ಕಷ್ಟ-ನಷ್ಟ ಆಲಿಸದ ಪ್ರಧಾನಿ ಬಗ್ಗೆ ಆರ್.ಅಶೋಕ್ ಮಾತಾಡಲಿ: ಕಾಂಗ್ರೆಸ್
ಬೆಂಗಳೂರು: ‘ಅಧಿಕಾರವೆಂದರೆ ಲೂಟಿಗೆ ಸಿಗುವ ಅವಕಾಶ ಎಂದು ತಿಳಿದಿರುವ ಬಿಜೆಪಿಗೆ ಅಧಿಕಾರವೆಂದರೆ ಜನರ ನೋವಿಗೆ ಹೆಗಲಾಗುವ ಹೊಣೆಗಾರಿಕೆ ಎನ್ನುವುದು ತಿಳಿದಿಲ್ಲ. ಆರ್.ಅಶೋಕ್ ಅವರೇ, ಪ್ರಜಾಪ್ರಭುತ್ವದ ಆಶಯಗಳನ್ನು ಗಾಳಿಗೆ ತೂರಿ ಆಪರೇಷನ್ ಕಮಲದ ಮೂಲಕ ಅಧಿಕಾರ ಪಡೆದ ತಮ್ಮ ಮಾಜಿ ಸಿಎಂ ಹೇಗೆ ವರ್ತಿಸಿದ್ದರು ಎಂಬುದನ್ನು ಕಣ್ತುಂಬಿಕೊಳ್ಳಿ’ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ಮಂಗಳವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಕಾಂಗ್ರೆಸ್, ನಾವು ಜನರಿಂದ ಅಧಿಕಾರಕ್ಕೆ ಬಂದಿದ್ದೇವೆ, ಜನರೇ ನಮ್ಮ ಮಾಲಕರು, ಜನಸೇವೆಯೇ ನಮ್ಮ ಕರ್ತವ್ಯ. ಬೇಕಿದ್ದರೆ ಆರ್ ಅಶೋಕ್ ಅವರೂ ಜನತಾ ದರ್ಶನಕ್ಕೆ ಬಂದು ತಮ್ಮ ಪಕ್ಷದೊಳಗಿನ ಕಿರುಕುಳದ ನೋವನ್ನು ಹೇಳಿಕೊಳ್ಳಬಹುದು. ನಮ್ಮ ಸರಕಾರ ಸರ್ವರ ಹಿತ ಬಯಸುತ್ತದೆ’ ಎಂದು ತಿಳಿಸಿದೆ.
‘ಆರ್. ಅಶೋಕ್ ಅವರೇ, ಜನರೆಂದರೆ ಮಾರು ದೂರ ಓಡುವ ಪ್ರಧಾನಿ ಮೋದಿಗೆ ಮೊದಲು ಜನತಾ ದರ್ಶನ ಮಾಡಲು ಹೇಳಿ. ಅದು ಸಾಧ್ಯವಿಲ್ಲ ಎಂದಾದರೆ ಕನಿಷ್ಠ ಪಕ್ಷ ‘ಪತ್ರಕರ್ತರ ದರ್ಶನ’ವನ್ನದರೂ ಮಾಡಲು ಹೇಳಿ. ಕೇವಲ ಕ್ಯಾಮರಾ ದರ್ಶನ ಮಾಡುವುದರಿಂದ ಜನರಿಗೆ ಯಾವ ಪ್ರಯೋಜನವೂ ಇಲ್ಲ. ಈ ಹತ್ತು ವರ್ಷಗಳಲ್ಲಿ ಒಂದೂ ಪತ್ರಿಕಾಗೋಷ್ಠಿ ನಡೆಸಲಾಗದ, ಜನಸಾಮಾನ್ಯರ ದರ್ಶನ ಮಾಡಿ ಕಷ್ಟ ನಷ್ಟ ಆಲಿಸದ ಪ್ರಧಾನಿ ಬಗ್ಗೆ ಅಶೋಕ್ ಮಾತಾಡಲಿ. ಜನತಾ ದರ್ಶನವಿರಲಿ, ಸಿಎಂ ಆಗಿದ್ದಾಗ ಬಿಎಸ್‍ವೈ ಬೊಮ್ಮಾಯಿಯವರಿಗೆ ದರ್ಶನ ಕೊಡದ ಪ್ರಧಾನಿ ಬಗ್ಗೆ ಮಾತಾಡಲಿ’ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
‘ಜನತಾ ದರ್ಶನವನ್ನು ಟೀಕಿಸಿದ ಆಕ್ಸಿಡೆಂಟಲ್ ವಿಪಕ್ಷ ನಾಯಕ ಆರ್.ಅಶೋಕ್ ಅವರೇ, ನಿಮ್ಮ ಆಡಳಿತದಲ್ಲಿ ಇದ್ದಿದ್ದು ಶೇ.40ರಷ್ಟು ಕಮಿಷನ್ ದರ್ಶನವಲ್ಲವೇ?, ನಿಮ್ಮ ಆಡಳಿತದಲ್ಲಿ ಒಂದೇ ಒಂದು ದಿನವೂ ಜನರ ನೋವಿಗೆ ಕಿವಿಯಾಗುವ ಕೆಲಸ ಮಾಡಲಿಲ್ಲವೇಕೆ?. ಬಿಜೆಪಿಗೆ ಜನಪರವಾದ ಕೆಲಸಗಳನ್ನು ಮಾಡುವುದೂ ತಿಳಿದಿಲ್ಲ, ಬೇರೆಯವರು ಮಾಡುವುದನ್ನು ನೋಡಿ ಸಹಿಸುವುದಕ್ಕೂ ಆಗುವುದಿಲ್ಲ ಎಂಬುದಕ್ಕೆ ಆರ್.ಅಶೋಕ್ ಅವರ ಮಾತುಗಳೇ ನಿದರ್ಶನ’ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.