×
Ad

ಲೋಕಾಯುಕ್ತ ಪ್ರಕರಣ‌ | ತಪ್ಪಿತಸ್ಥ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿಗೆ ಸಚಿವ ಸಂಪುಟ ಸಭೆ ಅನುಮೋದನೆ

Update: 2023-08-10 15:43 IST

ಬೆಂಗಳೂರು, ಆ.10: ಲೋಕಾಯುಕ್ತ ದಾಳಿಗೊಳಗಾಗಿ, ಇಲಾಖಾ ವಿಚಾರಣೆಯಲ್ಲಿಯೂ ತಪ್ಪಿತಸ್ಥರು ಎಂದು ಸಾಬೀತಾದ ಅಧಿಕಾರಿಗಳಿಗೆ ಸರಕಾರಿ ಸೇವೆಯಿಂದ ಕಡ್ಡಾಯ ನಿವೃತ್ತಿ ನೀಡಲು ಸಂಪುಟ ಸಭೆ ನಿರ್ಧರಿಸಿದೆ.

ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ಲೋಕಾಯುಕ್ತ ಪ್ರಕರಣಗಳಲ್ಲಿ ತಪ್ಪಿತಸ್ಥರಾದ ಅಧಿಕಾರಿಗಳ ಮಾಹಿತಿಯನ್ನು ನೀಡಿದರು.

ಲೋಕಾಯುಕ್ತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಡಾ.ಎಂ.ಎಚ್.ನಾಗೇಶ್ ಅವರಿಗೆ ಐದು ವರ್ಷಗಳ ಸರಳ ಸಜೆ ಹಾಗೂ 20 ಲಕ್ಷ ರೂ. ಗಳ ದಂಡವನ್ನು ವಿಧಿಸಿತ್ತು. ಈ ಹಿನ್ನೆಲೆಯಲ್ಲಿ ನಾಗೇಶ್ ಅವರನ್ನು ಸರಕಾರಿ ಸೇವೆಯಿಂದ ವಜಾಗೊಳಿಸಲು ಸಚಿವ ಸಂಪುಟ ನಿರ್ಣಯ ಕೈಗೊಂಡಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.

ಲೋಕಾಯುಕ್ತ ದಾಳಿಗೆ ಒಳಗಾಗಿ, ಇಲಾಖಾ ವಿಚಾರಣೆಯಲ್ಲಿಯೂ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲಾ ಆಸ್ಪತ್ರೆಯ ಸ್ತ್ರೀ ರೋಗ ತಜ್ಞೆ ಡಾ.ಉಷಾ ಎಸ್.ಕದರಮಂಡಲಗಿ ಹಾಗೂ ಇಂದಿರಾ ನಗರದ ಸಿ.ವಿ.ರಾಮನ್ ಸಾರ್ವಜನಿಕ ಆಸ್ಪತ್ರೆಯ ಸ್ತ್ರೀ ರೋಗ ತಜ್ಞೆ ಡಾ.ಎಸ್.ಡಿ.ನಾಗಮಣಿಯನ್ನು ಕಡ್ಡಾಯ ನಿವೃತ್ತಿಗೊಳಿಸಲು ಸಚಿವ ಸಂಪುಟ ನಿರ್ಣಯ ತೆಗೆದುಕೊಂಡಿದೆ ಎಂದು ಅವರು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ಎಸ್.ಎನ್.ಹಳ್ಳಿಗುಡಿ ಎಂಬವರ ವಿರುದ್ಧ ಗದಗ ಜಿಲ್ಲೆಯ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು, ಅವರ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅವರನ್ನು ಸರಕಾರಿ ಸೇವೆಯಿಂದ ವಜಾಗೊಳಿಸಲು ತೀರ್ಮಾನಿಸಲಾಗಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.

ನಾಗೇಶ್ ಹಿನ್ನೆಲೆ: ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಡಾ.ಎಂ.ಎಚ್.ನಾಗೇಶ್, ಈ ಹಿಂದೆ ಹೆಬ್ಬಾಳದಲ್ಲಿರುವ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯಲ್ಲಿ 2007-08ನೆ ಸಾಲಿನಲ್ಲಿ ಲೆಕ್ಕಾಧಿಕಾರಿಯಾಗಿದ್ದಾಗ ಸಂಸ್ಥೆಯ ನೌಕರರ 1 ಕೋಟಿ ರೂ. ಪಿಂಚಣಿ ಮೊತ್ತವನ್ನು ಮ್ಯೂಚಯಲ್ ಫಂಡ್‍ನಲ್ಲಿ ಹೂಡಿಕೆ ಮಾಡಿರುವುದು ಹಾಗೂ ಕೋಟ್ಯಂತರ ಮೌಲ್ಯದ ಯಂತ್ರೋಪಕರಣಗಳನ್ನು ಖರೀದಿಸಿ ಬಳಸದೆ ಹಾಗೆ ಇಟ್ಟುಕೊಂಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು. 

9 ಕ್ರಿಮಿನಲ್ ಪ್ರಕರಣಗಳು ಹಿಂದಕ್ಕೆ ಪಡೆಯಲು ನಿರ್ಧಾರ:

ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿದಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಮೇಕೆದಾಟು ಪಾದಯಾತ್ರೆ ಸಂದರ್ಭದಲ್ಲಿನ 9 ಕ್ರಿಮಿನಲ್ ಪ್ರಕರಣಗಳನ್ನು ಅಭಿಯೋಜನೆಯಿಂದ ಕೈಬಿಡಲು ನಿರ್ಧರಿಸಲಾಗಿದೆ. ಶಾಸಕ ಅಶೋಕ್ ಪಟ್ಟಣ್ ಅರ್ಜಿಯನ್ನು ಆಧರಿಸಿ ಈ ನಿರ್ಣಯ ಕೈಗೊಳ್ಳಲಾಗಿದೆ. ಮೇಕೆದಾಟು ಪಾದಯಾತ್ರೆ ವೇಳೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್ ಮುಖಂಡರ ಮೇಲೆ ಇದ್ದ ಪ್ರಕರಣಗಳು ವಾಪಸ್ ಪಡೆಯಲು ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News