತಿದ್ದೇನೆ. ಎಚ್‍ಎಂಟಿ ಕನ್ನಡಿಗ ಕೈಗಡಿಯಾರಗಳನ್ನು ನಿಮ್ಮ ಸಮ್ಮುಖದಲ್ಲಿ ಲೋಕಾರ್ಪಣೆ ಮಾಡುತ್ತಿದ್ದೇವೆ. ನಿಮ್ಮ ಸಹಕಾರ ಇರಲಿ ಎಂದು ಕುಮಾರಸ್ವಾಮಿ ಕೋರಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor