×
Ad

ಬೆಂಗಳೂರಿನ ಮುಸ್ಲಿಂ ಬಾಹುಳ್ಯದ ಪ್ರದೇಶವನ್ನು ಪಾಕಿಸ್ತಾನ ಎಂದು ಕರೆದ ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶ; ವ್ಯಾಪಕ ಆಕ್ರೋಶ

Update: 2024-09-19 13:26 IST

Screengrab:X

ಬೆಂಗಳೂರು: ಬೆಂಗಳೂರಿನ ಗೋರಿಪಾಳ್ಯದ ಕುರಿತು ಉಲ್ಲೇಖಿಸುವಾಗ, ಮುಸ್ಲಿಂ ಬಾಹುಳ್ಯದ ಪ್ರದೇಶವನ್ನು ಪಾಕಿಸ್ತಾನ ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶ ವೇದವ್ಯಾಸಾಚಾರ್ ಶ್ರೀಷಾನಂದ ಕರೆದಿರುವ ಘಟನೆ ನಡೆದಿದೆ.

ಇತ್ತೀಚೆಗೆ ನಡೆದ ವಿಚಾರಣೆಯೊಂದರ ಸಂದರ್ಭದಲ್ಲಿ, “ಮೈಸೂರು ರಸ್ತೆ ಮೇಲುಸೇತುವೆಗೆ ಹೋಗಿ ನೋಡಿ, ಪ್ರತಿ ಆಟೋರಿಕ್ಷಾದಲ್ಲೂ 10 ಮಂದಿಯಿರುತ್ತಾರೆ. ಇಲ್ಲಿ ಕಾನೂನು ಅನ್ವಯಿಸುವುದಿಲ್ಲ. ಯಾಕೆಂದರೆ, ಮೈಸೂರು ಮೇಲ್ಸೇತುವೆಯು ಗೋರಿಪಾಳ್ಯದಿಂದ ಎಡಕ್ಕೆ ಮಾರುಕಟ್ಟೆಗೆ ತೆರಳುತ್ತದೆ. ಇದು ಪಾಕಿಸ್ತಾನದಲ್ಲಿದೆ, ಭಾರತದಲ್ಲಲ್ಲ. ಇದು ವಾಸ್ತವ. ಅಲ್ಲಿಗೆ ಎಷ್ಟೇ ಕಟ್ಟುನಿಟ್ಟಿನ ಪೊಲೀಸ್ ಅಧಿಕಾರಿಯನ್ನು ನೇಮಕ ಮಾಡಿದರೂ, ಅವರನ್ನು ಥಳಿಸಲಾಗುತ್ತೆ” ಎಂದು ವೇದವ್ಯಾಸಾಚಾರ್ ಶ್ರೀಷಾನಂದ ಸಾಯಿ ಹೇಳಿದ್ದಾರೆ. ಈ ವಿಡಿಯೊ ಕ್ಲಿಪ್ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಜನರಿಂದ ತೀವ್ರ ಖಂಡನೆಗೆ ಗುರಿಯಾಗಿದೆ.

ಸಾಂವಿಧಾನಿಕ ಹುದ್ದೆಯಲ್ಲಿರುವವರೊಬ್ಬರು ಇಂತಹ ಹೇಳಿಕೆಯನ್ನು ನೀಡಲು ಹೇಗೆ ಸಾಧ್ಯ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಬೇರೆ ಧರ್ಮದ ವ್ಯಕ್ತಿಯನ್ನು ಭಾರತೀಯ ಸಾಂವಿಧಾನಿಕ ನ್ಯಾಯಾಲಯದ ನ್ಯಾಯಾಧೀಶರೊಬ್ಬರು ಪಾಕಿಸ್ತಾನಿ ಎಂದು ಸಂಬೋಧಿಸಿದ್ದಾರೆ. ಇದು ನಾಚಿಕೆಗೇಡು” ಎಂದು ವಕೀಲ ಸಂಜಯ್ ಘೋಷ್ ತೀವ್ರವಾಗಿ ಖಂಡಿಸಿದ್ದಾರೆ.

“ಒಂದು ವೇಳೆ ನ್ಯಾಯಾಂಗದಲ್ಲಿನ ವ್ಯಕ್ತಿಯೊಬ್ಬರು ಈ ರೀತಿ ಮಾಡಿದರೆ, ಭಾರತೀಯ ಮುಸ್ಲಿಮರೊಂದಿಗೆ ಸಾಮಾನ್ಯ ಜನರು ಮತ್ತಷ್ಟು ಅಮಾನುಷವಾಗಿ ನಡೆದುಕೊಳ್ಳುವಂತಾಗುತ್ತದೆ. ನ್ಯಾಯಾಂಗ, ಪೊಲೀಸ್, ಶೈಕ್ಷಣಿಕ ಸಂಸ್ಥೆಗಳು, ಮಾಧ್ಯಮಗಳು, ಸರಕಾರ ಹಾಗೂ ಸಮಾಜದ ದೊಡ್ಡ ಸಂಖ್ಯೆಯು ಭಾರತೀಯ ಮುಸ್ಲಿಮರನ್ನು ಅವರು ಮುಸ್ಲಿಮರು ಎಂಬ ಕಾರಣಕ್ಕೇ ಹೀಗೆ ನಡೆಸಿಕೊಳ್ಳುತ್ತಿದೆ” ಎಂದು ವಸೀಂ ಎಂಬವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News