×
Ad

ಹೈಕಮಾಂಡ್ ಅಂಗಳಕ್ಕೆ ತಲುಪಿದ ಬಿಜೆಪಿ ಬಂಡಾಯ; ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಬದಲಾವಣೆಗೆ ಪಟ್ಟು ಹಿಡಿದ ನಾಯಕರು

Update: 2025-02-04 20:34 IST

ಬಿ.ವೈ.ವಿಜಯೇಂದ್ರ / ಬಸನಗೌಡ ಪಾಟೀಲ್ ಯತ್ನಾಳ್

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಬಹಿರಂಗವಾಗಿಯೇ ಸಮರ ಸಾರಿರುವ ಬಿಜೆಪಿ ಭಿನ್ನಮತೀಯ ನಾಯಕರು ಮಂಗಳವಾರ ಹೊಸದಿಲ್ಲಿಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ರಾಜ್ಯದ ವಿದ್ಯಾಮಾನಗಳ ಬಗ್ಗೆ ಚರ್ಚೆ ನಡೆಸಿದರು. ಅಲ್ಲದೇ, ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಬದಲಾಯಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ.

ವಿಜಯೇಂದ್ರ ಅಧ್ಯಕ್ಷರಾದ ನಂತರ ರಾಜ್ಯದಲ್ಲಿ ಪಕ್ಷದ ಸಂಘಟನೆ ಸಮಪರ್ಕವಾಗಿ ಆಗುತ್ತಿಲ್ಲ, ಪ್ರತಿಯೊಂದು ವಿಚಾರದಲ್ಲಿಯೂ ಏಕಪಕ್ಷೀಯ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದ್ದಾರೆ, ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಕಡೆಗಣಿಸುತ್ತಿದ್ದಾರೆ ಎಂದು ಭಿನ್ನಮತೀಯ ನಾಯಕರು ದೂರಿದ್ದಾರೆ ಎನ್ನಲಾಗಿದೆ.

ರಾಜ್ಯ ಸರಕಾರದ ವಿರುದ್ಧದ ಯಾವ ಹೋರಾಟವು ತಾರ್ಕಿಕ ಅಂತ್ಯ ಕಾಣಿಸುವುದರಲ್ಲಿ ವಿಜಯೇಂದ್ರ ವಿಫಲರಾಗಿದ್ದಾರೆ ಎಂದು ಹೈಕಮಾಂಡ್ ನಾಯಕರ ಎದುರು ಭಿನ್ನಮತೀಯ ನಾಯಕರು ದೂರುಗಳ ಸರಮಾಲೆಯನ್ನೆ ಇರಿಸಿದ್ದಾರೆ ಎನ್ನಲಾಗಿದೆ.

ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಶ್ರೀಮಂತ ಪಾಟೀಲ್, ಬಿಜೆಪಿ ಮುಖಂಡ ಎನ್.ಆರ್.ಸಂತೋಷ್ ಸೇರಿದಂತೆ ಇನ್ನಿತರ ನಾಯಕರು ಸೋಮವಾರ ರಾತ್ರಿಯೇ ಹೊಸದಿಲ್ಲಿಗೆ ಆಗಮಿಸಿ, ವರಿಷ್ಠರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಸಂಸದ ಡಾ.ಕೆ.ಸುಧಾಕರ್ ಸಹ ವರಿಷ್ಠರ ಭೇಟಿಗೆ ಕಾಲಾವಕಾಶ ಕೋರಿದ್ದಾರೆ.

