×
Ad

ಆರು ತಿಂಗಳಲ್ಲಿ ಸರಕಾರ ಜಾರಿಗೊಳಿಸಿದ ಯೋಜನೆಗಳ ವರದಿ ನೀಡಲಿ: ಮಾಜಿ ಸಿಎಂ ಬೊಮ್ಮಾಯಿ

Update: 2023-12-02 20:33 IST

ಬೆಂಗಳೂರು: ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಆರು ತಿಂಗಳಲ್ಲಿ ಬಜೆಟ್‍ನಲ್ಲಿ ಘೋಷಿಸಿರುವ ಎಷ್ಟು ಅಭಿವೃದ್ದಿ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ವರದಿ ನೀಡಲಿ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸರಕಾರ ಬಂದು ಆರು ತಿಂಗಳಾಯಿತು. ಈ ಸರಕಾರದ ಬಗ್ಗೆ ಜನರು ಭ್ರಮ ನಿರಸನಗೊಂಡಿದ್ದಾರೆ. ಇವರು ಪದೇ ಪದೇ ಗ್ಯಾರೆಂಟಿಗಳ ಬಗ್ಗೆ ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ. ವಾಸ್ತವದಲ್ಲಿ ಜನರಿಗೆ ಗ್ಯಾರೆಂಟಿ ಯೋಜನೆಗಳು ತಲುಪುತ್ತಿಲ್ಲ ಎಂದು ದೂರಿದರು.

ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಹತ್ತು ಕೆಜಿ ಅಕ್ಕಿ ಕೊಡುವ ಬದಲು ಕೇಂದ್ರ ಸರಕಾರ ನೀಡುವ ಐದು ಕೆಜಿ ಅಕ್ಕಿಯನ್ನೂ ಕೊಡುತ್ತಿಲ್ಲ. ಅದರ ಹೊರತಾಗಿ ಕಾಳ ಸಂತೆಯಲ್ಲಿ ಮುಕ್ತವಾಗಿ ಮಾರಾಟ ಮಾಡುತ್ತಿದ್ದಾರೆ. ಅದನ್ನು ತಡೆಯಲು ಸರಕಾರ ಯಾವುದೇ ಕ್ರಮ ಕೈಗೊಳ್ಳದಿರುವುದು, ಸರಕಾರ ಶಾಮೀಲಾಗಿದೆ ಅಂತ ಅನುಮಾನ ಬರುತ್ತಿದೆ ಎಂದು ಅವರು ಆರೋಪಿಸಿದರು.

ಗೃಹಲಕ್ಷ್ಮಿ ಸಮೀಕ್ಷೆ ಮಾಡಿದರೆ ಮೊದಲ ತಿಂಗಳು ಕೇವಲ ಶೇ.35ರಷ್ಟು ಜನರಿಗೆ ಹಣ ಬಂದಿದೆ. ನಂತರದ ಕಂತುಗಳು ಸರಿಯಾಗಿ ಬಂದಿಲ್ಲ. ಗೃಹ ಲಕ್ಷ್ಮಿಯರ ಜೊತೆ ಸರಕಾರ ಚೆಲ್ಲಾಟವಾಡುತ್ತಿದೆ. ವಿದ್ಯುತ್ ವಿಚಾರದಲ್ಲಂತೂ ರೈತರಿಗೆ ಸರಿಯಾಗಿ ವಿದ್ಯುತ್ ನೀಡುತ್ತಿಲ್ಲ. ಮುಖ್ಯಮಂತ್ರಿ ಐದು ಗಂಟೆ ನಿರಂತರ ವಿದ್ಯುತ್ ಕೊಡುವುದಾಗಿ ಹೇಳಿದ್ದಾರೆ. ಆದರೆ, ರೈತರಿಗೆ ಕೇವಲ 3 ಗಂಟೆ ಮಾತ್ರ ವಿದ್ಯುತ್ ಸಿಗುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದರು.

ಸಾಲದ ಪ್ರಮಾಣ ಹೆಚ್ಚಾಗಿದೆ: ಗ್ಯಾರೆಂಟಿ ಯೋಜನೆಗಳಿಗೆ ಎಸ್ಸಿಪಿ, ಟಿಎಸ್‍ಪಿ ಯೋಜನೆಗಳ 11ಸಾವಿರ ಕೋಟಿ ರೂ. ವರ್ಗಾವಣೆ ಮಾಡಿದ್ದಾರೆ. ರಾಜ್ಯದ ಸಾಲದ ಪ್ರಮಾಣ ಹೆಚ್ಚಾಗಿದೆ. ರಿಸರ್ವ್ ಬ್ಯಾಂಕ್ ಸಾಲದ ಸುಳಿಗೆ ಸಿಲುಕಿರುವ ರಾಜಸ್ತಾನ, ಪಂಜಾಬ್ ಸೇರಿದಂತೆ ಮೂರು ರಾಜ್ಯಗಳಿಗೆ ಎಚ್ಚರಿಕೆ ಕೊಟ್ಟಿದೆ. ನಮ್ಮ ರಾಜ್ಯವನ್ನು ಆ ಪರಿಸ್ಥಿತಿಗೆ ತೆಗೆದುಕೊಂಡು ಹೋಗಬೇಡಿ ಎಂದು ಅವರು ಸಲಹೆ ನೀಡಿದರು.

ವರ್ಗಾವಣೆ ದಂಧೆ: ರಾಜ್ಯದಲ್ಲಿ ಭ್ರಷ್ಟಾಚಾರ ಎಲ್ಲ ಹಂತದಲ್ಲೂ ನಡೆಯುತ್ತಿದೆ. ಸಣ್ಣ ಪುಟ್ಟ ಕೆಲಸ ಮಾಡಿಕೊಡುವಲ್ಲಿಯೂ ವಸೂಲಿ ನಡೆಯುತ್ತಿದೆ. ವರ್ಗಾವಣೆ ನಿರಂತರವಾಗಿ ನಡೆಯುತ್ತಿದೆ. ನಮ್ಮ ಮೇಲೆ 40 ಪರ್ಸೆಂಟ್ ಆರೋಪ ಮಾಡಿದ್ದರು. ಈಗ 50 ಪರ್ಸೆಂಟ್ ಕಮಿಷನ್ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಅವರು ದೂರಿದರು.

ರೈತರಿಗೆ ಅವಮಾನ: ರೈತರಿಗೆ ಬರ ಪರಿಹಾರಕ್ಕೆ 2 ಸಾವಿರ ರೂ.ನೀಡುತ್ತೇನೆ ಎನ್ನುವುದು ನಾಚಿಕೆಗೇಡು, ಇದು ರೈತರಿಗೆ ಮಾಡುವ ಅವಮಾನ. ನಮ್ಮ ಅವಧಿಯಲ್ಲಿ ಪ್ರವಾಹ ಬಂದಾಗ ಪರಿಹಾರ ನೀಡಿ ನಂತರ ಕೇಂದ್ರದ ಅನುದಾನ ಪಡೆದಿದ್ದೆವು. ಇದು ಮೊದಲಿನಿಂದಲೂ ನಡೆದುಕೊಂಡು ಬಂದಿರುವ ಪದ್ದತಿ. ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ನೀಡುತ್ತಿದ್ದ 4ಸಾವಿರ ರೂ., ಡಿಸೇಲ್ ಸಬ್ಸಿಡಿ, ರೈತರ ಮಕ್ಕಳ ವಿದ್ಯಾನಿಧಿ ನಿಲ್ಲಿಸಲಾಗಿದೆ ಎಂದು ಅವರು ಹೇಳಿದರು.

ಮುಂದಿನವಾರ ಅಧಿವೇಶಕ್ಕೆ: ಆರು ವಾರಗಳ ಹಿಂದೆ ನನಗೆ ಓಪನ್ ಹಾರ್ಟ್ ಸರ್ಜರಿ ಆಗಿದೆ. ಈಗ ನನ್ನ ಆರೋಗ್ಯ ಸುಧಾರಿಸಿದೆ. ಸಾರ್ವಜನಿಕರ ಭೇಟಿ ಮಾಡುತ್ತಿದ್ದೇನೆ. ವೈದ್ಯರ ಸಲಹೆ ಮೇರೆಗೆ ಬೆಳಗಾವಿ ಅಧಿವೇಶನದ ಮೊದಲ ವಾರ ಹಾಜರಾಗುತ್ತಿಲ್ಲ. 2ನೆ ವಾರ ಅಧಿವೇಶನದಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಬೊಮ್ಮಾಯಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News