×
Ad

ಕಿಯೋನಿಕ್ಸ್| ಲಂಚಕ್ಕಾಗಿ ವೆಂಡರ್ ಗಳಿಗೆ ಕಿರುಕುಳ: ತನಿಖೆಗೆ ಆಗ್ರಹ

Update: 2023-12-02 20:19 IST

ಬೆಂಗಳೂರು: ಕರ್ನಾಟಕ ವಿದ್ಯುನ್ಮಾನ ಅಭಿವೃದ್ಧಿ ನಿಗಮದ(ಕಿಯೋನಿಕ್ಸ್) ವ್ಯವಸ್ಥಾಪಕ ನಿರ್ದೇಶಕ ಸಂಗಪ್ಪ ಲಂಚಕ್ಕಾಗಿ ಬಾಕಿ ಬಿಲ್ ಪಾವತಿಯನ್ನು ತಡೆಹಿಡಿದು ವೆಂಡರ್ ಗಳಿಗೆ ಕಿರುಕುಳ ನೀಡುತ್ತಿದ್ದಾರೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಕಿಯೋನಿಕ್ಸ್ ವೆಂಡರ್ ದಾರರ ವೆಲ್ಫೇರ್ ಅಸೋಸಿಯೇಷನ್ ಸದಸ್ಯರು ಧರಣಿ ಸತ್ಯಾಗ್ರಹ ನಡೆಸಿದರು.

ಶನಿವಾರ ನಗರದ ಫ್ರೀಡಂ ಪಾರ್ಕಿನ ಮೈದಾನದಲ್ಲಿ ಜಮಾಯಿಸಿದ ವೆಂಡರ್ ದಾರರು, ಕಿಯೋನಿಕ್ಸ್ ವ್ಯವಸ್ಥಾಪಕ ನಿರ್ದೇಶಕ ಸಂಗಪ್ಪ ಶೇ.12ರಷ್ಟು ಲಂಚದ ಬೇಡಿಕೆ ಇಟ್ಟು ಇಡೀ ನಿಗಮವನ್ನು ಸಮಸ್ಯೆಗೆ ಸಿಲುಕಿಸಿದ್ದು, ಈ ಸಂಬಂಧ ತನಿಖೆ ನಡೆಸಲು ರಾಜ್ಯ ಸರಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.

ಬಿಲ್ ಪಾವತಿಗೆ ಶೇಕಡ 12ರಷ್ಟು ಲಂಚ ಕೊಡಿ ಎಂಬ ಬೇಡಿಕೆಯನ್ನು ನಮ್ಮ ಮುಂದಿಟ್ಟರು. ನಾವು ನಿರಾಕರಿಸಿದ್ದಕ್ಕೆ ಬಿಲ್ ತಡೆಹಿಡಿದು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ ಅವರು,ಕಿಯೋನಿಕ್ಸ್ ಗೆ ಸರಕು ಮತ್ತು ಸೇವೆಗಳನ್ನು ಒದಗಿಸುವ ವೆಂಡರ್ ಗಳು ಶೇ 5ರಷ್ಟು ಶುಲ್ಕ ಪಾವತಿಸುತ್ತಾರೆ. ಅದೇ ಮೊತ್ತವನ್ನು ಸಂಸ್ಥೆಯ ಸಿಬ್ಬಂದಿಯ ವೇತನ, ಭತ್ಯೆ ಮತ್ತು ಇತರ ವೆಚ್ಚಗಳಿಗೆ ಬಳಸಲಾಗುತ್ತಿದೆ.

ಈಗ ದಿಢೀರನೆ ಶೇ 12ರಷ್ಟು ಲಂಚದ ಬೇಡಿಕೆ ಇಟ್ಟು ಇಡೀ ನಿಗಮವನ್ನು ಸಮಸ್ಯೆಗೆ ಸಿಲುಕಿಸಿದ್ದಾರೆ. 450 ಮಂದಿ ವೆಂಡರ್‌ ಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಇದಕ್ಕೆ ಕಿಯೋನಿಕ್ಸ್ ವ್ಯವಸ್ಥಾಪಕ ನಿರ್ದೇಶಕರೇ ಕಾರಣ ಎಂದು ಆರೋಪಿಸಿದರು.

ಅಕೌಂಟೆಂಟ್ ಜನರಲ್ ವರದಿಯನ್ನು ಮುಂದಿಟ್ಟುಕೊಂಡು ಮೂರನೇ ವ್ಯಕ್ತಿಯ ತಪಾಸಣೆ ಹೆಸರಿನಲ್ಲಿ ಬಿಲ್ ಪಾವತಿ ವಿಳಂಬ ಮಾಡುತ್ತಿದ್ದಾರೆ. ಯಾವುದೇ ವೆಂಡರ್ ಗಳು ಅಕ್ರಮ ಎಸಗಿದ್ದರೆ, ತಪ್ಪು ಮಾಡಿದ್ದರೆ ಅವರನ್ನು ಕಪ್ಪುಪಟ್ಟಿಗೆ ಸೇರಿಸಲಿ. ಎಲ್ಲ ಕ್ರಮಕ್ಕೂ ಸಂಘ ಬೆಂಬಲ ನೀಡುತ್ತದೆ. ಆದರೆ, ಮೂರನೇ ವ್ಯಕ್ತಿ ತಪಾಸಣೆ ಮುಗಿದು, ವರದಿ ಸಲ್ಲಿಸಿದ ಪ್ರಕರಣಗಳಲ್ಲೂ ಬಿಲ್ ತಡೆ ಹಿಡಿದು ಸತಾಯಿಸುತ್ತಿರುವುದರ ಹಿಂದೆ ಯಾವ ಉದ್ದೇಶವಿದೆ ಎಂದು ಅವರು ಪ್ರಶ್ನಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News