ಕಾಲ್ತುಳಿತ ಪ್ರಕರಣ| ನ್ಯಾ.ಜಾನ್ ಮೈಕಲ್ ಕುನ್ಹಾ ಆಯೋಗದ ವರದಿಯ ಮೇಲೆ ಕ್ರಮವಹಿಸಲು ಸಚಿವ ಸಂಪುಟ ನಿರ್ಧಾರ
ಸಚಿವ ಎಚ್.ಕೆ.ಪಾಟೀಲ್
ಬೆಂಗಳೂರು: ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣ ಸಂಬಂಧ ನ್ಯಾ.ಜಾನ್ ಮೈಕಲ್ ಕುನ್ಹಾ ವರದಿಯನ್ನು ಸಚಿವ ಸಂಪುಟ ಸಭೆ ಅಂಗೀಕರಿಸಿದ್ದು, ಈ ಬಗ್ಗೆ ಚರ್ಚಿಸಿ, ಕ್ರಮಗಳ ಕುರಿತು ಶೀಘ್ರದಲ್ಲಿಯೇ ನಿರ್ಧಾರ ಪ್ರಕಟಿಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ.4ರಂದು ಆರ್‍ಸಿಬಿ ಕ್ರಿಕೆಟ್ ತಂಡದ ವಿಜಯೋತ್ಸವ ಸಮಾರಂಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉಂಟಾದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಹೈಕೋರ್ಟಿನ ನಿವೃತ್ತ ನ್ಯಾಯಾಧೀಶ ಜಾನ್ ಮೈಕಲ್ ಕುನ್ಹಾ ಅವರ ನೇತೃತ್ವದ ಏಕ ಸದಸ್ಯ ವಿಚಾರಣಾ ಆಯೋಗದ ವರದಿಯ ಮೇಲೆ ಕ್ರಮವಹಿಸಲು ಸಚಿವ ಸಂಪುಟ ನಿರ್ಧರಿಸಿದೆ ಎಂದು ಹೇಳಿದರು.
ಕುನ್ಹಾ ಅವರ ಏಕಸದಸ್ಯ ಆಯೋಗ ನೀಡಿರುವ ತನಿಖಾ ವರದಿಯಲ್ಲಿ ಪೊಲೀಸ್ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಸಂಬಂಧಿಸಿದ ಪೊಲೀಸ್ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ವರದಿಯಲ್ಲೂ ಶಿಫಾರಸು ಮಾಡಲಾಗಿದೆ. ಈ ಬಗ್ಗೆ ಯಾವ ಕ್ರಮ ಕೈಗೊಳ್ಳಬೇಕೆಂದು ಚರ್ಚೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಪ್ರಕಟಿಸಲಾಗುವುದು ಎಂದರು.