ರಾಜ್ಯದಲ್ಲಿ ಆಗುತ್ತಿರುವ ಅನ್ಯಾಯದಿಂದ ನಾವು ಬೇಸತ್ತು ಈ ಹೋರಾಟ ಮಾಡುತ್ತಿದ್ದೇವೆ. ಈಗಾಗಲೇ, ಹೈಕಮಾಂಡ್‍ನ ಇಬ್ಬರು ನಾಯಕರ ಜೊತೆ ಮಾತುಕತೆ ನಡೆಸಿ, ಎಲ್ಲ ಮಾಹಿತಿಯನ್ನು ನೀಡಿದ್ದೇವೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ನಿನ್ನೆ ರಾತ್ರಿಯೇ ಭೇಟಿ ಮಾಡಿ ಚರ್ಚೆ ನಡೆಸಿದ್ದೇವೆ ಎಂದು ಹೊಸದಿಲ್ಲಿಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸುದ್ದಿಗಾರರಿಗೆ ತಿಳಿಸಿದರು.

ದಿಲ್ಲಿ ಮಟ್ಟದ ನಾಯಕರು ನಮ್ಮ ಹೋರಾಟಕ್ಕೆ ಶಹಬಾಸ್‍ಗಿರಿ ನೀಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರ ರೀತಿಯಲ್ಲಿ ನಾನು ಹತಾಶ ಭಾವನೆಯಲ್ಲಿ ಮಾತನಾಡುವುದಿಲ್ಲ. ನಮ್ಮ ಎಲ್ಲ ವಿಚಾರಗಳನ್ನು ಹೈಕಮಾಂಡ್ ನಾಯಕರ ಮುಂದೆ ಇರಿಸಿದ್ದೇವೆ. ಅಂತಿಮವಾಗಿ ಅವರು ಕೈಗೊಳ್ಳುವ ನಿರ್ಧಾರಕ್ಕೆ ನಾವು ತಲೆ ಬಾಗುತ್ತೇವೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಕುಟುಂಬ ರಾಜಕಾರಣಕ್ಕೆ ಅವಕಾಶ ಕೊಡಬೇಡಿ. ನಮ್ಮಲ್ಲಿ ಯಾರೂ ರಾಜ್ಯಾಧ್ಯಕ್ಷ ಹುದ್ದೆಯ ಆಕಾಂಕ್ಷಿಯಲ್ಲ. ವಿಜಯೇಂದ್ರ ಹೊರತುಪಡಿಸಿ ಬೇರೆ ಯಾರಿಗಾದರೂ ಅಧ್ಯಕ್ಷ ಸ್ಥಾನ ನೀಡಿದರೆ ನಮ್ಮ ಸಂಪೂರ್ಣ ಬೆಂಬಲವಿದೆ. ವಿಜಯೇಂದ್ರ ವಿರುದ್ಧ ಸಾಕಷ್ಟು ಭ್ರಷ್ಟಾಚಾರದ ಆರೋಪಗಳಿದ್ದು, ಅವರನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ವಿರುದ್ಧ ಹೋರಾಟ ಮಾಡುವುದು ಸರಿಯಾಗುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್‍ರನ್ನು ಭೇಟಿ ಮಾಡಿ ಮಾಜಿ ಸಚಿವ ಕುಮಾರ್ ಬಂಗಾರಪ್ಪ ದೂರಿದ್ದಾರೆ ಎನ್ನಲಾಗಿದೆ.

ವಿಜಯೇಂದ್ರ ವಿರುದ್ಧ ಮತ್ತೊಮ್ಮೆ ಕಲಬುರಗಿಯಲ್ಲಿ ವಾಗ್ದಾಳಿ ನಡೆಸಿರುವ ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನಾನು ವಿಜಯೇಂದ್ರ ರೀತಿ ತುಂಬಾ ವಿದ್ಯಾವಂತ ಅಲ್ಲ. ಅವರ ರೀತಿ ನನಗೆ ಇಂಗ್ಲಿಷ್ ಮಾತನಾಡಲು ಬರುವುದಿಲ್ಲ. ನಾನೊಬ್ಬ ಹಳ್ಳಿ ಗುಗ್ಗು. ಆದುದರಿಂದ, ರಾಷ್ಟ್ರ ರಾಜಕಾರಣಕ್ಕೆ ನನಗಿಂತ ವಿಜಯೇಂದ್ರ ಹೆಚ್ಚು ಸೂಕ್ತ ಆಗುತ್ತಾರೆ ಎಂದು ವ್ಯಂಗ್ಯವಾಡಿದರು.

ಲಿಂಗಾಯತ ಕೋಟದಲ್ಲೆ ರಾಜ್ಯಾಧ್ಯಕ್ಷ ಸ್ಥಾನ ನೀಡುವುದಾದರೆ ಹಿರಿಯನಾಗಿರುವ ನನಗೆ ಅವಕಾಶ ಕೊಡಲಿ. ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಅವರ ವಿರುದ್ಧ ಸ್ಪರ್ಧಿಸಲು ನಾನು ಸಿದ್ಧವಾಗಿದ್ದೇನೆ ಎಂದು ಯತ್ನಾಳ್ ತಿಳಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷನಾಗಿ ರಾಜ್ಯದಲ್ಲಿರುವ ಭ್ರಷ್ಟ ಕಾಂಗ್ರೆಸ್ ಸರಕಾರ ಹಾಗೂ ಮುಡಾದಲ್ಲಿ ಭ್ರಷ್ಟಾಚಾರದ ಆರೋಪವನ್ನು ಎದುರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹಮ್ಮಿಕೊಂಡಿದ್ದ ಹೋರಾಟದ ನೇತೃತ್ವವನ್ನು ನಾನು ವಹಿಸಿದ್ದೇನೆ. ಕೆಲವು ನಾಯಕರು ನೀಡುತ್ತಿರುವ ಹೇಳಿಕೆಗಳಿಂದಾಗಿ ರಾಜ್ಯದಲ್ಲಿ ಪಕ್ಷದ ಕಾರ್ಯಕರ್ತರು ಬಹಳ ನೊಂದಿದ್ದಾರೆ. ಹೊಸದಿಲ್ಲಿಯಲ್ಲಿ ನಮ್ಮ ಪಕ್ಷದ ವರಿಷ್ಠರ ಎದುರು ಅವರು ಏನೇನೂ ಹೇಳಬೇಕೋ ಎಲ್ಲವನ್ನೂ ಹೇಳಿಕೊಳ್ಳಲಿ. ನಾನು ವರಿಷ್ಠರ ಸಂಪರ್ಕದಲ್ಲಿದ್ದೇನೆ.

ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ನಾನು ಬಹಿರಂಗವಾಗಿ ಚರ್ಚೆ ಮಾಡಲು ಬಯಸುವುದಿಲ್ಲ. ಈಗ ನಡೆಯುತ್ತಿರುವ ಬೆಳವಣಿಗೆಗಳು ಲಕ್ಷಾಂತರ ಕಾರ್ಯಕರ್ತರಿಗೆ ನೋವು ತಂದಿದೆ. ಕಾಂಗ್ರೆಸ್ ಸರಕಾರ ಜನ ವಿರೋಧಿಯಾಗಿ ಕೆಲಸ ಮಾಡುತ್ತಿದೆ. ಪ್ರತಿ ನಿತ್ಯ ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕಳಪೆ ಔಷಧಿ ಸರಬರಾಜಿನ ಕಾರಣದಿಂದ ಬಾಣಂತಿಯರು, ಮಕ್ಕಳು ಸಾಯುತ್ತಿದ್ದಾರೆ. ಅಭಿವೃದ್ಧಿ ಮರಿಚಿಕೆಯಾಗಿದೆ. ಇಂತಹ ಸಂದರ್ಭದಲ್ಲಿ ನಾವು ಜನರ ಪರವಾಗಿ ಹೋರಾಟ ಮಾಡಬೇಕು. ಆದರೆ, ನಾವು ಆ ಕೆಲಸವನ್ನು ಮಾಡುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರೆದರೆ ನಮಗೆ ಹಾಗೂ ಪಕ್ಷಕ್ಕೆ ನಷ್ಟ ಆಗುತ್ತದೆ.

ಸಿ.ಟಿ.ರವಿ, ವಿಧಾನಪರಿಷತ್ ಸದಸ್ಯ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News