ಸಾಂದರ್ಭಿಕ ಚಿತ್ರ

ಬೆಂಗಳೂರು : ಕನ್ನಡ ರಾಜ್ಯೋತ್ಸವದ ಸಂಭ್ರಮ ನಾಡಿನೆಲ್ಲೆಡೆ ಮನೆ ಮಾಡಿದೆ. ಕರ್ನಾಟಕ ರಾಜ್ಯದ ಅಸ್ಮಿತೆಯಾಗಿರುವ ಕನ್ನಡ ಬಾವುಟ ಎಲ್ಲೆಡೆ ರಾರಾಜಿಸುತ್ತಿದ್ದು, ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಂತ ವಿವಿಧ ಸಂಘಟನೆಗಳಿಂದ ಅದ್ದೂರಿ ಕಾರ್ಯಕ್ರಮಗಳನ್ನು ಅಯೋಜಿಸಲಾಗಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ನಾಳೆ(ನ.1) ಬೆಳಗ್ಗೆ 9ಗಂಟೆಯ ಸುಮಾರಿಗೆ ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ 71ನೆ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಧ್ವಜಾರೋಹಣ ನೆರವೇರಿಸಲಿದ್ದಾರೆ. ಅದೇ ರೀತಿಯಲ್ಲಿ ಕನ್ನಡ ಚಳವಳಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕರ್ನಾಟಕ ರಾಜ್ಯೋತ್ಸವ ಸಮಿತಿ ವತಿಯಿಂದ ಮೈಸೂರು ಬ್ಯಾಂಕ್ ವೃತ್ತದಲ್ಲಿ ‘ಕನ್ನಡ ಹಬ್ಬ-71’ ಕಾರ್ಯಕ್ರಮ ಆಯೋಜಿಸಲಾಗಿದೆ.

ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವ ಸಂಬಂಧ ವಿಶೇಷ ಅಭಿಯಾನವನ್ನು ಹಮ್ಮಿಕೊಂಡಿದೆ. ಕನ್ನಡ ಸೇನೆ ಸೇರಿದಂತೆ ವಿವಿಧ ಕನ್ನಡಪ ಸಂಘಟನೆಗಳು ರ್ಯಾಲಿ, ಮೆರವಣಿಗೆ ಸೇರಿದಂತೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಿವೆ.

ನ.1ರ ಸಂಜೆ 6ಗಂಟೆಗೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ 71 ಮಂದಿ ಸಾಧಕರಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ, ವಿಧಾನ ಪರಿಷತ್ ಸಭಾಪತಿ ಸಲೀಂ ಅಹ್ಮದ್ ಅವರು ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.

ರಾಜ್ಯೋತ್ಸವದ ಸಂಭ್ರಮದ ಹಿನ್ನೆಲೆಯಲ್ಲಿ ನಗರ ಪ್ರಮುಖ ವೃತ್ತಗಳಲ್ಲಿನ ಸಿಗ್ನಲ್ ಲೈಟ್‍ಗಳಲ್ಲಿ ಹಳದಿ ಮತ್ತು ಕೆಂಪು ಕನ್ನಡ ಬಾವುಟದ ಸಂಕೇತವನ್ನು ಪ್ರದರ್ಶಿಸಲಾಗುತ್ತಿದೆ. ಅಲ್ಲದೆ, ರಾಜ್ಯದ ಆಡಳಿತದ ಶಕ್ತಿ ಕೇಂದ್ರ ವಿಧಾನಸೌಧಕ್ಕೆ ಹಳದಿ ಮತ್ತು ಕೆಂಪು ಬಣ್ಣದ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಜತೆಗೆ ನಗರದ ಪ್ರಮುಖ ಕಟ್ಟಡಗಳಿಗೂ ಕನ್ನಡ ಬಾವುಟವನ್ನೇ ಹೋಲುವ ವಿದ್ಯುತ್ ದೀಪಾಲಂಕಾರವು ರಾಜ್ಯೋತ್ಸವಕ್ಕೆ ವಿಶೇಷ ಮೆರಗು ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor